Snehapriya.com

April 17, 2025

ಸಂಭ್ರಮದ ಸಿನಿಮೋತ್ಸವ : ಸ್ಟಾರ್ ಗಳು ಯಾವೊತ್ತೂ ಪಾಲ್ಗೊಂಡಿಲ್ಲ..

Social Share :

* 16ನೇ ಬೆಂಗಳೂರು ಸಿನಿಮೋತ್ಸವ ಅದ್ದೂರಿ ಉದ್ಘಾಟನೆ *

* ಮೈಸೂರಿನಲ್ಲಿ ವಿಶ್ವದರ್ಜೆಯ ಚಿತ್ರನಗರಿ ನಿರ್ಮಾಣ : ಮುಖ್ಯಮಂತ್ರಿ ಭರವಸೆ *

* ಸ್ಟಾರ್ ನಟರ, ಕಲಾವಿದರ ಬಗ್ಗೆ ಅಸಮಾಧಾನ ಹೊರಹಾಕಿದ ಡಿಕೆಶಿ *

* ಇದು ಮನೆಯ ಕಾರ್ಯಕ್ರಮ ಎಂದ ಶಿವಣ್ಣ *

* ಕುವೆಂಪು, ಬಸವಣ್ಣ ನೆನೆದು ಅದ್ಭುತ ಭಾಷಣ ಮಾಡಿದ ಕಿಶೋರ್ *

* ಸಿಹಿ ಸಿಂಚನವಾದ ‘ಸರ್ವ ಜನಾಂಗದ ಶಾಂತಿಯ ತೋಟ’ *

ಸಮಾನಾಂತರ ಸಿನಿಮಾ (ಪ್ಯಾರೆಲೆಲ್ ಸಿನಿಮಾ)ಗಳ ಹಬ್ಬವಾಗಿ ಆರಂಭಗೊಂಡ ‘ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ ದಲ್ಲಿ ಸ್ಟಾರ್ ನಟರು ಅಥವಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಇತಿಹಾಸವೇ ಇಲ್ಲ..

ಹಿಂದೆ ಅಧ್ಯಕ್ಷರಾಗಿದ್ದ ರಾಜೇಂದ್ರಸಿಂಗ್ ಬಾಬು ಅವರು ಚಿತ್ರೋತ್ಸವದಲ್ಲಿ ಸ್ಟಾರ್ ನಟರು ಪಾಲ್ಗೊಳ್ಳದಿರುವ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದರು. ಅದನ್ನು ಹೊರತುಪಡಿಸಿ ಇನ್ಯಾರು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ..

ಆದರೆ ಶನಿವಾರ ನಡೆದ 16 ನೇ ಸಿನಿಮೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಟ್ಟ ಎಚ್ಚರಿಕೆ ಮಾತ್ರ ಮಾಧ್ಯಮಗಳಿಗೆ ಹೆಚ್ಚಿನ ಆಹಾರ ಒದಗಿಸಿದೆ.

ನಿಜ ಹೇಳಬೇಕೆಂದರೆ ಮುಖ್ಯ ವಾಹಿನಿ ಚಿತ್ರಗಳಿಗೆ ಚಿತ್ರೋತ್ಸವದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನೇ ನೀಡಲಾಗುತ್ತಿರಲಿಲ್ಲ. ಎಲ್ಲೋ ಕೆಲವು ಜನಪ್ರಿಯ ಚಿತ್ರಗಳು ಉತ್ಸವದಲ್ಲಿ ಪ್ರದರ್ಶನ ಕಾಣುತ್ತಿದ್ದವು ಅಷ್ಟೇ.

ಬರಬರುತ್ತಾ ಕನ್ನಡದ ಕಮರ್ಷಿಯಲ್ ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವಂತೆ ನೋಡಿಕೊಳ್ಳಲಾಯಿತು. ಆಗಲೂ‌ ಸ್ಟಾರ್ ನಟರು ಅಥವಾ ಹೆಚ್ಚಿನ ಕಲಾವಿದರು ಚಿತ್ರೋತ್ಸವದಲ್ಲಿ ಭಾಗವಹಿಸಲೇ ಇಲ್ಲ.

ಇದಕ್ಕೆ ಕಾರಣ ಚಿತ್ರರಂಗದಲ್ಲಿ ಇರುವವರಿಗೆ ತಿಳಿಯದ ವಿಷಯವೇನೂ ಅಲ್ಲ; ಅದು ಪೇಮೆಂಟ್ ವಿಷಯ. ಕಲಾವಿದರ ಪೇಮೆಂಟ್ ಸಂದಾಯವಾಗದಿದ್ದರೆ ಯಾವ ಕಲಾವಿದರೂ ಯಾವ ಕಾರ್ಯಕ್ರಮ (ಹೆಚ್ಚಿನ)ದಲ್ಲಿಯೂ ಭಾಗವಹಿಸುವುದಿಲ್ಲ.

