ಕನ್ನಡದಲ್ಲಿ ಬರಲಿದೆ ಹೊಸದೊಂದು ಸಂಗೀತ ಸುಧೆ ಹರಿಸುವ ಸಿನಿಮಾ..
ನಿರ್ಮಾಪಕ ಸಿ.ಆರ್.ಮನೋಹರ್ ಅವರ ಸಹೋದರ ಇಶಾನ್ ಮುಖ್ಯ ಪಾತ್ರದಲ್ಲಿರುವ ಆ ಚಿತ್ರದ ಹೆಸರು ‘ರೆಮೊ’. ಪವನ್ ಒಡೆಯರ್ ಇದರ ನಿರ್ದೇಶಕ.
ರೆಮೊ ಈ ತಿಂಗಳ 25ಕ್ಕೆ ಬಿಡುಗಡೆಗೆ ಸಜ್ಜುಗೊಂಡಿದೆ. ಅದರ ಪೂರ್ವಭಾವಿಯಾಗಿ ಬಿಡುಗಡೆಗೊಂಡ ಟ್ರೈಲರ್ ಗೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರಕ್ಕೆ ಶುಭ ಹಾರೈಸಿದರು.
ಕನ್ನಡದಲ್ಲಿ ಗೆಲುವಿನ ಯುಗ ಆರಂಭವಾಗಿದೆ. ಭಾರತೀಯ ಚಿತ್ರರಂಗ ಕನ್ನಡ ಸಿನಿಮಾಗಳನ್ನು ಗಂಭೀರವಾಗಿ ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಈಚೆಗೆ ಗೆಲುವಿನ ಪತಾಕೆ ಹಾರಿಸಿರುವ ‘ಕಾಂತಾರ’ ಚಿತ್ರದಂತೆಯೇ ‘ರೆಮೋ’ ಕೂಡ ದೊಡ್ಡ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು ಶಿವಣ್ಣ.
ಶಿವಣ್ಣ ಎಂದರೆ ನಮಗೆ ಪ್ರೀತಿ ಪಾತ್ರರು ಮಾತ್ರವಲ್ಲ ಉದ್ಯಮದ ಎಲ್ಲರಿಗೂ ಅವರ ಶುಭ ಹಾರೈಕೆ ಇರುತ್ತದೆ. ಆದರೆ ಅತ್ಯಂತ ಬ್ಯುಸಿ ಸಂದರ್ಭದಲ್ಲಿ ಬಿಡುವು ಮಾಡಿಕೊಂಡು ಬಂದು ನಮಗೆ ಹಾರೈಸಿರುವುದು ಖುಷಿ ಕೊಟ್ಟಿದೆ ಎಂದರು ನಿರ್ಮಾಪಕ ಸಿ.ಆರ್.ಮನೋಹರ್.
ಈ ಸಿನಿಮಾ ಆರಂಭವಾಗಿ ಮೂರು ವರ್ಷಗಳಾಯಿತು. ಕೊರೊನಾ ಮುಂತಾದ ಅವಘಡಗಳನ್ನು ದಾಟಿ ಈಗ ಬಿಡುಗಡೆಗೆ ಸಜ್ಜುಗೊಂಡಿದೆ. ಚಿತ್ರವನ್ನು ಮೊದಲ ದಿನವೇ ನೋಡುವೆ ಎಂಬ ಶಿವಣ್ಣ ಅವರ ಮಾತೇ ನಮಗೆ ಸ್ಫೂರ್ತಿಯಾಗಿದೆ ಎಂದರು ಇಶಾನ್.
ಅಂದ ಹಾಗೆ ಇಶಾನ್ ಅವರಿಗೆ ಇದು ಎರಡನೇ ಚಿತ್ರ. ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಈ ಚಿತ್ರದಲ್ಲಿಯೂ ಒಂದು ಕ್ಯೂಟ್ ಜೋಡಿ ಇದೆ ಎಂಬ ಪ್ರಶಂಸೆಗಳು ಬಂದಿವೆ. ಹಾಗಾಗಿ ಖುಷಿಯಿಂದಲೇ ಚಿತ್ರದ ಬಿಡುಗಡೆ ಎದುರು ನೋಡುತ್ತಿರುವೆ ಎಂದರು ಆಶಿಕಾ.
ನಿರ್ದೇಶಕ ಪವನ್ ಒಡೆಯರ್ ಚಿತ್ರದ ಒಳಗಿನ ವಿವರಗಳನ್ನು ನೀಡಲು ನಿರಾಕರಿಸಿದರು. 25 ನೇ ತಾರೀಖು ಬಂದು ಸಿನಿಮಾ ನೋಡಿ; ಇಲ್ಲಿ ಅದನ್ನು ಬಿಟ್ಟುಕೊಡುವುದಿಲ್ಲ ಎಂದರು. ಆದರೆ ಬಹಳ ಸಮಯದ ಬಳಿಕ ಒಂದು ಸಂಗೀತಮಯ ಚಿತ್ರ ಮಾಡುವ ಅವಕಾಶ ಒದಗಿ ಬಂತು ಎಂದರು.
ನಟರಂಗ ರಾಜೇಶ್, ಆನಂದ್ ಆಡಿಯೋ ಶ್ಯಾಮ್, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ, ಛಾಯಾಗ್ರಾಹಕ ವೈದಿ ಮೊದಲಾದವರು ಈ ಸಂದರ್ಭದಲ್ಲಿದ್ದರು.