ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ಅಪಾರವಾಗಿ ಮೆಚ್ಚಿಕೊಂಡಿದ್ದ ‘ರಂಗ ಸಮುದ್ರ’ ಚಿತ್ರವು ಇದೇ 12 (ಜನವರಿ 12)ರಂದು ತೆರೆ ಕಾಣುತ್ತಿದೆ.
ವಿಶೇಷವೆಂದರೆ ನಟ ರಾಘವೇಂದ್ರ ರಾಜ್ ಕುಮಾರ್ ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನು ನಿರ್ವಹಿಸಿದ್ದಾರೆ.
ರಂಗಾಯಣ ರಘು ಮುಖ್ಯ ಪಾತ್ರದಲ್ಲಿರುವ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಈಚೆಗೆ ಜರುಗಿತು. ರಾಘವೇಂದ್ರ ರಾಜ್ ಕುಮಾರ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಣ ಎಂಬುದು ಅತ್ಯಂತ ಅನಿವಾರ್ಯ. ಇದು ಅವಶ್ಯಕತೆನಾ ಅಥವಾ ಅನಿವಾರ್ಯವೇ ಎಂಬುದನ್ನು ಈ ಚಿತ್ರ ಬಿಂಬಿಸುತ್ತದೆ. ಹಾಗಾಗಿ ಇದು ಸಾಮಾಜಿಕ ಕಳಕಳಿಯ ಚಿತ್ರವಾಗುತ್ತದೆ ಎಂದರು ರಾಘವೇಂದ್ರ ರಾಜ್ ಕುಮಾರ್.
ಪುನೀತ್ ರಾಜ್‍ಕುಮಾರ್ ಅವರು ಈ ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಆದರೆ ದೈವೇಚ್ಚೆ ಏನಿದೆಯೋ. ಚಿತ್ರವನ್ನು ಅದ್ದೂರಿ ಹಾಗೂ ಕಲಾತ್ಮಕ ನೆಲೆಯಲ್ಲಿ ಮಾಡಿರುವುದು ವಿಶೇಷ ಎಂದರು ರಂಗಾಯಣ ರಘು.
ನಿರ್ದೇಶಕ ರಾಜಕುಮಾರ್ ಅಸ್ಕಿ ಹೇಳಿದ ಕಥೆ ಇಷ್ಟವಾಯಿತು. ತಕ್ಷಣ ಒಪ್ಪಿಕೊಂಡೆ. ಜನಪದ ಸೊಗಡಿನ ಈ ಸಿನಿಮಾ ಚಿತ್ರೀಕರಣ ಕರ್ನಾಟಕ ಹಾಗೂ ಮಹಾರಾಷ್ಟ್ರದ ಅದ್ಭುತ ಸ್ಥಳಗಳಲ್ಲಿ ನಡೆದಿದೆ. ಮುಖ್ಯವಾಗಿ ರಾಘವೇಂದ್ರ ರಾಜಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ ಎಂಬುದೂ ಖುಷಿಯ ವಿಚಾರ ಎಂದರು.
‘ರಂಗ ಸಮುದ್ರ’ ಎಂದರೆ ಊರಿನ ಹೆಸರು. ಈ ಕಥೆಯನ್ನು ನಿರ್ಮಾಪಕ ಹೊಯ್ಸಳ ಕೊಣನೂರು ಅವರ ಮುಂದೆ ಹೇಳಿದಾಗ ಅವರು, ರಂಗಾಯಣ ರಘು ಈ ಪಾತ್ರಕ್ಕೆ ಸೂಕ್ತ ಎಂದಿದ್ದರು. ಕೊನೆಗೆ ಆ ಆಶಯವೂ ಈಡೇರಿದೆ ಎಂದವರು ನಿರ್ದೇಶಕ ರಾಜ್ ಕುಮಾರ್ ಮಸ್ಕಿ.
ಈ ಚಿತ್ರವನ್ನು ಮೊದಲು ನೋಡಿದವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಆಗ ಅವರು ಜಿಲ್ಲಾಧಿಕಾರಿ ಪಾತ್ರದಲ್ಲಿ (ಅತಿಥಿ ಪಾತ್ರದಲ್ಲಿ) ನಟಿಸುವುದಾಗಿ ಸಹ ಹೇಳಿದ್ದರು. ಆದರೆ ವಿಧಿಯಾಟದಿಂದ ಅದು ಆಗಲಿಲ್ಲ ಎಂದರು ನಿರ್ದೇಶಕರು.
ಹಾಸನ ಜಿಲ್ಲೆಯ ಕೊಣನೂರಿನವರಾದ ನಿರ್ಮಾಪಕ ಹೊಯ್ಸಳ ಕೊಣನೂರು ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಸಿನಿಮಾ ರಂಗ ಅವರಿಗೆ ಹೊಸತು.
ರಾಜಕುಮಾರ್ ಮಸ್ಕಿ ಹೇಳಿದ ಕಥೆ ಇಷ್ಟವಾಗಿ, ನಿರ್ಮಾಣಕ್ಕೆ ಮುಂದಾದೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಜನವರಿ 12 ರಂದು ಸಂಕ್ರಾಂತಿ ಸಮಯದಲ್ಲಿ ಚಿತ್ರ ಬಿಡುಗಡೆ ಕಾಣುತ್ತಿದೆ ಎಂದರು.
ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಗೀಶ್ ಚನ್ನಗಿರಿ ಹಾಡುಗಳನ್ನು ಬರೆದಿದ್ದಾರೆ. ಕೈಲಾಶ್ ಖೇರ್, ವಿಜಯ ಪ್ರಸಾದ್, ಕೀರವಾಣಿ, ಸಂಚಿತ್ ಹೆಗಡೆ ಮೊದಲಾದವರು ಹಾಡಿದ್ದಾರೆ ಎಂದು ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ದೇಸಿ ಮೋಹನ್ ಮಾಹಿತಿ ನೀಡಿದರು.
ಗೀತರಚನೆಕಾರ ಹಾಗೂ ಚಿತ್ರದ ಉಸ್ತುವಾರಿ ಹೊತ್ತಿರುವ ವಾಗೀಶ್ ಚನ್ನಗಿರಿ, ನೃತ್ಯ ನಿರ್ದೇಶಕ ಧನು ಮಾಸ್ಟರ್ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಅನೇಕ ಕಲಾವಿದರು ಈ ಸಂದರ್ಭದಲ್ಲಿ ಮಾತನಾಡಿದರು.