* ಫೆಬ್ರವರಿ 14 ಬಿಡುಗಡೆ *
ಅದು ಅದ್ದೂರಿಯ ತಾಣ ಮತ್ತು ಕಿಕ್ಕಿರಿದ ಜನ ಸಾಗರ. ಅದರ ನಡುವೆ ನಡೆದ ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ಗಣ್ಯರ ಮಹಾಪೂರ..
ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಮೋಹಕ ತಾರೆ ರಮ್ಯಾ ಭಾಗಿಯಾಗಿದ್ದ ಆ ಸಮಾರಂಭದಲ್ಲಿ ಚಿತ್ರತಂಡ ಸಂತಸದಲ್ಲಿ ಮಿಂದೆದ್ದಿತು.
ಅದು ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದ ಹಾಗೂ ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ರಾಜು ಜೇಮ್ಸ್ ಬಾಂಡ್’ ಚಿತ್ರದ ಪ್ರಚಾರದ ಭರಾಟೆಯಾಗಿತ್ತು.
ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ, ನಟಿ ತಪಸ್ವಿನಿ ಶರ್ಮ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಚಿತ್ರದ ತುಣುಕು ಹಾಗೂ ಹಾಡುಗಳನ್ನು ನೋಡಿದರೆ ಚಿತ್ರ ಯಶಸ್ವಿಯಾಗುವ ಎಲ್ಲಾ ಲಕ್ಷಣಗಳಿವೆ. ಹಾಗಾಗಿ ಚಿತ್ರ ಯಶಸ್ಸು ಕಾಣಲಿ ಎಂದು ಗೃಹ ಸಚಿವರು ಶುಭ ಕೋರಿದರು.
ಟ್ರೇಲರ್ ಹಾಗೂ ಹಾಡುಗಳು ಗಮನ ಸೆಳೆಯುವಂತಿವೆ. ಛಾಯಾಗ್ರಹಣ ಸೂಪರ್. ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ರಮ್ಯಾ ಹಾರೈಸಿದರು.
ಒಂದೊಳ್ಳೆ ಸಿನಿಮಾ ಮಾಡಿರುವ ಖುಷಿಯಿದೆ. ದಯವಿಟ್ಟು ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ಕೋರಿದರು.
ಚಿತ್ರವನ್ನು ಜನರ ಮಡಿಲಿಗೆ ಹಾಕುತ್ತಿದ್ದೇವೆ. ಅವರ ಅಭಿಪ್ರಾಯಕ್ಕೆ ಕಾಯುತ್ತಿದ್ದೇವೆ ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ.
ಮುಖ್ಯ ಪಾತ್ರದಲ್ಲಿ ನಟಿಸಿರುವ ಗುರುನಂದನ್ ಹಾಗೂ ಮೃದುಲ ಸಹ ಶುಕ್ರವಾರ ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಬೆಂಬಲವಿರಲಿ ಎಂಬ ಕೋರಿಕೆ ಸಲ್ಲಿಸಿದರು.
ನಾನು ಈ ಚಿತ್ರದಲ್ಲಿ ಟಿ.ಆರ್.ಪಿ ಎಂಬ ಖಾಸಗಿ ವಾಹಿನಿಯ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ನಟ ಚಿಕ್ಕಣ್ಣ ಹೇಳಿದರು. ನಟ ತಬಲ ನಾಣಿ, ಛಾಯಾಗ್ರಾಹಕ ಮನೋಹರ್ ಜೋಶಿ ಚಿತ್ರದ ಕುರಿತು ಮಾತನಾಡಿದರು.
ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಅವರ ಸಂಕಲನವಿರುವ ಚಿತ್ರಕ್ಕೆ ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ.