Snehapriya.com

April 13, 2025

ಅಪಾಯವಿದೆ ಎಚ್ಚರಿಕೆ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಮಂಜುನಾಥ್ ವಿ.ಜಿ. ಹಾಗೂ ಪೂರ್ಣಿಮಾ ಗೌಡ

ನಿರ್ದೇಶನ : ಅಭಿಜಿತ್ ತೀರ್ಥಹಳ್ಳಿ

ನೆಗೆಟಿವ್ ಹುಡುಗರ ಹರ ಸಾಹಸಗಳು..

ಮೂವರು ಸೋಮಾರಿ ಹುಡುಗರು..!

ಆದರೆ ಯಾವುದೇ ರಿಸ್ಕ್ ಎದುರು ಹಾಕಿಕೊಳ್ಳುವಂತಹ ಧೈರ್ಯವಂತರು. ಬದುಕಿನಲ್ಲಿ ದುಡಿಮೆಯ ಮಾರ್ಗ ಕಂಡುಕೊಳ್ಳುವಲ್ಲಿ ವಿಫಲರಾಗಿ ಅಡ್ಡ ದಾರಿಗೆ ಹೊಂಚು ಹಾಕಿದವರು..

ಕೈಯಲ್ಲಿ ಕಾಸಿಲ್ಲದೆ ಊರೆಲ್ಲಾ ಸಾಲ ಮಾಡಿ ಮರ್ಯಾದೆ ತೆಗೆಸಿಕೊಂಡರೂ, ಮನೆ ಬಾಡಿಗೆ ಕಟ್ಟದೆ ಹೋದರೂ ದಾರಿಯಲ್ಲಿ ಅಪಘಾತವಾದ ಮಹಿಳೆಗೆ ಸಿಕ್ಕಿದ ಹಣವನ್ನು ಕೊಟ್ಟು ಔದಾರ್ಯ ಮೆರೆಯುವವರು..

ಬದುಕಿಗಾಗಿ ದುಡಿಯುವ ಮನಸ್ಸಿಲ್ಲ; ಡೀಲ್ ಗಳನ್ನು ಕುದುರಿಸಿ ಹಣ ಮಾಡುವ ದಾರಿಯಲ್ಲಿ ಸಫಲತೆ ಕಾಣದಾದಾಗ ನೆಗೆಟಿವ್ ಆಲೋಚನೆ ಮಾಡಿ ಅರಣ್ಯದ ಒಳಗೆ ಪ್ರವೇಶ ಪಡೆಯುವ ಅವರಿಗೆ ತೆರೆದುಕೊಳ್ಳುವುದು ಭಯಾನಕವಾದ ನಿಗೂಢ ಜಗತ್ತು..

ಮೊದಲರ್ಧ ಹುಡುಕಾಟದಲ್ಲಿ ಮುಗಿದು ಹೋಗುತ್ತದೆ. ಕಾಡಿನ ಭಯಾನಕತೆಗಿಂತ ಅಲ್ಲಲ್ಲಿ ಪ್ರತ್ಯಕ್ಷವಾಗುವ ಮುಖವಾಡಗಳು ಭಯ ಹುಟ್ಟಿಸುತ್ತವೆ. ಆ ಮೂವರಲ್ಲಿ ಒಬ್ಬ ಪುಕ್ಕಲ. ಆತನ ಎಲ್ಲಾ ವರಸೆಗಳು ಪ್ರೇಕ್ಷಕನಿಗೆ ನಗೆ ತರಿಸುತ್ತವೆ.

ಉತ್ತರಾರ್ಧದಲ್ಲಿ ದೆವ್ವ ಪಿಶಾಚಿ ಮಾದರಿಯಲ್ಲಿ ಭಯ ಹುಟ್ಟುತ್ತದೆ. ಕಾಡಿನೊಳಗೇ ರಾತ್ರಿಯಲ್ಲಿ ನಡೆಯುವ ಘಟನೆಗಳು ಮತ್ತು ಆ ಜಾಗಕ್ಕೆ ಇರಬಹುದಾದ ಹೆಸರು (ಕವಲೆ ದುರ್ಗ, ಅಘೋರಿ ಗುಡ್ಡ, ರಣಪ್ರೇತ) ಹೀಗೆ ಕಥೆಗಳು ಹುಟ್ಟಿಕೊಳ್ಳುತ್ತವೆ.

ಅಂತಿಮವಾಗಿ ಕಾಡು ದೋಚುವ ಸಂಚುಕೋರರ ವ್ಯವಸ್ಥಿತ ಪಿತೂರಿ‌ ಅರ್ಥವಾಗುವಷ್ಟರಲ್ಲಿ ಪ್ರೇಕ್ಷಕ ಸುಸ್ತೋ ಸುಸ್ತು..

ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ ನಿರ್ವಹಿಸಿರುವ ಮೂರು ಪಾತ್ರಗಳು ಬೇರೆ ಬೇರೆ ನೆಲೆಯಲ್ಲಿ ಗಮನ ಸೆಳೆಯುತ್ತವೆ..

ಉಳಿದಂತೆ ಎರಡು ಶೆಡ್ ನಲ್ಲಿ ನಟಿಸಿರುವ ಅಶ್ವಿನ್ ಹಾಸನ್, ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಪಾತ್ರ ಟಾಲೆಂಟೆಡ್, ಅಜ್ಜನ ಪಾತ್ರದಲ್ಲಿ ಮಿಮಿಕ್ರಿ ಕುಮಾರ್, ಒಂದು ಹಾಡಿನಲ್ಲಿ ಪ್ರಾಧಾನ್ಯತೆ ಪಡೆದಿರುವ ರಾಧಾ ಭಗವತಿ, ತಾಯಿ ಪಾತ್ರದಲ್ಲಿ ಕಲ್ಪನಾ ಖುಷಿ ಪಾತ್ರಗಳು ಗಮನ ಸೆಳೆಯುತ್ತವೆ.

ಮುಖ್ಯ ಪಾತ್ರಧಾರಿ ಸೂರಿಯ ಬೈಕ್ ಮತ್ತು ಅದರ ಮೇಲೆ ವ್ಯಕ್ತವಾಗುವ ಸಾಂದರ್ಭಿಕ ಬರಹಗಳು, ಕಾಡಿನಲ್ಲಿ ಸದಾ ಗೋಚರಿಸುವ ಪಂಜಿನ ಬೆಳಕು; ಅಘೋರಿ ಗುಡ್ಡದ ರಣಪ್ರೇತದ ಕಥೆಯಲ್ಲಿ ಬರುವ ವಿವಿಧ ಪಾತ್ರಗಳು ಗಮನಾರ್ಹ.

ಆದರೆ ಬ್ಯಾಚುಲರ್ ಹುಡುಗರ ಮೇಲೆ ಅಸಹ್ಯವಾಗುವಂತಹ ಸನ್ನಿವೇಶಗಳು ಬೇಕಿರಲಿಲ್ಲ. ಕುಡಿದು ಸಂದರ್ಶನಕ್ಕೆ ಹೋಗುವ ಹಾಗೂ ತಾಯಿ ಮಗು ಕಾಪಾಡುವ ದೃಶ್ಯಗಳ ಸಂಯೋಜನೆಗಳಲ್ಲಿ ಕೊರತೆ ಕಾಣುತ್ತದೆ.

ಛಾಯಾಗ್ರಾಹಕ ಕಮ್ ಸಂಗೀತ ನಿರ್ದೇಶಕ ಸುನಾದ್ ಗೌತಮ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *