🖋ಸಿ. ರುದ್ರಪ್ಪ
ಹಿರಿಯ ರಾಜಕೀಯ ವಿಶ್ಲೇಷಕರು
ಆಡಳಿತಕ್ಕೆ ಮೇಜರ್ ಸರ್ಜರಿ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಒತ್ತಡದಲ್ಲಿ ಸಿಲುಕಿದ್ದಾರೆ.
ಯಾವುದೇ ನೂತನ ಮುಖ್ಯಮಂತ್ರಿ ತಮ್ಮ ವೇಗ ಮತ್ತು ದೃಷ್ಟಿಕೋನಕ್ಕೆ ತಕ್ಕಂತೆ ಕೆಲಸ ಮಾಡುವ ಅಧಿಕಾರಿಗಳನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿಕೊಳ್ಳುವ ಮೂಲಕ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡುವುದು ಸಹಜ ಪ್ರಕ್ರಿಯೆ.
ಆದರೆ ಬೊಮ್ಮಾಯಿಯವರಿಗೆ ಒಂದೂವರೆ ತಿಂಗಳಾದರೂ ಅದು ಸಾಧ್ಯವಾಗಿಲ್ಲ.ಅದಕ್ಕಿಂತ ಮೊದಲು ಮುಖ್ಯಮಂತ್ರಿಯವರ ಕಾರ್ಯಾಲಯದಲ್ಲಿ(ಸಿಎಂಒ)ತಮ್ಮ ವಿವೇಚನೆಗೆ ಅನುಗುಣವಾಗಿ ಸ್ವತಂತ್ರ ಮತ್ತು ಪರಿಪೂರ್ಣ ತಂಡವನ್ನು ರಚಿಸಿಕೊಳ್ಳುವುದೂ ಸಾಧ್ಯವಾಗಿಲ್ಲ.ಸಾಮಾನ್ಯವಾಗಿ ಒಂದೇ ಪಕ್ಷದ ಸರ್ಕಾರದಲ್ಲಿ ಮುಖ್ಯಮಂತ್ರಿಗಳು ಬದಲಾದಾಗ ಕೆಲವು ಅದಕ್ಷ ಮತ್ತು ಭ್ರಷ್ಟರನ್ನು ಬಿಟ್ಟು ಬಹುತೇಕ ಹಳೆಯ ತಂಡವನ್ನೇ ಮುಂದುವರಿಸುವುದು ವಾಡಿಕೆ.ಈ ಹಿಂದೆ ಯಡಿಯೂರಪ್ಪನವರ ನಂತರ ಡಿ ವಿ ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾದಾಗ ಸಿಎಂ ಕಚೇರಿಯಲ್ಲಿ ಬಹುತೇಕ ಹಳೆಯ ತಂಡವೇ ಮುಂದುವರಿದಿತ್ತು.
ಆದರೆ ಈ ಬಾರಿ ಸಂಪೂರ್ಣವಾಗಿ ಹೊಸ ತಂಡವನ್ನೇ ರಚಿಸಿಕೊಳ್ಳುವಂತೆ ಆರ್ ಎಸ್ ಎಸ್ ಸ್ಪಷ್ಟವಾಗಿ ಸೂಚಿಸಿದೆ ಎನ್ನಲಾಗಿದೆ.ಸಂಘ ಪರಿವಾರದ ಸಿದ್ದಾಂತ ಮತ್ತು ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರು ಇದ್ದರೆ ಉತ್ತಮ ಎಂಬ ಆಶಯ ವ್ಯಕ್ತವಾಗಿದೆ.
ಮುಖ್ಯಮಂತ್ರಿಯವರ ಕಾರ್ಯಾಲಯದಲ್ಲಿ ಮೂರನೇ ಒಂದು ಭಾಗದಷ್ಟು ಸಿಬಂದಿಯನ್ನು ಭರ್ತಿ ಮಾಡಲು ಕೂಡ ಇನ್ನೂ ಸಾಧ್ಯವಾಗಿಲ್ಲ.ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ,ಜಂಟಿ ಕಾರ್ಯದರ್ಶಿ,ಕಾರ್ಯದರ್ಶಿ,ವಿಶೇಷ ಕರ್ತವ್ಯಾಧಿಕಾರಿ ಸೇರಿದಂತೆ ಕೇವಲ ಏಳು ಹಿರಿಯ ಅಧಿಕಾರಿಗಳು ಮಾತ್ರ ನೇಮಕಗೊಂಡಿದ್ದಾರೆ.ಅದರಲ್ಲಿ ಇಬ್ಬರನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನಿವಾಸದಲ್ಲಿ ಕರ್ತವ್ಯದ ಮೇಲೆ ನಿಯೋಜಿಸಲಾಗಿದೆ.
