ರೇಟಿಂಗ್ : 3.5/5
ನಿರ್ಮಾಣ : ಸಮೂಹ ಹೂಡಿಕೆ
ನಿರ್ದೇಶನ : ಮಧುಚಂದ್ರ
ಅವಳದಲ್ಲ ಅವನ ಕಥೆ..
ಕೆಲವೊಮ್ಮೆ ಮಾರುವೇಷದಿಂದ ಅದ್ಭುತ ಪವಾಡಗಳು ಸಂಭವಿಸುತ್ತವೆ. ಇಲ್ಲಿಯೂ ಹಾಗೆ ಅವನು ಹಾಕುವ ಅವಳ ವೇಷ ಗಂಡಸರಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸುತ್ತದೆ.
ಮಂಡ್ಯ ಭಾಷೆ ಮಾತನಾಡುವ ರಾಜ ಎಂಬ ಮುದ್ದಾದ ಯುವಕ ಮಂಜನ ಸಹವಾಸದಿಂದ ಹೆಣ್ಣು ವೇಷ ಹಾಕಿ ಮಾಡುವ ಸರ್ಕಸ್ ಇಲ್ಲಿ ಗಟ್ಟಿಯಾದ ಮನರಂಜನೆ ಒದಗಿಸುತ್ತದೆ.
ಪೊಲೀಸ್ ಆಗಿರುವ ಅಪ್ಪನ ಕಾಠಿಣ್ಯ ನಿಲುವಿಗೆ ಹೆದರಿ ಬದುಕುತ್ತಿದ್ದ ರಾಜ ಓದಿದ್ದು ಎಂಜಿನಿಯರಿಂಗ್ ಆದರೂ ಅವನ ಒಲವು ಒಣ್ಣದ ಬದುಕಿನ ಕಡೆಗೆ..
ಅಮೆರಿಕಾದಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರಿಂದ ಮರೆಯಾಗುವ ರಾಜನಿಗೆ ಹೆಣ್ಣು ವೇಷ ಹಾಕುವ ಅವಕಾಶ. ಬಳಿಕ ಚಿತ್ರದಲ್ಲಿ ನಟಿಸಲು ಅವಕಾಶ. ಮುಂದೆ ದೊಡ್ಡ ನಟಿಯಾಗಿ ಹೊಮ್ಮಿದಾಗ ಸುತ್ತಲೂ ಆವರಿಸುವ ಆಹ್ಲಾದಕರ ಸನ್ನಿವೇಶಗಳೇ ಕಥಾ ವಸ್ತು.
ರಾಣಿಯನ್ನು ಪ್ರೇಮಿಸುವ ನಿರ್ದೇಶಕ. ಹೆಣ್ಣು ವೇಷದಲ್ಲಿದ್ದೇ ನಟಿ ದೀಪಿಕಾ ಳನ್ನು ಪ್ರೇಮಿಸುವ ರಾಜ; ರಾಣಿಗೆ ಎದುರಾಗಿ ಮತ್ತೊಬ್ಬ ಹೀರೋ ಆತ ರಾಜನೇ ಆಗಿರುವುದು ಹೀಗೆ ಒಂದಕ್ಕೊಂದು ಬೆಸುಗೆ ಬಿಡಿಸುವಾಗಲೇ ಮೈದಳೆಯುವ ಅಮೋಘ ರಾಜನ ಕಥೆ.
ಹೀಗೆ ಮನರಂಜನೆಯ ಮಹಾಪೂರದಲ್ಲಿ ಪ್ರೇಕ್ಷಕ ಕೊಚ್ಚಿ ಹೋಗದಿದ್ದರೆ ಅದು ಅವನ ತಪ್ಪು. ರಾಜ ಮತ್ತು ರಾಣಿಯ ಪಾತ್ರವನ್ನು ನಿರ್ವಹಿಸಿರುವ ದೀಪಕ್ ಸುಬ್ರಹ್ಮಣ್ಯ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ನಟಿ ಪಾರ್ವತಿ ನಾಯರ್ ಹಾಗೂ ಉಳಿದ ಪಾತ್ರಗಳು ಕಾಮಿಡಿ ವಸ್ತುವಿಗೆ ಪೂರಕವಾಗಿವೆ.
ಚಿತ್ರದೊಳಗೊಬ್ಬ ನಿರ್ದೇಶಕನ ಪಾತ್ರದಲ್ಲಿ ನಿರ್ದೇಶಕ ಮಧುಚಂದ್ರ ಪಾತ್ರವೂ ಗಮನಾರ್ಹ. ಸಂಪೂರ್ಣ ನಗೆಯ ಚಿತ್ರವಾಗಿ ಮಿಸ್ಟರ್ ರಾಣಿ ನಿಲ್ಲುತ್ತದೆ.
ಒಮ್ಮೆ ನಕ್ಕು ಹೊರಬರಲು ರಾಣಿಯನ್ನು ನೋಡಲು ಪ್ರೇಕ್ಷಕ ಖಂಡಿತಾ ಮನಸ್ಸು ಮಾಡಬಹುದು.