* ದಯಾಳ್ ಪದ್ಮನಾಬ್ ನಿರ್ಮಾಣ *
ಪ್ರಸ್ತುತ ಸನ್ನಿವೇಶಗಳಲ್ಲಿ ಭೇದಿಸಲಾಗದ ವಂಚನೆಯ ಜಾಲವಾಗಿರುವ ಡಾರ್ಕ್ ವೆಬ್ ನ ಕುರಿತ ಚಿತ್ರ ‘ಕಪಟಿ’ ಈ ವಾರ ಅಂದರೆ ಮಾರ್ಚ್ 7 ರಂದು ತೆರೆ ಕಾಣುತ್ತಿದೆ.
ಹಗ್ಗದ ಕೊನೆ, ಆ ಕರಾಳ ರಾತ್ರಿ ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ದೇಶನ ಮಾಡಿರುವ ದಯಾಳ್ ಪದ್ಮನಾಭನ್ ಡಿ ಪಿಕ್ಚರ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ರವಿಕಿರಣ್ – ಚೇತನ್ ಎಸ್ ಪಿ ನಿರ್ದೇಶಿಸಿರುವ ಹಾಗೂ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖಪಾತ್ರದಲ್ಲಿ ನಟಿಸಿರುವ ಚಿತ್ರವು ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿದೆ.
ಈಚೆಗೆ ಬಿಡುಗಡೆ ಕಂಡಿದ್ದ ಚಿತ್ರದ ಟ್ರೈಲರ್ ಜನ ಮನ ಸೆಳೆದಿರುವುದು ವಿಶೇಷವಾಗದೆ. ನಿರ್ಮಾಪಕರಾದ ಕೆ.ಮಂಜು, ರಮೇಶ್ ಯಾದವ್ ಹಾಗೂ ಅವಿನಾಶ್ ಯು ಶೆಟ್ಟಿ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು.
ಮೂಲತಃ ಸಾಫ್ಟ್‌ವೇರ್ ಉದ್ಯೋಗಿಗಳಾಗಿರುವ ರವಿಕಿರಣ್ ಹಾಗೂ ಚೇತನ್ ಎಸ್ ಪಿ ಡಾರ್ಕ್ ವೆಬ್ ನ ಆಳವನ್ನು ಅರಿತು ಚಿತ್ರವನ್ನು ಮಾಡಿದ್ದಾರೆ ಎಂಬುದು ನಿರ್ಮಾಪಕ ದಯಾಳ್ ಪದ್ಮನಾಬ್ ವಿವರಣೆ.
ಈ ಚಿತ್ರದ ನಿರ್ಮಾಣದ ನಂತರ ನನಗೆ ಸಿಕ್ಕ ಇವರು ಸಂಪೂರ್ಣ ಜವಾಬ್ದಾರಿ ನೀಡಿದರು. ಚಿತ್ರ ನಿಜಕ್ಕೂ ಉತ್ತಮವಾಗಿ ಮೂಡಿ ಬಂದಿದೆ ಮತ್ತು ಇಂದಿನ ಯುವ ಸಮೂಹವನ್ನು ಸೆಳೆಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳುತ್ತಾ ಹೋದರು ದಯಾಳ್.
ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಸಾಮಾನ್ಯ ಜನರಿಗೆ ಮೊಬೈಲ್ ಮಾತ್ರ ಗೊತ್ತು. ಆದರೆ ಅದೇ ಮೊಬೈಲ್ ನಿಂದ ಮೋಸ ಹೋಗುವುದು ತಿಳಿದಿಲ್ಲ ಎಂಬ ವಿವರಣೆ ಕೊಟ್ಟರು ನಿರ್ದೇಶಕರು.
ಇಲ್ಲಿ ಕ್ಯಾಬ್ ಡ್ರೈವರ್, ಮೆಡಿಕಲ್ ವಿದ್ಯಾರ್ಥಿ ಹಾಗೂ ಫ್ಯಾಷನ್ ಡಿಸೈನರ್ ಮೂರು ಮುಖ್ಯಪಾತ್ರಗಳಿದ್ದು, ಆ ಪಾತ್ರಗಳನ್ನು ಸಾತ್ವಿಕ್ ಕೃಷ್ಣನ್, ದೇವ್ ದೇವಯ್ಯ ಹಾಗೂ ಸುಕೃತ ವಾಗ್ಲೆ ನಿಭಾಯಿಸಿದ್ದಾರೆ.
ಇದೊಂದು ಜನಸಾಮಾನ್ಯರ ಕಥೆ. ಆನ್‌ಲೈನ್ ಶೋಷಣೆಯ ಪರಿಣಾಮಗಳು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಹೇಗೆ ಮೋಸ ಮಾಡಲಾಗುತ್ತಿದೆ ಎಂಬುದನ್ನು ಸಹ ಚಿತ್ರದಲ್ಲಿ ತೋರಿಸಲಾಗಿದೆ ಎಂದರು.