ರೇಟಿಂಗ್ : 3/5
ನಿರ್ಮಾಣ : ತನು ಚಿತ್ರ
ನಿರ್ದೇಶನ : ಸಂಜೋತಾ ಭಂಡಾರಿ
ಒಂದು ಪುಟಗೋಸಿ ಕಥೆ..
ಮೊದಲಿಗೆ ಇದು ಸಂಪ್ರದಾಯದ ಕಥೆ. ಆನಂತರ ಕವಲೊಡೆದು ಯಾವ ಯಾವ ಕಡೆ ತಿರುಗುತ್ತದೆ ಎಂಬುದು ನಿಗೂಢ..
ಸಂಪ್ರದಾಯದ ನೆಲೆಯಲ್ಲಿ ಲಂಗೋಟಿ ಮನೆತನದ ಗುರುತು. ಅದರ ನೆಲೆ ಬೆಲೆ ಉಳಿಸಲು ಹಿರಿಯ ವ್ಯಕ್ತಿ ಶ್ರಮವಹಿಸಿದರೆ, ಅವರ ಮೊಮ್ಮಗ ಅದರಿಂದ ಅನುಭವಿಸುವ ಕಿರಿಕಿರಿ ನೋವು, ಹತಾಶೆ ಮತ್ತು ಅದರಿಂದ ಎದುರಾಗುವ ಸಂಕಟಗಳನ್ನು ನೈಜವಾಗಿ ತೋರುವ ಪ್ರಯತ್ನವೇ ಸಿನಿಮಾ..
ಲಂಗೋಟಿ ಎಂಬುದು ಇಲ್ಲಿ ಕೇವಲ ಸಾಂಕೇತಿಕ. ನಿಜವಾಗಿ ಅದು ಮುಖ್ಯ ಪಾತ್ರಧಾರಿಯ ಹೆಸರು. ಲಂಕಾಪುರದ ಗೋವಿಂದಾಚಾರ್ಯ ತೀರ್ಥ (ಲಂಗೋಟಿ). ಆತನೇ ಲಂಗೋಟಿ ಮ್ಯಾನ್.
ಕೌಪಿನಾ ತೊಡುವುದನ್ನು ಹಿಂಸೆ ಎಂದು ಭಾವಿಸುವ ತೀರ್ಥನಿಗೆ ತಾತ ವಿಧಿಸುವ ಕಟ್ಟುಪಾಡುಗಳು ಮತ್ತೂ ಹಿಂಸೆ. ಲಂಗೋಟಿ ಬದಲು ಸುಂದರವಾದ ಬ್ರಾಂಡೆಡ್ ಅಂಡರ್ ವೇರ್ ತೊಡುವ ಆಶಯದಲ್ಲಿ ಕನಸುಗಳನ್ನು ಗುಡ್ಡೆ ಹಾಕಿಕೊಂಡಿರುವಾಗ ನಡೆಯ ಬಾರದ್ದೆಲ್ಲಾ ನಡೆಯುತ್ತದೆ.
ಲಂಗೋಟಿಯಿಂದ ಆರಂಭವಾಗಿ ಕಥೆ ಎಲ್ಲೆಲ್ಲೋ ಸುತ್ತುವ ಪರಿ ಪ್ರೇಕ್ಷಕನನ್ನು ಸುಸ್ತು ಮಾಡುತ್ತದೆ. ಚಿತ್ರದ ಸುದೀರ್ಘ ಎಳೆತದಿಂದ ಏನಾಗುತ್ತಿದೆ ಎಂಬುದೆಲ್ಲಾ ಮರೆತು ಹೋಗುವ ಹೊತ್ತಿಗೆ ಮತ್ಯಾವುದೋ ಪ್ರೇಮಕಥೆ ಸುತ್ತಿಕೊಳ್ಳುತ್ತದೆ.
ಉಸಿರುಗಟ್ಟಿಸುವ ಸಂಪ್ರದಾಯದಿಂದ ಆಧುನಿಕ ಸಮಾಜದಲ್ಲಿ ಏನೆಲ್ಲಾ ಅವಾಂತರ ಸೃಷ್ಟಿಯಾಗಬಲ್ಲದು ಎಂಬ ಒನ್ ಲೈನ್ ಸ್ಟೋರಿಯನ್ನು ವಸ್ತ್ರಗಳಿಂದ ಎಳೆದಾಡಿ ಇತ್ತ ಸಂಪ್ರದಾಯ ಮತ್ತು ಅತ್ತ ಆಧುನಿಕತೆ ಎರಡನ್ನೂ ರಬ್ಬರ್ ನಂತೆ ಎಳೆದಾಡಿರುವ ಕಥೆಯಲ್ಲಿ ಕಾಣ ಸಿಗುವುದು ಎರಡು ಬಗೆಯ ಪೇಚಾಟ. ಒಂದು ಕಥಾ ನಾಯಕ ತೀರ್ಥ; ಇನ್ನೊಂದು ಪ್ರೇಕ್ಷಕ..
ಆಕಾಶ್ ರಾಂಬೋ ಮತ್ತು ಇನ್ಸ್ ಪೆಕ್ಟರ್ ಸಂಹಿತಾ ವಿನ್ಯಾ, ಹುಲಿ ಕಾರ್ತಿಕ್ ಪಾತ್ರಗಳು ಗಮನಾರ್ಹ ಇನ್ನುಳಿದಂತೆ ಬಂದು ಹೋಗುವ ಪಾತ್ರಗಳು. ನಿರ್ದೇಶಕರು ಚಿತ್ರದ ತಾಂತ್ರಿಕತೆ, ಸಂಗೀತ ಮೊದಲಾದ ವಿಷಯಗಳ ಬಗ್ಗೆ ಗಮನ ಹರಿಸದೇ ಇರುವುದು ಎದ್ದು ಕಾಣುತ್ತದೆ.