* ಷಣ್ಮುಖ ಗೋವಿಂದ್ ರಾಜ್ ಚಿತ್ರ ಏಪ್ರಿಲ್ 4ರಂದು ಬಿಡುಗಡೆ *
ವರನಟ ಡಾ.ರಾಜ್ ಕುಮಾರ್ ಅವರ ಮತ್ತೊಬ್ಬ ಮೊಮ್ಮಗ ಕನ್ನಡದ ಬೆಳ್ಳಿ ತೆರೆಯ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.
ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಅವರ ಮಗ ಷಣ್ಮುಖ ಗೋವಿಂದ್ ರಾಜ್ ಈಗ ತೆರೆಯ ಮೇಲೆ ರಾರಾಜಿಸಲು ಸಂಪೂರ್ಣ ಸಜ್ಜುಗೊಂಡಿದ್ದಾರೆ.
ಏಕೆಂದರೆ ಷಣ್ಮುಖ ಅಭಿನಯದ ‘ನಿಂಬಿಯಾ ಬನಾದ ಮ್ಯಾಗ’ ಎಂಬ ಶೀರ್ಷಿಕೆ ಇರುವ ಚಿತ್ರ ಇದೇ ವಾರ ಅಂದರೆ ಏಪ್ರಿಲ್ 4 ರಂದು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ.
ಚಿತ್ರದ ಪುಟ 1 ಬಿಡುಗಡೆಗೆ ಸಜ್ಜಾಗಿದ್ದು, ಈಚೆಗೆ ನಡೆದ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ರಾಜ್ ಕುಟುಂಬದ ಸದಸ್ಯರು ಭಾಗವಹಿಸಿ ಸಂಭ್ರಮ ಹಂಚಿಕೊಂಡರು.
ಷಣ್ಮುಖ ಅವರ ತಂದೆ ಎಸ್.ಎ.ಗೋವಿಂದರಾಜು, ತಾಯಿ ಲಕ್ಷ್ಮಿ ಗೋವಿಂದರಾಜು, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ರಾಜ್ ಪುತ್ರಿ ಪೂರ್ಣಿಮಾ ರಾಜ್ ಕುಮಾರ್ ಹೀಗೆ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡರು.
ಚಿತ್ರದ ನಿರ್ದೇಶಕ ಅಶೋಕ್ ಕಡಬ ಮತ್ತು ಚಿತ್ರವನ್ನು ನಿರ್ಮಾಣ ಮಾಡಿರುವ ವಿ.ಮಾದೇಶ್ ಹಾಗೂ ಇತರ ತಂತ್ರಜ್ಞರು ಈ ಸಂದರ್ಭದಲ್ಲಿ ಹಾಜರಿದ್ದರು.
‘ನಿಂಬಿಯಾ ಬನಾದ ಮ್ಯಾಗ’ ಎಂಬ ಫ್ಯಾಮಿಲಿ ಡ್ರಾಮ ಎರಡು ಭಾಗಗಳಾಗಿ ಸಿನಿ ರಸಿಕರನ್ನು ರಂಜಸಲಿದ್ದು, ಮೊದಲ ಭಾಗ ಈಗ ಬಿಡುಗಡೆಯ ಹಾದಿಯಲ್ಲಿದೆ.
ಎಂಜೀಪಿ ಎಕ್ಸ್. ಎಂಟರ್ ಪ್ರೈಸೆಸ್ ನ ಬ್ಯಾನರ್ ನಡಿ ವಿ ಮಾದೇಶ್ ಈ ಚಿತ್ರವನ್ನು ನಿರ್ಮಿಸಿದ್ದು, ಬಿಡುಗಡೆಗೆ ಮುನ್ನವೇ ಚಿತ್ರವು ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ.
ರಾಜ್ ಸುಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರ ‘ನಂಜುಂಡಿ ಕಲ್ಯಾಣ’ ಚಿತ್ರವು ಫ್ಯಾಮಿಲಿ ಡ್ರಾಮ ಕಥಾವಸ್ತು ಹೊಂದಿತ್ತು ಮಾತ್ರವಲ್ಲ ಹಲವು ದಾಖಲೆಗಳನ್ನು ನಿರ್ಮಿಸಿತ್ತು.