ಹೀಗೆ ನೇಮಕಗೊಂಡವರೆಲ್ಲರೂ ಮುಖ್ಯಮಂತ್ರಿಯವರಿಗೆ ನೇರವಾಗಿ ನಿಷ್ಠರಾದವರೇನಲ್ಲ.ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಬಿಬಿಎಂಪಿ ಆಯುಕ್ತರಾಗಿದ್ದಾಗ ಹಿರಿಯ ಸಚಿವ ಆರ್ ಅಶೋಕ್ ಅವರಿಗೆ ಅನ್ಯೋನ್ಯವಾಗಿದ್ದ ರು.ಹೀಗಾಗಿ ಅವರ ನೇಮಕದಲ್ಲಿ ಅಶೋಕ್ ಅವರ ಪ್ರಭಾವ ಕೆಲಸ ಮಾಡಿದೆ ಎನ್ನಲಾಗಿದೆ.ಮುಖ್ಯ ಮಂತ್ರಿಯವರ ಕಾರ್ಯದರ್ಶಿ ವಿ ಪೊನ್ನುರಾಜ್ ,ಈ ಹಿಂದೆ ಮಂಗಳೂರು ಜಿಲ್ಲಾಧಿಕಾರಿಯಾಗಿ ಮತ್ತು ಡಿ ವಿ ಸದಾನಂದಗೌಡರು ಕೇಂದ್ರ ಮಂತ್ರಿಯಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿ ಸಂಘಪರಿವಾರದ ಅಗತ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು ಅವರ ನೇಮಕದ ಹಿಂದೆ ಆರ್ ಎಸ್ ಎಸ್ ಪ್ರಭಾವ ಇದ್ದರೆ ಆಶ್ಚರ್ಯಪಡಬೇಕಿಲ್ಲ. ಮತ್ತೊಬ್ಬ ಕಾರ್ಯದರ್ಶಿ ಜಗದೀಶ್ ಉಡುಪಿ ಜಿಲ್ಲಾಧಿಕಾರಿಯಾಗಿದ್ದರು. ಬೊಮ್ಮಾಯಿ ಈ ಹಿಂದೆ ಉಡುಪಿ ಉಸ್ತುವಾರಿ ಸಚಿವರಾಗಿದ್ದರು.
ಆಗಿನಿಂದಲೂ ಜಗದೀಶ್ , ಬೊಮ್ಮಾಯಿಯವರ ವಿಶ್ವಾಸವನ್ನು ಗಳಿಸಿದ್ದಾರೆ. ಜೊತೆಗೆ ಕರಾವಳಿಯಲ್ಲಿ ಹಾಸು ಹೊಕ್ಕಾಗಿರುವ ಸಂಘ ಪರಿವಾರದ ವಿಚಾರಗಳಿಗೂ ಒಗ್ಗಿಕೊಂಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಬಿಜೆಪಿ ವಕ್ತಾರರೊಬ್ಬರು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ. ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ದೊಡ್ಡ ಮಟ್ಟದ ವರ್ಗಾವಣೆ ಆಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ಮುಖ್ಯಮಂತ್ರಿಯವರು ಕೇವಲ 8-10 ಅಧಿಕಾರಿಗಳ ವರ್ಗಾವಣೆ ಬಿಟ್ಟರೆ ಇನ್ನೂ ಮೇಜರ್ ಸರ್ಜರಿಗೆ ಕೈ ಹಾಕಿಲ್ಲ. ಅಧಿಕಾರಶಾಹಿಯ ಅಮೂಲಾಗ್ರ ಬದಲಾವಣೆಯಾಗಬೇಕು ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ ಅವರ ಅವಧಿಯಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ಅಧಿಕಾರಿಗಳ ಎತ್ತಂಗಡಿಯಾಗಬೇಕು ಎಂಬ ಒತ್ತಡ ಪಕ್ಷದ ವಲಯದಿಂದ ಬಂದಿದೆ ಎನ್ನಲಾಗಿದೆ.
