ನಿರ್ಮಾಪಕರಾದ ನಟರಾಜ್ ಮತ್ತು ಕೋಮಲಾ ನಟರಾಜ್ ಹಾಗೂ ನಿರ್ದೇಶಕ ಗುರುಮೂರ್ತಿ ಸುನಾಮಿ ಸೇರಿದಂತೆ ಸಾಕಷ್ಟು ಹೊಸಬರಿಂದಲೇ ಕೂಡಿದ ‘ಮಾರಕಾಸ್ತ್ರ’ ಈಗ ಫುಲ್ ಸೇಫ್..
ಹೇಗೆಂದರೆ ಚಿತ್ರದ ಹಿಂದಿ ಹಕ್ಕುಗಳು ಭಾರಿ ಎನ್ನುವಂತಹ ಬೆಲೆಗೆ ಮಾರಾಟವಾಗಿರುವುದು ಚಿತ್ರತಂಡ ಹಿರಿ ಹಿರಿ ಹಿಗ್ಗಲು ಕಾರಣವಾಗಿದೆ.
ಹಾಗಾಗಿಯೇ ಚಿತ್ರದ ನಿರ್ದೇಶಕ ಗುರುಮೂರ್ತಿ ಸುನಾಮಿ ಮೊದಲ ಚಿತ್ರದಲ್ಲಿಯೇ ನಿರ್ಮಾಪಕರನ್ನು ಸೇಫ್ ಮಾಡಿದ ಆನಂದದಲ್ಲಿ ತೇಲುತ್ತಿದ್ದಾರೆ.
ಅಂದ ಹಾಗೆ ಆಕ್ಷನ್ ಕ್ವೀನ್ ಮಾಲಾಶ್ರೀ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ ಪ್ರೇಕ್ಷಕರನ್ನು ಮೋಹಕತೆಗೆ ಸೆಳೆವ ಹಾಡು ಇದೆ.
ಅದೇ ಗ್ಲಾಮರ್ ಗಾಡಿ..!
ಚಿತ್ರದಲ್ಲಿರುವ ಈ ಐಟಂ ಸಾಂಗ್ ಬಿಡುಗಡೆ ಮಾಡಿದ ಚಿತ್ರ ತಂಡವು, ವ್ಯಾಪಾರದ ಹೆಗ್ಗಳಿಕೆ ವಿಷಯಗಳನ್ನೂ ಹೇಳಿಕೊಂಡಿತು.
ಮಂಜು ಕವಿ ಬರೆದಿರುವ ಹಾಗೂ ಅನನ್ಯ ಭಟ್ ಹಾಡಿರುವ ‘ಗ್ಲಾಮರ್ ಗಾಡಿ..’ ಹಾಡು ಪೂರ್ತಿಯಾಗಿ ಚಿತ್ರತಂಡವನ್ನೇ ಮೋಡಿ ಮಾಡಿದಂತಿತ್ತು. ಎ2 ಮ್ಯೂಜಿಕ್ ಹೊರತಂದಿರುವ ಈ ಹಾಡಿಗೆ ಚಿತ್ರದಲ್ಲಿ ಹೆಜ್ಜೆ ಹಾಕಿರುವುದು ಹೀನಾ ಎಂ.ಪಾಂಚಾಲ್.
ಚಿತ್ರದ ನಿರ್ಮಾಪಕ ಕಲಾ ರಸಿಕರು. ಅವರಿಗೆ ಸಿಕ್ಕವರು ಬಳ್ಳಾರಿ ಮೂಲದ ವಿಕಲಚೇತನರೂ ಆಗಿರುವ ಗುರುಮೂರ್ತಿ ಸುನಾಮಿ. ಚಿತ್ರದ ಆರಂಭದಲ್ಲಿ ಅಂದುಕೊಂಡಿದ್ದೇ ಬೇರೆ.. ನಂತರದಲ್ಲಿ ಚಿತ್ರದ ಅಗಾಧತೆ ಬೆಳೆದಿದ್ದೇ ಬೇರೆ..
ಹಾಗಾಗಿ ನಿರ್ಮಾಪಕರು ಖುಷಿಯಾಗಿದ್ದಾರೆ. ಮೂಲತಃ ಗಾಯಕರೂ ಆದ ನಟರಾಜ್ ನಾಲ್ಕು ಹಾಡುಗಳನ್ನು ಹಾಡಿರುವುದಲ್ಲದೆ ಚಿತ್ರದಲ್ಲಿ ನಟನೆಯನ್ನೂ ಮಾಡಿರುವುದು ವಿಶೇಷ.
ಇದು ಸಂಪೂರ್ಣ ಕೌಟುಂಬಿಕ ಮತ್ತು ಮನರಂಜನಾತ್ಮಕ ಚಿತ್ರ. ಹಾಗಾಗಿ ಪ್ರತಿಯೊಬ್ಬರು ನೋಡಬಹುದು. ಟೀಸರ್ ಮೂಲಕ ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ ಎಂದರು ನಿರ್ದೇಶಕ ಗುರುಮೂರ್ತಿ ಸುನಾಮಿ.
ಚಿತ್ರದಲ್ಲಿ ಏಳು ಹಾಡುಗಳಿವೆ. ಅದರಲ್ಲಿ ನಾಲ್ಕು ಹಾಡುಗಳನ್ನು ನಿರ್ಮಾಪರೇ ಹಾಡಿದ್ದಾರೆ. ಈ ಐಟಂ ಸಾಂಗ್ ನಾನೇ ಬರೆದಿರುವೆ ಎಂದರು ಸಂಗೀತ ನಿರ್ದೇಶಕ ಮಂಜು ಕವಿ.
ನಿರ್ಮಾಪಕರು ಈಗಾಗಲೇ ಅರ್ಧದಷ್ಟು ಸೇಫ್ ಆಗಿದ್ದಾರೆ. ಮುಂಬೈ ಮೂಲದ ವ್ಯಕ್ತಿಯೊಬ್ಬರು ಈ ಚಿತ್ರದ ಹಿಂದಿ ರೈಟ್ಸ್ ನ್ನು ಭಾರಿ ಮೊತ್ತಕ್ಕೆ ಖರೀದಿಸಿದ್ದಾರೆ ಎಂದು ನೃತ್ಯ ನಿರ್ದೇಶಕ ಹಾಗೂ ಕ್ರಿಯೇಟಿವ್ ಹೆಡ್ ಧನುಕುಮಾರ್ ಮಾಹಿತಿ ನೀಡಿದರು.
ಚಿತ್ರದ ಛಾಯಾಗ್ರಾಹಕ ಅರುಣ್ ಸುರೇಶ್, ಸಂಕಲನಕಾರ ವಿಶ್ವ ಹಾಗೂ ಚಿತ್ರದಲ್ಲಿ ನಟಿಸಿರುವ ಆನಂದ್ ಆರ್ಯ, ರವಿಚೇತನ್, ಮೈಕೊ ನಾಗರಾಜ್, ಮನಮೋಹನ್ ರೈ, ಭರತ್ ಚಿತ್ರದ ಕುರಿತು ಮಾತನಾಡಿದರು. ಆನಂದ್ ಆರ್ಯ ಜೋಡಿಯಾಗಿ ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ.