Snehapriya.com

June 8, 2025

ಚಾರ್ಲಿ 777 ಚಿತ್ರವಿಮರ್ಶೆ

Social Share :

ರೇಟಿಂಗ್ : 4/5

ಮನ ಮೋಹಕ ಹೃದಯ ವೇದಕ

ಬ್ಲ್ಯಾಕ್ ಅಂಡ್ ವೈಟ್ ಕಾಲದ
ಮೂಕಿ ಚಿತ್ರಗಳ ಯುಗದಲ್ಲಿ ಇಡೀ ಜಗತ್ತಿಗೆ ಆಪ್ತವಾದವರು ಚಾರ್ಲಿ ಚಾಪ್ಲಿನ್. ನಗಿಸುವ ಮನೋಧರ್ಮದ ಹಿಂದೆ ನೋವಿರುತ್ತದೆ ಎಂದು ತೋರಿಸಿಕೊಟ್ಟವರು..

ಇಲ್ಲಿ ಚಾರ್ಲಿ ಹೆಸರಿನಲ್ಲಿ ಹೆಣ್ಣು ನಾಯಿ ಇದೆ. ಅಸಡ್ಡೆಯಿಂದಲೇ ಅದರ ಪ್ರೀತಿಗೆ ಮನ ಸೋತು ಹೋಗುವ ಧರ್ಮ ಮಾನವೀಯ ಸಂವೇದನೆಯ ಅಭಿವ್ಯಕ್ತಿ.

ಒಂದು ಪ್ರಾಣಿ; ಅದರಲ್ಲೂ ನಿಯತ್ತಿಗೆ ಹೆಸರಾದ ನಾಯಿಯ ವರ್ತನೆ, ಭಾವನೆ, ಆಟ, ನೆಗೆದಾಟ ಎಲ್ಲವೂ ಸೊಗಸು.. ಆದರೆ ಅಂತ್ಯದಲ್ಲಿ ಮೌನ ಸಂವೇದನೆ ಹುಟ್ಟುಹಾಕುವ ಪ್ರೇಮ ದುರಂತದಲ್ಲೂ ಆದರ್ಶಪ್ರಾಯ.

ಒಂದು ಘನಘೋರ ದುರ್ಘಟನೆಯ ಕಾರಣದಿಂದ ಹೃದಯ ಕಲ್ಲಾಗಿಸಿಕೊಂಡ ಧರ್ಮ, ಚಾರ್ಲಿಯ ಚೆಲ್ಲಾಟಗಳಿಗೆ ನಿಧಾನವಾಗಿ ಕರಗುವಷ್ಟರಲ್ಲಿ ಮತೊಂದು ಆಘಾತದ ಸುಳಿವು ಹೃದಯದ ಮೇಲೆರಗುತ್ತದೆ. ಮಾನವೀಯ ಅನುಕಂಪದಿಂದಲೇ ತುಡಿಯುವ ಆತ ಮನಸ್ಸು ಮಾಡುವುದು ಸುದೀರ್ಘ ಪಯಣದ ಸಾಹಸಕ್ಕೆ.

ಸರಿ ಹೊರಡುತ್ತಾನೆ; ಸ್ಕೂಟರ್ ಗೆ ಅಂಟಿಕೊಂಡ ಬಾಕ್ಸ್ ಚಾರ್ಲಿಗೆ.. ಆಕೆ ಇಷ್ಟಪಡುವ ಹಿಮವಿರುವ ಜಾಗ ತಲುಪುವುದು ಅವರ ಗುರಿ.. ಅದರಲ್ಲಿ ಸಿಗುವ ಆನಂದ, ಸಂವೇದನೆ, ಸಂಕಟ ಎಲ್ಲವೂ ಪ್ರೇಕ್ಷಕನದೇ ಆಗಿರುತ್ತದೆ. ಜೊತೆಗೆ ವಿವಿಧ ಸಂಸ್ಕೃತಿಗಳ ಪರಿಚಯವೂ ಆಗುತ್ತದೆ. ಚಾರ್ಲಿ ಮತ್ತು ಧರ್ಮ ನಡುವಿನ ದೇಹ ಭಾಷೆ ಸಂಕಟದ ಕ್ಷಣಗಳು ಪ್ರೇಕ್ಷಕನ ಹೃದಯವನ್ನು ಆರ್ಧ್ರಗೊಳಿಸುತ್ತವೆ.