ಇದರ ಜೊತೆಗೆ ಕೆಲವು ನೂತನ ಸಚಿವರು ತಮಗೆ ಅನುಕೂಲವಾಗುವ ಅಧಿಕಾರಿಗಳು ಬೇಕೆಂಬ ಬೇಡಿಕೆ ಇಟ್ಟಿದ್ದಾರೆ.ಅಪ್ಪಟ ಪ್ರಾಮಾಣಿಕ ಸಚಿವರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಬಿ ಸಿ ನಾಗೇಶ್ ಪ್ರಾಮಾಣಿಕ ಅಧಿಕಾರಿಗಳಿಗಾಗಿ ಹುಡುಕುತ್ತಿದ್ದಾರೆ. ಸಾವಿರಾರು ಕೋಟಿ ಬಜೆಟ್ಟಿನ ಸಮಾಜ ಕಲ್ಯಾಣ ಇಲಾಖೆಯ ಕೆಲವು ಉನ್ನತ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರದ ಕತೆಗಳನ್ನು ಕೇಳಿ ಪೂಜಾರಿಯವರು ಗಾಬರಿಯಾಗಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿಯವರ ಅವಧಿಯಲ್ಲಿ ಒಪ್ಪಂದ ಅಥವಾ ಕಮಿಟ್ ಮೆಂಟ್ ಆಗಿರುವ ಭಾರೀ ಬೆಲೆ ಬಾಳುವ ಕೆಲವು ಫೈಲುಗಳು ಇನ್ನೂ ಬಾಕಿ ಇವೆ. ಅವುಗಳಿಗೆ ಒಂದು ಮುಕ್ತಿ ದೊರೆಯುವವರೆಗೂ ಯಥಾಸ್ಥಿತಿ ಮುಂದುವರಿಸಬೇಕು. ಈಗಲೇ ದೊಡ್ಡ ಮಟ್ಟದ ವರ್ಗಾವಣೆ ಬೇಡ ಎಂಬ ಒತ್ತಡವೂ ಬಂದಿದೆ.ಆದ್ದರಿಂದ ಮುಖ್ಯಮಂತ್ರಿಯವರು ಸಂಕಟದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.ಈ ಹಿಂದೆ ಅಜ್ಞಾತ ಸ್ಥಳಗಳಿಂದ ಅಥವಾ ಅದೃಶ್ಯ ವ್ಯಕ್ತಿಗಳಿಂದ ಬರುತ್ತಿದ್ದ ಸೂಚನೆ ಅಥವಾ ಸಂಕೇತಗಳಿಗೆ(ಕೋಡ್ ವರ್ಡ್ಸ್) ಅನುಗುಣವಾಗಿ ಮುಖ್ಯ ಮಂತ್ರಿ ಕಾರ್ಯಾಲಯ ಪ್ರಮುಖ ಕಡತಗಳನ್ನು ಸಂಪುಟ ಸಭೆಯ ಕಾರ್ಯ ಕಲಾಪ ಪಟ್ಟಿಗೆ ಸೇರಿಸುವ ಸುಂದರವಾದ ವ್ಯವಸ್ಥೆ ಇತ್ತು. ಆದರೆ ನೂತನ ಮುಖ್ಯ ಮಂತ್ರಿಯವರು ಯಾವುದೇ ಅನೌಪಚಾರಿಕ, ಖಾಸಗಿ ಅಥವಾ ಆಫ್ ದಿ ರೆಕಾರ್ಡ್ ಮಾತುಕತೆಗೆ ಆಸ್ಪದ ನೀಡುತ್ತಿಲ್ಲ. ಎಲ್ಲವೂ ಅಧಿಕೃತವಾಗಿ ಮತ್ತು ನೇರಾ ನೇರ ನಡೆದುಕೊಂಡು ಹೋಗುತ್ತಿದೆ. ಇದರಿಂದಾಗಿ ವಿವಾದಾತ್ಮಕ ಅಥವಾ ಆಕರ್ಷಕ ಫೈಲುಗಳ ಬೆನ್ನು ಹತ್ತಿರುವ ಪುಡಾರಿಗಳು ಮತ್ತು ಪವರ್ broker ಗಳು ಕಂಗಾಲಾಗಿದ್ದಾರೆ. ಇಂತಹ ಫೈಲುಗಳು ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಸಲ್ಲಿಕೆಯಾಗದೆ ಇಲಾಖಾ ಮುಖ್ಯಸ್ಥರ ಮೇಜಿನ ಮೇಲೆಯೇ ಕೊಳೆಯುತ್ತಿವೆ. ಅಧಿಕಾರಿಗಳ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿಗಳು ಇಡುವ ಮುಂದಿನ ಹೆಜ್ಜೆಯ ಮೇಲೆ ಎಲ್ಲವೂ ಅವಲಂಭಿಸಿದೆ.