ಕನ್ನಡದ ಸೆನ್ ಸೆಷನಲ್ ಸ್ಟಾರ್ ಕೋಮಲ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿ ಸೂಪರ್ ಡೂಪರ್ ಹಿಟ್ ಆಗಿದ್ದ ನಮೋ ಭೂತಾತ್ಮ ಚಿತ್ರದ ಭಾಗ 2 ಕೂಡ ಸಿದ್ಧಗೊಂಡಿದ್ದು, ಅದರ ಟೀಸರ್ ಬಿಡುಗಡೆಯಾಗಿದೆ.
ಈಚೆಗೆ ನಡೆದ ಅದ್ದೂರಿ ಸಮಾರಂಭದಲ್ಲಿ ಧ್ರುವ ಸರ್ಜಾ ‘ನಮೋ ಭೂತಾತ್ಮ-2’ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಅಂದ ಹಾಗೆ ಹೆಸರಾಂತ ನೃತ್ಯ ನಿರ್ದೇಶಕ ಮುರಳಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅವರ ಸಂಬಂಧಿ ಸಂತೋಷ್ ಶೇಖರ್ ನಿರ್ಮಾಣ ಮಾಡಿದ್ದಾರೆ.
ಟೀಸರ್ ಬಿಡುಗಡೆ ಮಾಡಿದ ಬಳಿಕ ‘ನಾನು ಮೊದಲಿನಿಂದಲೂ ಕೋಮಲ್ ಅವರ ಅಭಿಮಾನಿ’ ಎಂದರು ಧ್ರುವ ಸರ್ಜಾ. ಅವರ ಅಭಿನಯದ ಎಲ್ಲಾ ಚಿತ್ರಗಳನ್ನು ನೋಡಿರುವೆ ಮತ್ತು ಈ ಚಿತ್ರದ ಬಿಡುಗಡೆಗೂ ಕಾಯುತ್ತಿರುವೆ ಎಂದರು.
ಮುರಳಿ ಮಾಸ್ಟರ್ ಸಹ ನನ್ನ ಚಿತ್ರಗಳ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಅವರ ನಿರ್ದೇಶನದ ಈ ಚಿತ್ರ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು ಧ್ರುವ ಸರ್ಜಾ.
ಹಿಂದೆ ‘ನಮೋ ಭೂತಾತ್ಮ’ ಚಿತ್ರವನ್ನು ನಾನೇ ನಿರ್ಮಾಣ ಮಾಡಿದ್ದೆ ಮತ್ತು ಮುರಳಿ ಮಾಸ್ಟರ್ ಅದನ್ನು ನಿರ್ದೇಶನ ಮಾಡಿದ್ದರು. ಆ ಚಿತ್ರ ಬಿಡುಗಡೆಯ ಏಳೆಂಟು ವರ್ಷಗಳ ಬಳಿಕ ಅದರ ಮುಂದುವರೆದ ಭಾಗ ಬಿಡುಗಡೆ ಕಾಣುತ್ತಿದೆ ಎಂದರು ಕೋಮಲ್ ಕುಮಾರ್.
ಮೊದಲ ಭಾಗದಲ್ಲಿ ಭಯ ಹುಟ್ಟಿಸುವ ಸನ್ನಿವೇಶಗಳು ಹೆಚ್ಚಾಗಿದ್ದವು. ಆದರೆ ಈ ಚಿತ್ರದಲ್ಲಿ ಹಾಸ್ಯ ಅರ್ಧ ಭಾಗದಷ್ಟಿರುತ್ತದೆ ಎಂದರು.
ಧ್ರುವ ಸರ್ಜಾ ಅವರಿಗೆ ನಾನೂ ಅಭಿಮಾನಿ. ಅವರ ಸಾಹಸ ಅದ್ಭುತವಾಗಿರುತ್ತದೆ. ಟೀಸರ್ ಬಿಡುಗಡೆ ಮಾಡಿದ ಅವರಿಗೆ ಧನ್ಯವಾದ ತಿಳಿಸುವೆ ಎಂದರು ಕೋಮಲ್ ಕುಮಾರ್.
ಮುಖ್ಯ ಪಾತ್ರದಲ್ಲಿರುವ ನಟಿ ಲೇಖಾ ಚಂದ್ರ, ಇತರ ಪಾತ್ರಗಳಲ್ಲಿರುವ ಜಿ.ಜಿ, ಮೋನಿಕಾ, ವರುಣ್ ರಾಜ್ ಹಾಗೂ ಚಿತ್ರದ ನಿರ್ಮಾಪಕ ಸಂತೋಷ್ ಶೇಖರ್ ಹಾಜರಿದ್ದರು.