* ಹಗ್ಗ ಟೀಸರ್ ಬಿಡುಗಡೆ *
* ಅನು ಕಲಾ ಸಾಧನೆಯ ಹಿಗ್ಗು *
* ತಾಯಿಯಾಗುವ ಕನಸಿನ ಹರ್ಷ *
ಅದು ‘ಹಗ್ಗ’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ. ಆದರೆ ನಿಜವಾಗಿ ಅದು ಇಬ್ಬರು ಕಲಾವಿದೆಯರ ಹರ್ಷೋಲ್ಲಾಸದ ಕ್ಷಣಗಳಿಗೆ ಕಾರಣವಾದ ಕಾರ್ಯಕ್ರಮವಾಯಿತು..
ಸಿನಿಮಾ ರಂಗಕ್ಕೆ ನಾಯಕ ನಟಿಯಾಗಿ ಪ್ರವೇಶ ಪಡೆದು 25 ವರ್ಷಗಳಾದ ಸಂಭ್ರಮದಲ್ಲಿ ಅನು ಪ್ರಭಾಕರ್ ಮತ್ತು ತಾಯಿಯಾಗುವ ಕನಸಿನಲ್ಲಿದ್ದ ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚ ಅವರಿಗೆ ಸೀಮಂತ ಶಾಸ್ತ್ರದ ಮೂಲಕ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದು ‘ಹಗ್ಗ’ ಚಿತ್ರತಂಡ.
ಈ ಇಬ್ಬರೂ ನಟಿಯರು ಹಗ್ಗ ಚಿತ್ರದ ಭಾಗವಾಗಿರುವುದು ಹೆಮ್ಮೆ ಎಂಬ ಭಾವದಲ್ಲಿ ಚಿತ್ರತಂಡ ತೇಲಾಡಿದರೆ, ಇಂತಹ ಮಹತ್ವ ಪೂರ್ಣ ಕಾರ್ಯಕ್ರಮದ ಭಾಗವಾಗಿ ಗಾಯತ್ರಿ ಪ್ರಭಾಕರ್, ಪ್ರಿಯಾಂಕ ಉಪೇಂದ್ರ ಹಾಗೂ ರಘು ಮುಖರ್ಜಿ ಪಾಲ್ಗೊಂಡಿದ್ದರು.
ಅನು ಪ್ರಭಾಕರ್ ಮೊದಲು ನಟಿಸಿದ ‘ಹೃದಯ ಹೃದಯ’ ಚಿತ್ರ ತೆರೆಕಂಡಿದ್ದು 1999ರ ಸೆಪ್ಟೆಂಬರ್ 16ರಂದು. ಆನಂತರ ಅನು ಪ್ರಭಾಕರ್ ನಟಿಯಾಗಿ ಬೆಳೆದಿದ್ದು ‘ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ..’ ಎಂದು ಹಾಡಿಸಿಕೊಂಡಿದ್ದು ಜನಜನಿತ. ಆದರೆ ಹಗ್ಗ ಚಿತ್ರದಲ್ಲಿ ಭಯ ಹುಟ್ಟಿಸುವ ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಗ್ಗದ ಪರಿಕಲ್ಪನೆ ವಿಶಿಷ್ಟವು, ವಿಕ್ಷಿಪ್ತವೂ ಆಗಿದ್ದು ಅದನ್ನು ತೆರೆಯ ಮೇಲೆ ನೋಡಬೇಕು ಎಂದಿತು ಚಿತ್ರತಂಡ. ಇದು ಹಾರರ್ ಜಾನರ್ ನ ಚಿತ್ರ ಪ್ರೇಕ್ಷಕನಿಗೆ ಪ್ರತಿ ಕ್ಷಣವು ಕುತೂಹಲ ಮೂಡಿಸುತ್ತದೆ ಎಂದರು ನಿರ್ಮಾಪಕ ರಾಜ್ ಭಾರದ್ವಾಜ್.
ಇದೊಂದು ತಾಂತ್ರಿಕತೆಯ ಬಗ್ಗೆ ಹೇಳುವ ತಾಂತ್ರಿಕ ಸಿನಿಮಾ ಎಂಬುದು ನಿರ್ದೇಶಕ ಅವಿನಾಶ್ ಅಭಿಪ್ರಾಯ. ಹಗ್ಗ ಈಗಾಗಲೇ ವಿನೂತನ ಗ್ರಾಫಿಕ್ಸ್ ಹಾಗೂ ವಿಎಫ್ ಎಕ್ಸ್ ನ ತಂತ್ರಜ್ಞಾನ ಬಳಸಿಕೊಂಡು ಗಮನ ಸೆಳೆದಿದೆ ಎಂಬುದು ಹೆಮ್ಮೆಯ ವಿಚಾರ ಎಂದರು.
ರಾಜ್ ಭಾರದ್ವಾಜ್ ಅವರ ಸಹೋದರ ವೇಣು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ದಯಾಳ್ ಅವರು ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಚಿತ್ರ ನಿಜವಾಗಿ ವಿಶೇಷತೆಯಿಂದ ಕೂಡಿದೆ ಎಂದು ಹೇಳಿದರು.
ನಟ ತಬಲ ನಾಣಿ, ರಘು ಮುಖರ್ಜಿ ಹಾಗೂ ಪ್ರಿಯಾಂಕ ಉಪೇಂದ್ರ ಚಿತ್ರತಂಡಕ್ಕೆ ಶುಭ ಹಾರೈಸಿದರು. ಗಾಯತ್ರಿ ಪ್ರಭಾಕರ್ ಹಿಂದಿನ ಚಿತ್ರರಂಗದ ಗೋಲ್ಡನ್ ಯುಗದ ಮೆಲುಕು ಹಾಕಿದರು.