ಚಿತ್ರೋತ್ಸವದಲ್ಲಿ ಭಾಗವಹಿಸುವ ಪರಭಾಷೆಯವರಿಗೆ ನೀಡುವಂತೆ ನಮಗೂ ನೀಡಲಿ ಎಂಬುದು ಬಹಳಷ್ಟು ಕಲಾವಿದರ ಆಶಯ. ಆದರೆ ಅದನ್ನು ಅವರು ಬಾಯಿ ಬಿಟ್ಟು ಹೇಳುವುದಿಲ್ಲ.

ಹಿಂದೆ ಬಾಲಿವುಡ್ ನಟಿ ಕರೀನಾ ಕಪೂರ್ ಅವರನ್ನು ಚಿತ್ರೋತ್ಸವದ ಮುಖ್ಯ ಅತಿಥಿಯಾಗಿ ಕರೆತಂದಾಗ ಅವರಿಗೆ ನೀಡಲಾದ ಸಂಭಾವನೆ ಎಷ್ಟು ದೊಡ್ಡದೆಂಬುದರ ಬಗ್ಗೆ ದೊಡ್ಡ ಚರ್ಚೆಯೇ ನಡೆದಿತ್ತು‌.

ರಾಜೇಂದ್ರಸಿಂಗ್ ಬಾಬು ‌ಅವರೇ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಾಲಿವುಡ್ ನಟ ವಿಜಯ್ ಅಮೃತ್‌ರಾಜ್, ಬಾಲಿವುಡ್ ನ ಸಂಜಯ್ ಲೀಲಾ ಬನ್ಸಾಲಿ, ಜಯಾ ಬಚ್ಚನ್ ಹೀಗೆ ದೊಡ್ಡ ದೊಡ್ಡ ಸಿನಿಮಾ ದಿಗ್ಗಜರನ್ನು ಕರೆಸಿದ ಇತಿಹಾಸವೂ ಇದೆ.

ಆದರೆ ಕನ್ನಡದ ಸ್ಟಾರ್ ಗಳು ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುವುದರಲ್ಲಿ ನಿರಾಸಕ್ತಿ ಏಕೆ ಎಂಬುದಕ್ಕೆ ಚಲಚಚಿತ್ರ ವಾಣಿಜ್ಯ ಮಂಡಳಿ ಉತ್ತರ ನೀಡಬೇಕಾಗಿದೆ.

ಚಲನಚಿತ್ರ ಅಕಾಡೆಮಿ ಕಾರ್ಯ ನಿರ್ವಹಣೆ ಬಗ್ಗೆ ಅಪಸ್ವರ ಏನೇ ಇದ್ದರೂ ಅಂತಾರಾಷ್ಟ್ರೀಯ ಮಟ್ಟದ ಸಿನಿಮೋತ್ಸವ ಸಂಘಟಿಸುತ್ತದೆ. ಅದು ಪ್ರತಿ ಬಾರಿಯೂ ಯಶಸ್ವಿಯೂ ಆಗುತ್ತದೆ.

ಮುಖ್ಯವಾಗಿ ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡದ ಚಿತ್ರಗಳು ತಯಾರಾಗುತ್ತವೆ; ಈಗಂತೂ ಕಥಾ ಸಾಮರ್ಥ್ಯ (ಕಂಟೆಂಟ್ ಸಿನಿಮಾ) ಇರುವ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗುತ್ತವೆ ಎಂದರೆ ಅದಕ್ಕೆ ಮೂಲ ಈ ಚಿತ್ರೋತ್ಸವ.

ಏಕೆಂದರೆ ಇಲ್ಲಿ ಭಾಗವಹಿಸುವ ಪ್ರತಿ ಸಿನಿಮಾಸಕ್ತನಲ್ಲಿಯೂ ನಾನೊಂದು ಚಿತ್ರವನ್ನು ನಿರ್ದೇಶನ ಮಾಡಬೇಕೆಂಬ ಆಸೆ ಮೊಳೆಯುತ್ತದೆ. ಅದರ ಮೂರ್ತ ರೂಪವೇ ಈ ಕಾಲದಲ್ಲಿ ಬಿಡುಗಡೆ ಕಾಣುತ್ತಿರುವ ವಾರಕ್ಕೆ 10 ಸಿನಿಮಾಗಳು.

ಇದೇ ಭಾನುವಾರದಿಂದ ಇನ್ನು ಒಂದು ವಾರಗಳ ಕಾಲ ಈ ಸಿನಿಮೋತ್ಸವ ಕಲಾಸಕ್ತರಿಗೆ ಹಬ್ಬದಂತೆ ರಸದೌತಣ ಬಡಿಸುತ್ತದೆ..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *