ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ ರವಿ ಕುಮಾರ್ ನಿರ್ಮಾಣದಲ್ಲಿ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ‘ಪುರುಷೋತ್ತಮನ ಪ್ರಸಂಗ’.
ಸದ್ಯ ಚಿತ್ರವು ಬಿಡುಗಡೆಗೆ ಸಿದ್ದವಾಗಿದ್ದು, ಫೆಬ್ರವರಿಯಲ್ಲಿ ತೆರೆಗೆ ಬರಲಿದೆ ಎಂಬ ಮಾಹಿತಿ ನೀಡಿತು ಚಿತ್ರತಂಡ.
ತುಳುವಿನಲ್ಲಿ ಒಂಭತ್ತು ಚಿತ್ರಗಳನ್ನು ನಿರ್ದೇಶನ ಮಾಡಿರುವ ದೇವದಾಸ್ ಕಾಪಿಕಾಡ್ ಕನ್ನಡದಲ್ಲಿ ಇದು ಮೊದಲ ಚಿತ್ರ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ನೈಜಘಟನೆ ಆಧಾರಿತ ಚಿತ್ರ ಎಂಬ ವಿವರಣೆಗಳು ಬಂದವು.
ಪುರುಷೋತ್ತಮನ ಪಾತ್ರದಲ್ಲಿ ನಿರ್ಮಾಪಕ ರವಿಕುಮಾರ್ ಪುತ್ರ ಅಜಯ್ ಅಭಿನಯಿಸಿದ್ದು, ಅವರು ಈ ಪಾತ್ರಕ್ಕೆ ಹೇಳಿ ಮಾಡಿಸಿದ ನಟ. ಏಕೆಂದರೆ ಅವರು ವಿದೇಶದಲ್ಲಿ ಸಿನಿಮಾ ಕುರಿತು ಅಧ್ಯಯನ ಮಾಡಿ ಬಂದಿದ್ದಾರೆ. ರಿಷಿಕಾ ನಾಯ್ಕ್ ಅವರ ಎದುರು ನಟಿಸಿದ್ದಾರೆ.
ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದ ಕಲಾವಿದರು ಇತರ ತಾರಾ ಬಳಗದಲ್ಲಿ ಇದ್ದಾರೆ.
ನಿರ್ದೇಶಕರೂ ಒಂದು ಪಾತ್ರದಲ್ಲಿ ನಟಿಸಿದ್ದು, ಅವರ ಪುತ್ರ ಅರ್ಜುನ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನದಲ್ಲಿ ನಾಲ್ಕು ಹಾಡುಗಳು ಮೂಡಿಬಂದಿವೆ. ಜಯಂತ ಕಾಯ್ಕಿಣಿ, ದೊಡ್ಡರಂಗೇ ಗೌಡ, ವಿ.ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ.
ವಿಷ್ಣು ಈ ಚಿತ್ರದ ಛಾಯಾಗ್ರಾಹಕರು. ಮಂಗಳೂರು ಹಾಗೂ ದುಬೈನಲ್ಲಿ ಚಿತ್ರೀಕರಣ ಮಾಡಲಾಗಿದೆ. ಫೆಬ್ರವರಿ ಮಧ್ಯ ಭಾಗದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕರು ವಿವರಣೆ ಕೊಟ್ಟರು.
ನಿರ್ಮಾಪಕ ವಿ.ರವಿಕುಮಾರ್, ಶಂಶುದ್ದೀನ್ ಚಿತ್ರದ ಕುರಿತು ಮಾತನಾಡಿದರು. ಶರ್ಮಿಳಾ ಕಾಪಿಕಾಡ್ ಚಿತ್ರಕ್ಕೆ ಶುಭ ಹಾರೈಸಿದರು.