ರೇಟಿಂಗ್ : 3.5/5
ನಿರ್ಮಾಣ : ಮನಸು ಮಲ್ಲಿಗೆ ಕಂಬೈನ್ಸ್ ಅರುಣ್ ಕುಮಾರ್
ನಿರ್ದೇಶನ : ನಂದಕುಮಾರ್ ಸಿ.ಎಂ.
ಪ್ರೇಮದ ಪರಸೆ ಮುಗ್ಧತೆಯೇ ವರಸೆ
ಅದು 90ರ ದಶಕದ ಕಾಲಘಟ್ಟ..!
ಒಬ್ಬ ಹುಡುಗ ಒಂದು ಹುಡುಗಿಯ ಜೊತೆ ಪ್ರೇಮ ನಿವೇದನೆ ಮಾಡುವುದು ಅತ್ಯಂತ ಕಠಿಣವೆನಿಸುವ ದಿನಗಳು..
ಒಂದು ವೇಳೆ ಪ್ರೇಮ ನಿವೇದನೆ ಮಾಡಿದರೂ ಪರಿಸರ, ಜನ, ಪರಿಸ್ಥಿತಿ ಬೇರೆ ಬೇರೆ ಮಾಡುವ ಶಕ್ತಿ ಹೊಂದಿದ್ದ ಆ ದಿನಗಳಲ್ಲಿ ಸಾಮಾನ್ಯ ಹುಡುಗನೊಬ್ಬ ಸಂಪ್ರದಾಯಸ್ತ ಕುಟುಂಬದ ಹುಡುಗಿಯನ್ನೇ ಪ್ರೇಮಿಸಿ ಆ ಮೂಲಕ ಪ್ರೇಮದ ಅಗ್ನಿಕುಂಡದಲ್ಲಿ ದಹಿಸಿ ಹೋಗುವ ಕಥಾನಕ.
ಟೈಗರ್ ಹೆಸರಿನ ಹುಡುಗ ಅಸಾಧ್ಯ ಒರಟ ಮತ್ತು ತುಂಟುತನವನ್ನೇ ಮೈದಳೆದ ಸೊಗಸುಗಾರಿಕೆಯ ಹುಡುಗ. ಚಿಕ್ಕ ವಯಸ್ಸಿನಲ್ಲೇ ತನ್ನ ಎಲ್ಲಾ ವರಸೆಗಳ ಮೂಲಕ ಹೆತ್ತವರಿಗೂ ತಲೆ ನೋವಾಗಿದ್ದ ಹುಡುಗ..
ಪರೀಕ್ಷೆಯಲ್ಲಿ ಫೇಲಾದರೆ ಆಗಿನ ಕಾಲಕ್ಕೆ ವರವಾಗಿ ಪರಿಣಮಿಸುತ್ತಿದ್ದದ್ದು ಆಟೋ ಎಂಬ ದುಡಿಮೆಯ ಮಾರ್ಗ. ಟೈಗರ್ ಕೂಡ ಅನಿವಾರ್ಯ ಆಟೋ ಚಾಲಕ.
ಇತ್ತ ಚಿಕ್ಕ ವಯಸ್ಸಿನಲ್ಲೇ ಟೈಗರ್ ಕಾಟದಿಂದ ನಲುಗಿದ್ದ ಪ್ರತಿಭಾ ಪುಷ್ಪವತಿಯಾಗುವ ಹೊತ್ತಿಗೆ ಅಸಾಧಾರಣ ಸೌಂದರ್ಯವತಿ.
ಈ ಇಬ್ಬರ ನಡುವೆ ಪ್ರೇಮ ಮೊಳೆಯುವುದೊಂದು ರೋಚಕ ಘಟ್ಟ. ಅದಕ್ಕಾಗಿ 90 ರ ದಶಕದ ಹುಡುಗರ ಸವಕಲು ವರಸೆಗಳ ಪ್ರದರ್ಶನ ನಡೆದೇ ತೀರುತ್ತದೆ.
ಸದಾ ಕಾಲವೂ ಮೋಡಗಳಿಂದ ಆವೃತವಾದ ಮತ್ತು ತಿಳಿ ಗಾಳಿಯಿಂದ ಕಂಗೊಳಿಸುವ ದೇವಾಲಯದ ತಪ್ಪಲು; ಊರಿನ ಒಳನೋಟ ಎಲ್ಲವೂ ಕ್ಯಾಮೆರಾ ಕಣ್ಣಿನಲ್ಲಿ ಸುಂದರ. ಪ್ರೀತಿ ಮೈದಳೆಯುವ ಹೊತ್ತಿಗೆ ಹೃದಯಕ್ಕೆ ಲಗ್ಗೆ ಇಡುವಷ್ಟು ಕಿವಿಗೆ ಇಂಪು ಮತ್ತು ಹೃದಯಕ್ಕೆ ಡಂಗೂರವಾಗುವಂತಹ ಸಂಗೀತ..
