ನಿರ್ಮಾಪಕರು : ಕೋಮಲಾ ನಟರಾಜ್
ನಿರ್ದೇಶನ : ಗುರುಮೂರ್ತಿ ಸುನಾಮಿ
ಮತ್ತೆ ಮಾಲಾಶ್ರೀ ಅಬ್ಬರ
ಮನರಂಜನೆ ಭರಪೂರ..
ಇದು ಭೂಮಿ ಅಥವಾ ನಿಧಿಯ ಸಲುವಾಗಿ ಕೆಡುಕು ಮನಸ್ಸಿನ ವ್ಯಕ್ತಿಗಳು ಹೂಡುವ ಆಟವನ್ನು ಶಕ್ತಿಯಿಂದ ಕುಟ್ಟಿ ಕೆಡಹುವ ಕಥೆ.
ಬಳ್ಳಾರಿಯ ಸುತ್ತ ಮುತ್ತ ಭೂಮಿ ನಿಧಿ ಸಂಗ್ರಹವನ್ನು ಹೊಂದಿರುತ್ತದೆ. ಇದನ್ನು ಕಬಳಿಸಲು ಹುನ್ನಾರ ನಡೆಸುವ ರಾಜಕೀಯ ವ್ಯಕ್ತಿ ಹಾಗೂ ಅಧಿಕಾರಿಗಳ ಕೊಲೆಯಾಗುತ್ತದೆ.
ನಿಗೂಢ ಕೊಲೆಗಳ ಪ್ರಕರಣವನ್ನು ಭೇದಿಸಿ ತನಿಖೆ ನಡೆಸುವ ಅಧಿಕಾರಿಯಾಗಿ ಮಾಲಾಶ್ರೀ ಕೊಂಚ ತಡವಾಗಿ ಎಂಟ್ರಿ ಕೊಡುವಷ್ಟರಲ್ಲಿ ಸಾಕಷ್ಟು ಘಟನೆಗಳು ನಡೆದು ಹೋಗಿರುತ್ತವೆ.
ಇದೇ ವೇಳೆ ಟಿವಿಯಲ್ಲಿ ವರದಿಗಾರ್ತಿ ನಂದಿನಿ (ಹರ್ಷಿಕಾ ಪೂಣಚ್ಚ) ಹಾಗೂ ಬಡವರಿಗೆ ಆಶ್ರಮ ನಡೆಸುವ ಭರತ್ (ಆನಂದ್ ಆರ್ಯ) ಜೋಡಿ ಹಲವು ಕೆಟ್ಟ ಜನರ ಹಿಂದೆ ಬಿದ್ದು ತೊಂದರೆ ಎದುರು ಹಾಕಿಕೊಳ್ಳುವ ಘಟನೆಗಳೂ ನಡೆಯುತ್ತಿರುತ್ತವೆ.
ಜಾನವಿ (ಮಾಲಾಶ್ರೀ) ಹೆಸರಿನ ಅಧಿಕಾರಿ ತನಿಖೆ ನಡೆಸುವಾಗ ಪೂರಕವಾಗಿ ಮತ್ತೊಂದು ನೆಲೆಯಲ್ಲಿ ಅಣ್ಣ ತಂಗಿಯ ಕಥೆ ನಡೆಯುತ್ತದೆ. ದುಷ್ಟ ಅಣ್ಣ ತಂಗಿಯ ಆಸ್ತಿ ಕಬಳಿಸಲು ವಾಮಚಾರದ ಮೊರೆ ಹೋಗಿ ಪ್ರಯತ್ನ ನಡೆಸುತ್ತಾನೆ..
ಈ ನಡುವೆ ಡ್ಯಾನಿಯಲ್ (ಉಗ್ರಂ ಮಂಜು) ಎಂಬ ಪಾತ್ರ ಬೇರೆ ನೆಲೆಯ ಕಥೆ ಒದಗಿಸುತ್ತದೆ. ಈ ಕಥೆಯ ಕೇಂದ್ರ ಬಿಂದು ಶಂಕರ್ (ನಟರಾಜ್) ಮತ್ತು ಪಾರ್ವತಿ (ಸ್ವಾತಿ).
