ಪೂಜಾ ವಸಂತಕುಮಾರ್ ನಿರ್ಮಾಣದ, ಸೂರಿ ಕುಂದರ್ ನಿರ್ದೇಶನದ ಹಾಗೂ ಪ್ರವೀಣ್ ತೇಜ್ ಮುಖ್ಯ ಪಾತ್ರದಲ್ಲಿರುವ ‘ಜಿಗರ್’ ಚಿತ್ರಕ್ಕೆ ಮರು ಚೇತರಿಕೆ ಸಿಕ್ಕಿದ್ದು ಟ್ರೈಲರ್ ಬಿಡುಗಡೆಗೊಂಡಿದೆ.
ಕನ್ನಡದ ಹೆಸರಾಂತ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಟ್ರೈಲರ್ ಮೂಲಕ ಕುತೂಹಲ ಮೂಡಿಸಿರುವ ಈ ಚಿತ್ರ ಜುಲೈ 5ರಂದು ತೆರೆಗೆ ಬರುತ್ತಿದೆ. ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ವಿವರ ನೀಡಿದರು.
ನಟ ಪ್ರವೀಣ್ ತೇಜ್ ಅವರ ಪ್ರಕಾರ ಜಿಗರ್ ಎಂದರೆ ಹೆದರಿಕೆ ಇಲ್ಲದ ಎಂಬ ಅರ್ಥ ಬರುತ್ತದೆ. ಇಲ್ಲಿನ ನಾಯಕ ಹೆದರಿಕೆ ಇಲ್ಲದ ಧೈರ್ಯಶಾಲಿ. ಪ್ರೇಮಕಥೆಗಳಿಗೆ ಬದಲಾಗಿ ಹೊಡೆದಾಟ ಮಾಡಿರುವೆ ಎಂದು ಹೇಳಿಕೊಂಡರು ಪ್ರವೀಣ್.
ಉತ್ಸಾಹಿ ಯುವಕನೊಬ್ಬ ಫಿಶ್ ಟೆಂಡರ್ ಶಿಪ್ ನಲ್ಲಿ ಭಾಗಿಯಾಗುತ್ತಾನೆ. ಆ ಮೂಲಕ ಭೂಗತ ಲೋಕಕ್ಕೂ ಕಾಲಿಡುತ್ತಾನೆ. ಅಲ್ಲಿ ನಡೆಯುವ ಹೋರಾಟವೇ ಪ್ರಮುಖ. ಮುಖ್ಯವಾದ ಕಥಾ ಹಂದರ. ಇದರೊಟ್ಟಿಗೆ ಲವ್, ಆಕ್ಷನ್, ಕಾಮಿಡಿ ಕೂಡ ಇದೆ ಎಂಬ ವಿವರ ಬಂತು.
ಸುಮಾರು ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿ ಕೊಂಡು ಇದೀಗ ಸ್ವತಂತ್ರ ಚಿತ್ರ ಮಾಡಿರುವುದಾಗಿ ಹೇಳಿಕೊಂಡರು ನಿರ್ದೇಶಕ ಸೂರಿ ಕುಂದರ್.
ಸಾಕಷ್ಟು ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಬೆನ್ನಿಗಿದೆ. ಜಿಗರ್ ಎಂದರೆ ಎರಡು ಗುಂಡಿಗೆವುಳ್ಳವನು ಹಾಗೂ ಯಾವುದಕ್ಕೂ ಅಂಜದವನು ಎಂದು ಅರ್ಥ ಬರುತ್ತದೆ. ಮಲ್ಪೆ , ಉಡುಪಿ, ಕುಂದಾಪುರ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂಬ ವಿವರ ಕೊಟ್ಟರು.
ನಟಿ ವಿಜಯಶ್ರೀ, ನಟ ಯಶ್ ಶೆಟ್ಟಿ, ಧರ್ಮ, ದಿಲೀಪ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್, ಗೀತರಚನೆಕಾರ ಗಣೇಶ್, ಛಾಯಾಗ್ರಾಹಕ ಶಿವಸೇನ ಈ ಸಂದರ್ಭದಲ್ಲಿ ಹಾಜರಿದ್ದರು.