ಎರಡೂ ಹೃದಯಗಳು ಒಂದಾಗುವ ಆಹ್ಲಾದಕ್ಕಿಂತ ಪ್ರೇಮಿಗಳಿಗೆ ಎಲ್ಲಿ ಏನಾಗುವುದೋ ಎಂಬ ಆತಂಕವೇ ಮುಖ್ಯವಾಗುತ್ತದೆ. ಹುಡುಗಿಯನ್ನು ಪಾಪು ಎಂದು ಕರೆಯುವ ಹುಡುಗನ ಆರ್ದ್ರ ಹೃದಯ ಯಾರಿಗೂ ಅರ್ಥವಾಗುವುದಿಲ್ಲ.
ಹಾಗೆಯೇ ಬಚ್ಚಿಟ್ಟ ಪ್ರೇಮವನ್ನು ವ್ಯಕ್ತಪಡಿಸಲಾಗದೆ ಪರಿತಪಿಸುವ ಪ್ರತಿಭಾ ವರಸೆ ಟೈಗರ್ ಜೊತೆಗೆ ಪ್ರೇಕ್ಷಕನನ್ನೂ ಕಾಡುತ್ತದೆ. ಜೊತೆಗೆ ಇವರಿಬ್ಬರ ಅಸಹಾಯಕ ಪ್ರೇಮ ವೈರಾಗ್ಯವನ್ನೂ ಮೂಡಿಸುತ್ತದೆ.
‘ಓ ಮಳೆಯೇ ಕಾಪಾಡು..’ ಎಂಬ ಎರಡು ವರಸೆಯ ಹಾಡಿನಲ್ಲಿ ಪ್ರಕೃತಿಯ ತಂಪು ಸಂಗೀತದ ಇಂಪು ಕಣ್ಣಿಗೆ ಕಿವಿಗೆ ರಾಚುತ್ತದೆ.
ಆದರೆ
ಆರಂಭದಲ್ಲಿ ಚಿಕ್ಕ ಹುಡುಗರ ಬಿಲ್ಡಪ್
ವರಸೆಗಳು; ಇನ್ನೂ ಟೈಗರ್ ಯಾರು ಎಂಬುದು ಅರಿವಾಗುವ ಮುನ್ನವೇ ಬರುವ ರಾಜೇ ಬಹದ್ದೂರ್ ನ ದೌರ್ಜನ್ಯದ ಹಾಡು; ಘನ ಘೋರ ವಿಧಿಯಾಟ ಭೂಗರ್ಭ ನಡುಗುತ್ತಿದೆ ಎಂಬ ಸನ್ನಿವೇಶಕ್ಕೆ ಹೊಂದಾಣಿಕೆ ಆಗದ ಗೀತೆ ಬೇಕಿರಲಿಲ್ಲ ಎನಿಸುತ್ತದೆ.
ಅದೇ ರೀತಿ ಚಿತ್ರದ ಅಂತಿಮ ಘಟ್ಟದ ಅತಿಯಾದ ಎಳೆತ ಪ್ರೇಕ್ಷಕನ ಸಹನೆ ಪರೀಕ್ಷೆ ಮಾಡುತ್ತದೆ. ಅತಿಯಾದ ನಾಟಕೀಯ ಎಂಬಂತಹ ದೃಶ್ಯಗಳಿಗೆ ಕತ್ತರಿ ಹಾಕಿದ್ದರೇ ಇದು ನಿಜಕ್ಕೂ ಅತ್ಯುತ್ತಮ ಪ್ರೇಮ ಕಾವ್ಯ..!
ಯುವ ನಟ ಅರುಣ್ ಹಾಗೂ ರಾಣಿ ವರದ್ ನಾಯಕ ಇಬ್ಬರೂ ಸ್ಪರ್ಧೆಗಿಳಿದು ನಟಿಸಿದ್ದಾರೆ. ನಿರ್ಮಾಪಕ ಅರುಣ್ ಕುಮಾರ್ ನಟನೆ ಕೂಡ ಗಮನ ಸೆಳೆಯುತ್ತದೆ.
ಮಹಾರಾಜ ಸಂಗೀತ ಹಾಗೂ ಹಾಲೇಶ್ ಛಾಯಾಗ್ರಹಣ ಚಿತ್ರದ ಸೊಗಸುಗಾರಿಕೆ ಹೆಚ್ಚಿಸುವಲ್ಲಿ ನೆರವಾಗಿವೆ.