ಯುವನಟ ಅಭಯ್ ಚಂದ್ರಶೇಖರ್ ಮುಖ್ಯ ಪಾತ್ರದಲ್ಲಿರುವ ಸಂಪೂರ್ಣ ಗ್ರಾಮೀಣ ಭಾಗದ ಚಿತ್ರಣ ಹೊಂದಿರುವ ‘ಮಂಡ್ಯ ಹೈದ’ ಚಿತ್ರಕ್ಕೆ ಯು/ಎ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದೆ.
ಮಂಡ್ಯದ ಹುಡುಗನೊಬ್ಬನ ಪ್ರೇಮ ಮತ್ತು ಅದರ ಸುತ್ತ ನಡೆಯುವ ಘಟನೆಗಳು ಥ್ರಿಲ್ ಆಶಯಗಳನ್ನು ಹೊಂದಿರುತ್ತದೆ. ಚಿತ್ರದಲ್ಲಿ ಮಂಡ್ಯ ಹೈದನಾಗಿ ಯುವನಟ ಅಭಯ್ ಚಂದ್ರಶೇಖರ್ ಕಾಣಿಸಿಕೊಂಡಿಸಿದ್ದು, ಅವರ ಎದುರು ಭೂಮಿಕಾ ನಟಿಸಿದ್ದಾರೆ.
ಈ ಹಿಂದೆ ‘ಮನಸಾಗಿದೆ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಅಭಯ್, ಈಗ ಎರಡನೇ ಚಿತ್ರದಲ್ಲಿ ಪಕ್ಕಾ ಮಂಡ್ಯಹುಡುಗನಾಗಿ ಹೊರ ಹೊಮ್ಮಿದ್ದಾರೆ. ವಿ.ಶ್ರೀಕಾಂತ್ ನಿರ್ದೇಶನದ ಚಿತ್ರವನ್ನು ಅಭಯ್ ತಂದೆ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.
ತೇಜಸ್ ಕ್ರಿಯೇಶನ್ಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದ್ದು, ಸದ್ಯದಲ್ಲೇ ಚಿತ್ರದ ಮತ್ತೊಂದು ಡ್ಯುಯೆಟ್ ಹಾಡನ್ನು ಬಿಡುಗಡೆ ಮಾಡುವ ಆಶಯವನ್ನು ಚಂದ್ರಶೇಖರ್ ಹೊರ ಹಾಕಿದ್ದಾರೆ.
ಪ್ರೀತಿಯನ್ನು ಪಡೆಯುವ ಹೋರಾಟದಲ್ಲಿ ಸಾವು ನೋವು ಕೂಡ ಎದುರಾಗಬಹುದು. ಇಂತಹ ಸನ್ನಿವೇಶವನ್ನು ಯುವ ಜೋಡಿ ಹೇಗೆ ಎದುರಿಸಬಲ್ಲದು ಎಂಬುದು ಕಥಾವಸ್ತು.
ಚಿತ್ರದಲ್ಲಿ ಐದು ಹಾಡುಗಳಿದ್ದು, ಸುರೇಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮನುಗೌಡ ಛಾಯಾಗ್ರಹಣವಿದೆ.
ಬ.ಲ.ರಾಜವಾಡಿ, ಸುನಂದ ಅಲ್ಲದೆ ನಿರ್ಮಾಪಕ ಚಂದ್ರಶೇಖರ್ ಕಥೆಗೆ ತಿರುವು ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.