ಆನ್ ಲೈನ್ ಮೂಲಕ ನಡೆಯುವ ಆಟಗಳು ಯುವ ಸಮೂಹಗಳನ್ನು ಯಾವ ರೀತಿ ದಾರಿ ತಪ್ಪಿಸಿ ಸಂಕಷ್ಟಕ್ಕೆ ದೂಡಿವೆ ಎಂಬುದರ ಸುತ್ತ ಕಥೆ ಹೆಣೆಯಲಾಗಿರುವ ‘ರಮ್ಮಿ ಆಟ’ ಚಿತ್ರದ ಹಾಡು ಮತ್ತು ಟ್ರೈಲರ್ ಬಿಡುಗಡೆಗೊಳಿಸಲಾಯಿತು.
ವಿದ್ಯಾಸಂಸ್ಥೆ ನಡೆಸುತ್ತಿರುವ ಉಮರ್ ಷರೀಫ್ ನಿರ್ಮಾಣದ ಜೊತೆಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ.
ಆನ್ ಲೈನ್ ಆಟಗಳು ಈಗಿನ ಯುವ ಸಮೂಹವನ್ನು ಹೇಗೆ ಹಾಳು ಮಾಡುತ್ತಿವೆ; ಅದರಿಂದ ಏನೆಲ್ಲ ಅನಾಹುತಗಳಾಗುತ್ತಿವೆ ಎಂಬ ಪರಿಕಲ್ಪನೆಯಲ್ಲಿ ‘ರಮ್ಮಿ ಆಟ’ ಚಿತ್ರ ಮೂಡಿ ಬಂದಿದೆ.
ರಮ್ಮಿ ಗೇಮ್ ನಂತಹ ಆಟಗಳ ಚಟಕ್ಕೆ ಬಿದ್ದ ಕೆಲವರು ತಮ್ಮ ಮನೆ ಮಠ ಕಳೆದುಕೊಂಡು ಜೀವನವನ್ನೇ ಸರ್ವನಾಶ ಮಾಡಿಕೊಂಡಿದ್ದಾರೆ. ಹಣದಾಸೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆನ್ ಲೈನ್ ರಮ್ಮಿ ಆಡುವುದರಿಂದ ಏನೇನು ತೊಂದರೆಗಳಾಗುತ್ತವೆ, ಜನರು ಹೇಗೆಲ್ಲ ಮೋಸ ಹೋಗುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ ಎಂಬ ವಿವರಗಳು ಬಂದವು.
ಈಚೆಗೆ ನಡೆದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಜರಿದ್ದರು.
ಈ ಚಿತ್ರವನ್ನು ಪೋಷಕರೆಲ್ಲರೂ ನೋಡಬೇಕು. ಮುಖ್ಯವಾಗಿ ತಮ್ಮ ಮಕ್ಕಳು ಮೊಬೈಲ್ ನಲ್ಲಿ ಏನು ಮಾಡುತ್ತಿದ್ದಾರೆಂದು ತಿಳಿದುಕೊಳ್ಳಬೇಕು. ಶಾಲೆ ನಡೆಸುತ್ತಿರುವ ಷರೀಫ್ ಈ ಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಾರೆ ಎಂದರು ಉಮೇಶ್ ಬಣಕಾರ್.
ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ನೀಡಿದ್ದು, ನೆರಳು ಮೀಡಿಯಾದ ಹನಿಮೇಶ್ ಪಾಟೀಲ್ ಲಿಖಿತ್ ಫಿಲಂಸ್ ನ ರಮೇಶ್ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ.
ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಎಯ್ಟ್ ಏಂಜಲ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಚಿತ್ರಕ್ಕೆ ಕಾರ್ತೀಕ್ ಎಸ್. ಛಾಯಾಗ್ರಹಣ, ಉಮರ್ ಸಂಭಾಷಣೆ, ಅಮೀರ್ ಸಾಹಸ, ಪ್ರಭು ಎಸ್.ಆರ್. ಸಂಗೀತ ನಿರ್ದೇಶನವಿದೆ.
ರಾಘವ ಸೂರ್ಯ, ಸಯ್ಯದ್ ಇರ್ಫಾನ್, ವಿನ್ಯಾ ಶೆಟ್ಟಿ, ಸ್ನೇಹಾರಾವ್, ನಂದಿನಿಗೌಡ, ಅಭಿಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್, ಪಾವನ ಲಿಂಗಯ್ಯ, ಗಿರೀಶ, ಮೋಹನ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ಅಂದ ಹಾಗೆ ಚಿತ್ರವು ಇದೇ ವಾರ ಅಂದರೆ (ಸೆಪ್ಟೆಂಬರ್ 20ರಂದು) ತೆರೆ ಕಾಣುತ್ತಿದೆ.