ಈಗ ಪ್ರೇಕ್ಷಕರನ್ನು ನಕ್ಕು ನಗಿಸಲು ಬರುತ್ತಿರುವ ಈ ಚಿತ್ರದ ಬಗ್ಗೆ ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಹಾಗೂ ಕುಟುಂಬ ಅಪಾರ ಭರವಸೆಗಳನ್ನು ಹೊಂದಿದೆ.
ನಿಂಬಿಯಾ ಬನಾದ ಮ್ಯಾಗ.. ಎಂಬ ಶೀರ್ಷಿಕೆಗೆ ಜಾನಪದ ಗೀತೆಯ ಸೊಗಡಿದೆ. ಅದೇ ರೀತಿ ಈ ಚಿತ್ರದ ಕಥೆಯೂ ಮನುಷ್ಯ ಸಂಬಂಧಗಳ ನೆಲೆ ಬೆಲೆಯನ್ನು ಅಭಿವ್ಯಕ್ತಗೊಳಿಸುತ್ತದೆ ಎಂಬ ವಿವರ ನೀಡಿದರು ನಿರ್ದೇಶಕ ಅಶೋಕ್ ಕಡಬ.
ಮುಖ್ಯವಾಗಿ ಈ ಚಿತ್ರದಲ್ಲಿ ರಾಜ್ ಸಂಬಂಧಿ ‘ಮೇಘಮಾಲೆ’ ಖ್ಯಾತಿಯ ಸುನಾದ್ ರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುಮಾರ್ 25 ವರ್ಷಗಳ ಬಳಿಕ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ.
ನಿರ್ಮಾಪಕ ವಿ.ಮಾದೇಶ್ ಅವರಿಗೂ ಈ ಚಿತ್ರ ಹೆಮ್ಮೆಯ ಭಾವಗಳನ್ನು ಮೂಡಿಸಿದ್ದು, ರಾಜ್ ವಂಶದ ಕುಡಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಪ್ರತಿಕ್ರಿಯೆ ನೀಡಿದರು.
ಮಲೆನಾಡ ಭಾಗದ ಬೆಂಗಾಡಿಯಲ್ಲಿ ಮೇಲ್ ಬೈಲ್ ದೊಡ್ಡ ಮನೆಯ ನಾಲ್ಕು ವರ್ಷದ ಮಗು ಅಚ್ಚು (ಅಚ್ಚಣ್ಣ) ಕಾಣೆಯಾಗಿದೆ. ಮಗುವಿನ ತಾಯಿ ಇಂದಲ್ಲ ನಾಳೆ ಮಗು ಬಂದೆ ಬರುತ್ತೆ ಅನ್ನೋ ನಂಬಿಕೆಯಲ್ಲೇ ಕಾಯುತ್ತಿದ್ದಾಳೆ. ಕಾಲ ಉರುಳಿದಂತೆ 25 ವರ್ಷದ ನಂತರ ಮೇಲ್ ಬೈಲ್ ದೊಡ್ಡಮನೆಯಲ್ಲಿ ಸಂತೋಷದ ವಾತಾವರಣ. ಕಾರಣ ಕಳೆದು ಹೋದ ಮಗ ಅಚ್ಚಣ್ಣ ಬಂದಿದ್ದಾನೆ. ಮುಂದೆ ಏನೂ ಎಂಬುದು ‘ನಿಂಬಿಯಾ ಬನಾದ ಮ್ಯಾಗ – ಪೇಜ್ – 1’ ಚಿತ್ರದ ಕಥಾ ಸಾರಾಂಶ.
ಭಾಗ 2. ಸಹ ಬರಲಿದೆ. ಷಣ್ಮುಖ ಜೋಡಿಯಾಗಿ ತನುಶ್ರೀ ನಟಿಸಿದ್ದಾರೆ. ಆರೋನ್ ಕಾರ್ತಿಕ್ ಸಂಗೀತ ನೀಡಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಪಳನಿ ಡಿ ಸೇನಾಪತಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿದ್ದು ಕಾಂಚನಹಳ್ಳಿ ಛಾಯಾಗ್ರಹಣ, ರವಿತೇಜ ಸಂಕಲನ ಹಾಗೂ ಮದನ್ ಹರಿಣಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.