ಅಪ್ರತಿಮ ಕನಸುಗಾರ; ಅದ್ಭುತ ಪ್ರೇಮಲೋಕದ ಸೃಷ್ಟಿಕರ್ತ; ಪ್ರೇಮಿಗಳ ಪಾಲಿನ ಸಾರ್ವಕಾಲಿಕ ಕ್ರೇಜಿ ಸ್ಟಾರ್ ಡಾ.ವಿ.ರವಿಚಂದ್ರನ್ ಹೊಸಬರಿಂದ ಕೂಡಿದ ಚಿತ್ರತಂಡದ ಭಾಗವಾಗಿದ್ದಾರೆ..
ಈಚೆಗೆ ನಡೆದ ಶೀರ್ಷಿಕೆ ಅನಾವರಣ ಸಂದರ್ಭದಲ್ಲಿ ಕನಸುಗಾರ ವಿ.ರವಿಚಂದ್ರನ್ ಇಡೀ ಚಿತ್ರದ ಜೀವಾಳ ಎಂದು ಹೇಳಿಕೊಂಡಿತು ಚಿತ್ರತಂಡ.
ಅದು ಪ್ಯಾರ್..!
ಎಸ್.ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್.ಎಸ್.ನಾಗಶ್ರೀ ನಿರ್ಮಾಣ ಮಾಡುತ್ತಿರುವ ನೂತನ ಚಿತ್ರವನ್ನು ಮೂಲತಃ ಸಂಕಲನಕಾರ ಆಗಿರುವ ಸುಪ್ರೀತ್ ನಿರ್ದೇಶನ ಮಾಡುತ್ತಿದ್ದಾರೆ.
ಭರತ್ ಮತ್ತು ರಾಶಿಕಾ ಶೆಟ್ಟಿ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ ಡಾ.ವಿ.ರವಿಚಂದ್ರನ್ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅದರ ಕುರಿತು ಹೆಚ್ಚಿನ ವಿವರಗಳನ್ನು ಚಿತ್ರತಂಡ ನೀಡಲಿಲ್ಲ.
‘ನಿಮಗೆ ಚಿತ್ರದಲ್ಲಿ ಜೋಡಿಯಾಗಿ ಯಾರಿದ್ದಾರೆ. ಇದರಲ್ಲಿ ರಸಿಕತೆಯ ಪ್ರಮಾಣ ಎಷ್ಟು ಎಂಬ ತಮಾಷೆಯ ಪ್ರಶ್ನೆಗೆ, ತಂದೆ ಪಾತ್ರ ಎಂದು ಹೇಳಿದ್ದಾರೆ. ಮಿಕ್ಕಿದ್ದು ತಿಳಿದಿಲ್ಲ ಎಂಬ ಉತ್ತರ ಕೊಟ್ಟರು ಕ್ರೇಜಿ ಸ್ಟಾರ್.
ಇದು ಪ್ರೇಮದ ಭಾವುಕ ಪಯಣ ಎಂಬುದನ್ನು ಚಿತ್ರತಂಡ ಹೇಳಿಕೊಂಡಿತು. ಪ್ರೇಮ ಲೋಕದ ಸೃಷ್ಟಿಕರ್ತ ರವಿಚಂದ್ರನ್ ಸರ್ ನಮ್ಮ ಜೊತೆ ಇದ್ದಾರೆ ಎಂಬುದೇ ಹೆಮ್ಮೆಯ ವಿಷಯ ಎಂದೂ ಹೇಳಿಕೊಂಡಿತು ತಂಡ.
ನಿರ್ದೇಶನದ ಆಸೆ ಹೊತ್ತು ಚಿತ್ರರಂಗಕ್ಕೆ ಬಂದ ನಾಗ ಶ್ರೀ ಅವರಿಗೆ ಇಲ್ಲಿ ನಿರ್ಮಾಣದ ಹೊಣೆ ಹೊರಬೇಕಾಯಿತಂತೆ. ನಿರ್ದೇಶಕ ಸುಪ್ರೀತ್ ಆಶಯದ ಮೇರೆಗೆ ಹುಡುಗಿಯ ತಂದೆ ಪಾತ್ರಕ್ಕೆ ಡಾ.ವಿ.ರವಿಚಂದ್ರನ್ ಅವರನ್ನೇ ಒಪ್ಪಿಸಲಾಯಿತಂತೆ..!
ಚಿತ್ರದ ಮುಕ್ಕಾಲು ಪಾಲು ಚಿತ್ರೀಕರಣ ಮುಗಿದಿದೆ. ರವಿ ಸರ್ ಪಾತ್ರದ ಜಾಗವಷ್ಟೇ ಖಾಲಿ ಇದೆ ಎಂದರು ನಿರ್ದೇಶಕ ಸುಪ್ರೀತ್.
ಕ್ಯೂಟ್ ಜೋಡಿಯ ಪ್ರೇಮದ ಜೊತೆಗೆ ತಂದೆ ಮಗಳ ಬಾಂಧವ್ಯ ಇಲ್ಲಿ ಪ್ರಾಮುಖ್ಯತೆ ವಹಿಸುತ್ತದೆ. ತಂದೆಯಾಗಿ ರವಿಚಂದ್ರನ್ ಸರ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಜೋಡಿ ಯಾರಾಗಬೇಕು ಎಂಬುದರ ಬಗ್ಗೆ ಚಿತ್ರತಂಡ ತಲೆ ಕೆಡಿಸಿಕೊಂಡಿದೆ ಎಂದರು ನಿರ್ದೇಶಕರು.
ಚಿತ್ರಕ್ಕೆ ರಾಜಸ್ಥಾನ, ಅಂಡಮಾನ್ ದ್ವೀಪ ಅಲ್ಲದೆ ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಈಗಾಗಲೇ 70ಕ್ಕೂ ಹೆಚ್ಚು ದಿನಗಳವರೆಗೆ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರವೂ ಬಂತು ಅವರಿಂದ.
ಭರತ್ ಹಾಗೂ ರಾಶಿಕಾ ಶೆಟ್ಟಿ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.
ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಪಳನಿ ಡಿ.ಸೇನಾಪತಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಬಾಲಿವುಡ್ ಗಾಯಕರಾದ ಶ್ರೇಯಾ ಘೋಷಾಲ್, ಸೋನು ನಿಗಮ್, ಕುನಾಲ್ ಗಾಂಜಾವಾಲ, ಪಲಾಕ್ ಮುಚ್ಚಲು ಜೊತೆಗೆ ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಕೂಡ ಚಿತ್ರದಲ್ಲಿ ಹಾಡಿದ್ದಾರೆ.
ಹಿರಿಯನಟ ಶ್ರೀನಿವಾಸ ಮೂರ್ತಿ, ವಿಜಯ ಸೂರ್ಯ, ಶಂಕರ್ ಅಶ್ವಥ್ ಉಳಿದ ಪಾತ್ರವರ್ಗದಲ್ಲಿದ್ದಾರೆ ಎಂಬ ಮಾಹಿತಿಗಳು ಬಂದವು.