ಚಿತ್ರದ ಹೆಸರೇ ಅವಳು ಲೈಲಾ ಅಲ್ಲ; ನಾನು ಮಜ್ನು ಅಲ್ಲ..
ಇದು ಪ್ರೇಮಕಥೆ ಅಲ್ಲ; ಆದರೆ 16 ರಿಂದ 24 ವರ್ಷದ ಹರೆಯದವರ ಕಥೆ. ಹೊಸಬರ ಉತ್ಸಾಹಿ ತಂಡ ಚಿತ್ರ ಮಾಡಿ ಮುಗಿಸಿದೆ.
ಅಂದ ಹಾಗೆ ಅದು ‘ನೀನು ಹೋಗೋ ದಾರೀಲಿ’ ಎಂಬ ಪ್ರೇಮಗೀತೆ ಬಿಡುಗಡೆ ಕಾರ್ಯಕ್ರಮ. ಚಿತ್ರತಂಡ ಉತ್ಸಾಹದಿಂದ ಪಾಲ್ಗೊಂಡಿತ್ತು.
ಯಲ್ಲು ಪುಣ್ಯಕೋಟಿ ನಿರ್ದೇಶನದ ಈ ಚಿತ್ರವನ್ನು ನಿರ್ಮಾಣ ಮಾಡಿ ಮುಖ್ಯ ಪಾತ್ರದಲ್ಲಿ ನಟಿಸಿರುವುದು ಅಜಯ್ ಎಂಬ ಯುವಕ.
ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದರು. ಅಜಯ್ ಎದುರು ನಿಹಾರಿಕಾ ಹಾಗೂ ಅಶ್ವಿನಿ ನಟಿಸಿದ್ದಾರೆ. ಡಿಂಗ್ರಿ ನರೇಶ್ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ.
ನಮ್ಮ ತಂದೆಯವರು ರಂಗಭೂಮಿ ಕಲಾವಿದರಾಗಿದ್ದಾರೆ. ಹಾಗಾಗಿ ನಟನೆ ಮೇಲೆ ಆಸಕ್ತಿ ಬೆಳೆಸಿಕೊಂಡೆ; ರಾಯಚೂರಿನಲ್ಲಿ ಕಾಲೇಜ್ ಮುಗಿಸಿ ಕೆಎಎಸ್ ತರಬೇತಿಗಾಗಿ ಬೆಂಗಳೂರಿಗೆ ಬಂದಾಗ ನೀನಾಸಂ ಸಂಪರ್ಕ ಬೆಳೆಯಿತು ಎಂದರು ಅಜಯ್.
ಸಂತು ಎಂಬ ಹುಡುಗನ ಪಾತ್ರದಲ್ಲಿ ಅಭಿನಯಿಸಿರುವೆ. ಇದಕ್ಕೆ ಎರಡು ಶೆಡ್ ಗಳಿವೆ. ಹೈಸ್ಕೂಲಿನಿಂದ ಕಾಲೇಜಿಗೆ ಬರುವ ಹುಡುಗನಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ. ಪ್ರೀತಿ ಪ್ರೇಮದ ವಿಷಯಕ್ಕೆ ಏನೆಲ್ಲಾ ನಡೆಯುತ್ತದೆ ಎಂಬುದು ಕಥೆಯ ತಿರುಳು.
ಲವ್, ಸೆಂಟಿಮೆಂಟ್ ಜೊತೆಗೆ ಒಂದಷ್ಟು ಸಸ್ಪೆನ್ಸ್ ಕೂಡ ಚಿತ್ರದಲ್ಲಿದೆ. ಜೊತೆಗೆ 4 ಹಾಡುಗಳಿದ್ದು, ಕೌಶಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದು ಹಳ್ಳಿ ಮತ್ತು ನಗರದಲ್ಲಿ ನಡೆಯುವ ಕಥೆ, ಚಿತ್ರದುರ್ಗ, ಹೊಸಪೇಟೆ, ಬೆಂಗಳೂರು, ಹಿರಿಯೂರು, ಬಳ್ಳಾರಿ, ರಾಯಚೂರು ಕೊಪ್ಪಳ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ ಎಂಬ ಮಾಹಿತಿ ಕೊಟ್ಟರು ನಿರ್ದೇಶಕ ಯಲ್ಲು ಪುಣ್ಯ ಕೋಟಿ.
ಚಿತ್ರವು ಇದೇ ಸೆಪ್ಟೆಂಬರ್ 8ರಂದು ಬಿಡುಗಡೆ ಕಾಣುತ್ತಿದೆ ಎಂಬ ಮಾಹಿತಿಯೂ ಬಂತು ನಿರ್ದೇಶಕರಿಂದ.