ಈಗ್ಗೆ ಕೆಲವು ವರ್ಷಗಳ ಹಿಂದೆ ತೆರೆ ಕಂಡಿದ್ದ ‘ಲೈಫ್ ಆಫ್ ಪೈ’ ಎಂಬ ಚಿತ್ರ ದಲ್ಲಿ ಸಮುದ್ರದ ಭೋರ್ಗರೆತದ ನಡುವೆ ಯುವಕ ಮತ್ತು ಹುಲಿಯ ನಡುವೆ ಹಸಿವು ಸಂಕಟ ಸಿಟ್ಟು ಸೆಡವು ಅಭಿವ್ಯಕ್ತಗೊಂಡು ಪ್ರೇಕ್ಷಕ ಥ್ರಿಲ್ಲಿಂಗ್ ಕ್ಷಣಗಳಿಗೆ ಒಳಗಾಗಿದ್ದು ಭಾವುಕತೆಗೆ ತೆರೆದುಕೊಂಡಿದ್ದು ಒಂದು ಸಿನಿಮಾ ಇತಿಹಾಸ.

ಅದೇ ರೀತಿಯ ಸಾಹಸ ಇದು ಎಂದು ಖಂಡಿತವಾಗಿ ಹೇಳಬಹುದು.. ಏಕೆಂದರೆ ನಾಯಿ ಪಳಗಿಸುವಿಕೆ; ಭಾವನೆಗಳಿಗೆ ಸಿದ್ಧಗೊಳಿಸುವಾಗಿನ ತಾಳ್ಮೆ ಸಾಹಸದ್ದು ಎಂದು ಹೇಳಲೇಬೇಕಿಲ್ಲ..

ರಕ್ಷಿತ್ ಶೆಟ್ಟಿ ಮತ್ತು ನಾಯಿ ಚಾರ್ಲಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಪ್ರಾಣಿ ಸಂರಕ್ಷಣೆ ಹೊಣೆ ಹೊತ್ತ ಹುಡುಗಿಯಾಗಿ ಸಂಗೀತ ಶೃಂಗೇರಿ. ಮುದ್ದು ಬಾಲಕಿಯಾಗಿ ಶಾರ್ವಿ, ತಮಿಳು ನಟ ಬಾಬ್ಬಿ ಸಿಂಹ, ರಾಜ್ ಬಿ.ಶೆಟ್ಟಿ ಇಷ್ಟವಾಗುತ್ತಾರೆ. ಇಹಲೋಹ ತ್ಯಜಿಸಿರುವ ಎಚ್.ಜಿ. ಸೋಮಶೇಖರ ರಾವ್ ಮತ್ತು ಭಾರ್ಗವಿ ನಾರಾಯಣ್ ಅವರು ಜೀವನ ಪ್ರೇಮದ ಸಂಕೇತದಂತೆಯೇ ಕಾಣುತ್ತಾರೆ.

ನಿರ್ದೇಶಕ ಕಿರಣ್ ರಾಜ್ ಅವರ ಹಲವು ದಶಕಗಳ ಕನಸು ನನಸಾಗಿದೆ. ಕೊರೊನಾ ಅಡೆ ತಡೆ ಎಲ್ಲವುಗಳ ನಡುವೆಯೂ ಪ್ರೇಕ್ಷಕನ ಹೃದಯ ಒದ್ದೆಯಾಗುವ ಚಿತ್ರ ಮಾಡಿಕೊಟ್ಟಿದ್ದಾರೆ.

ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಸಂಗೀತ ನಿರ್ದೇಶಕ ನೊಬಿನ್ ಪಾಲ್ ತಮ್ಮ ಕೆಲಸವನ್ನು ಹೆಚ್ಚು ಕ್ರಿಯಾತ್ಮಕವಾಗಿಸಿರುವುದರಿಂದ ಸಿನಿಮಾ ಹೆಚ್ಚು ಆಪ್ತವಾಗುತ್ತದೆ.

🖋ಸ್ನೇಹಪ್ರಿಯ ನಾಗರಾಜ್

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *