ಕನ್ನಡ ಚಿತ್ರರಂಗದಲ್ಲಿ ಕೆಲವೊಮ್ಮೆ ಅದ್ಭುತ ಸಾಹಸಗಳು ನಡೆಯುತ್ತವೆ..
ಆ ಸಾಹಸಗಳು ಹೆಚ್ಚಿನವು ಚೇತನರಿಂದ ನಡೆಯುತ್ತವೆ. ಅದನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ ಎಂಬಂತಾದರೆ ಆ ಸಾಹಸದ ವ್ಯಾಪ್ತಿ ಕೈಗೆ ಸಿಗದಾಗಿರುತ್ತದೆ..
ಭಾಸ್ಕರ್ ಜಿ ಎಂಬ ವ್ಯಕ್ತಿಯ ಸಾಹಸವೂ ಅಷ್ಟೇ.. ತಕ್ಷಣಕ್ಕೆ ಯಾರ ಕಲ್ಪನೆಗೂ ನಿಲುಕುವುದಿಲ್ಲ. ಅವರು ಪ್ರಪಂಚವನ್ನು ನೋಡಲಾರರು.. ಆದರೆ ಕಣ್ಣಿಗೆ ಹಬ್ಬವೆನಿಸುವ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಅಚ್ಚರಿಯಾದರೂ ನಿಜವಾಗಿರುವ ಸಂಗತಿ ಇದು. ಏಕೆಂದರೆ ಅದ್ಭುತ ಕ್ರಿಯಾಶೀಲ ಕಲ್ಪನೆಗಳನ್ನು ತಲೆಯಲ್ಲಿ ತುಂಬಿಕೊಂಡಿರುವ ಅವರು ಒಂದು ಸಿನಿಮಾ ನಿರ್ದೇಶನ ಮಾಡಲು ಮನದ ಸಂಕಲ್ಪ ಮತ್ತು ಧೃಡವಾದ ನಂಬಿಕೆ ಸಾಕು ಎಂದು ಪ್ರತಿಪಾದಿಸಿದ್ದಾರೆ.
ಹಾಗೆ ಭಾಸ್ಕರ್ ಜಿ ಅವರು ಪ್ರತಿಪಾದಿಸುತ್ತಾ ದೃಷ್ಟಿ ಇಲ್ಲದವರು ಸಿನಿಮಾ ನಿರ್ದೇಶನ ಮಾಡಬಹುದು ಎಂದು ತೋರಿಸಿಕೊಟ್ಟಿರುವ ಆ ಚಿತ್ರದ ಹೆಸರು ‘ನಿಶಾಚರ’.
ಚಿತ್ರವು ಬಿಡುಗಡೆಯ ಹಂತದಲ್ಲಿದ್ದು, ಅದರ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು. ಕಾರ್ಕಳ, ಉಡುಪಿ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ‘ಪ್ರೀತಿ ಮಾಡುವ ವ್ಯಕ್ತಿಯೇ ತಪ್ಪು ಆಯ್ಕೆಯಾಗಿದ್ದರೆ..’ ಏನೆಲ್ಲಾ ನಡೆಯುತ್ತದೆ ಎಂಬುದು ಕಥೆ. ಯುವ ಜೋಡಿಯೇ ಇಲ್ಲಿ ಪ್ರಧಾನ. ಸಮುದ್ರದ ಮಧ್ಯೆ ಜೋಡಿ ನಡುವೆ ಏನೆಲ್ಲಾ ಸಂಘರ್ಷ ನಡೆಯುತ್ತದೆ ಎಂಬುದು ಥ್ರಿಲ್ಲಿಂಗ್ ವಿಷಯವಾಗಿರುತ್ತದೆ ಎಂಬ ವಿವರ ನೀಡುತ್ತಾ ಹೋದರು ನಿರ್ದೇಶಕ ಭಾಸ್ಕರ್ ಜಿ.
ಕಾರ್ಕಳ ಮೂಲದ ಅಕ್ಷಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಟಕಗಳ ಮೇಲಿನ ಆಸಕ್ತಿ ಸಿನಿಮಾವರೆಗೆ ಕರೆ ತಂದಿದೆ. ಭಾಸ್ಕರ್ ಜಿ ಅದ್ಭುತ ವ್ಯಕ್ತಿ. ಅವರ ಕಲ್ಪನೆಗಳಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಪುಣ್ಯ ಎಂದರು ಅಕ್ಷಯ್.
ಮಜಾ ಟಾಕೀಸ್ ಮೋಹನ್ ಸಂಗೀತ ನೀಡಿದ್ದು, ಚಿತ್ರದಲ್ಲಿ ಮೂರು ಹಾಡುಗಳಿವೆ ಎಂಬ ಮಾಹಿತಿ ನೀಡಿದರು. ಗಾಯಕ ಚಿನ್ಮಯಿ ಸಹ ಹಾಜರಿದ್ದರು. ಲತಾ ಬಿ.ಆರ್ ಚಿತ್ರದ ನಿರ್ಮಾಪಕಿ. ಅವರ ಪರವಾಗಿ ಜನಾರ್ಧನಯ್ಯ ಹಾಜರಿದ್ದರು. ಸಹ ನಿಮಾರ್ಪಕಿಯಾಗಿರುವ ಬೃಂದಾ ಈ ಸಂದರ್ಭದಲ್ಲಿ ಹಾಜರಿದ್ದರು.
ಭಾಸ್ಕರ್ ಜಿ ಅವರಿಗೆ ಹಿತೈಷಿಯಾಗಿರುವ ನಿರ್ಮಾಪಕ ಹಾಗೂ ನಿರ್ದೇಶಕ ಮರಡಹಳ್ಳಿ ನಾಗಚಂದ್ರ ಹಾಗೂ ಸಂಗೀತ ನಿರ್ದೇಶಕ ಕೃಪಾಕರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.