ಹೀಗೆ ಮೂರು ಬೇರೆ ಬೇರೆ ನೆಲೆಯಲ್ಲಿ ಕಥೆ ಸಾಗುವಾಗಲೇ ‘ಚಚ್ಚು ಮರಿ ದಡಂ ದಶಗುಣಂ..’ ಎಂಬಂತೆ ಸಾಹಸ ದೃಶ್ಯಗಳು ಬಂದು ಹೋಗುವಾಗ ಪ್ರೇಕ್ಷಕನಿಗೆ ಆ ಕಡೆ ಈ ಕಡೆ ಯೋಚನೆ ಮಾಡಲು ಸಹ ಸಮಯ ಸಿಗುವುದಿಲ್ಲ..
ಅಷ್ಟು ಗಟ್ಟಿಯಾದ ನಿರೂಪಣೆಯಿಂದ ನಿರ್ದೇಶಕ ಗುರುಮೂರ್ತಿ ಸುನಾಮಿ ಅಚ್ಚರಿ ಹುಟ್ಟಿಸುತ್ತಾರೆ. ಸಾಹಸ ದೃಶ್ಯಗಳ ವೈಭವದ ಜೊತೆಗೆ ತೀವ್ರ ಕುತೂಹಲ ಹುಟ್ಟುವಂತೆ ಕಥೆಯನ್ನು ಹೆಣಿಗೆ ಮಾಡಿರುವುದು ನಿರ್ದೇಶಕರ ಕಲಾವಂತಿಕೆ ಮನಸ್ಥಿತಿಗೆ ಸಾಕ್ಷಿ.
ಮಾಲಾಶ್ರೀ ನಟನೆ ಮತ್ತು ಸಾಹಸ ದೃಶ್ಯಗಳಲ್ಲಿ ಅಬ್ಬರಿಸುತ್ತಾರೆ. ಇದು ಅವರಿಗೆ ರೀ ಎಂಟ್ರಿ ಸಿನಿಮಾವೇ ಆಗುವಂತೆ ಅವರ ನಟನಾ ಸಾಮರ್ಥ್ಯ ಮತ್ತು ಸಾಹಸ ಚತುರತೆ ತುಂಬಿಕೊಂಡಿದೆ.
ಹಣ ಹೂಡಿದ ನಿರ್ಮಾಪಕರು ಪಾತ್ರದ ಜೊತೆಗೆ ಎರಡು ಹಾಡನ್ನು ಪಡೆದುಕೊಂಡು ಇದಕ್ಕಾಗಿ ಸಿನಿಮಾ ಮಾಡಿರುವೆ ಎಂದು ಬಿಂಬಿಸಿಕೊಂಡಿದ್ದಾರೆ.
ಆನಂದ್ ಆರ್ಯ ಪುನೀತ್ ರಾಜ್‍ಕುಮಾರ್ ಅವರನ್ನು ಅನುಕರಿಸಲು ಮಾಡಿರುವ ಪ್ರಯತ್ನ ಸೊಗಸಾಗಿದೆ. ಹರ್ಷಿಕಾ ಪೂಣಚ್ಚ ಎಂದಿನ ಚಿನಕುರಳಿ ಮಾತಿನ ಜಾಡಿನಲ್ಲಿ ಮಿಂದೆದ್ದಿದ್ದಾರೆ.
ಆದರೆ ಡೇನಿಯಲ್ ಪಾತ್ರ ನಿರ್ವಹಿಸಿರುವ ಉಗ್ರಂ ಮಂಜು ಸಿಕ್ಕಿರುವ ಅವಕಾಶದಲ್ಲಿ ತಮ್ಮ ಪ್ರತಿಭಾ ಸಾಮರ್ಥ್ಯವನ್ನು ಮೆರೆದಿದ್ದಾರೆ.
ಅಯ್ಯಪ್ಪ, ಶಿವಮಣಿ, ಸ್ವಾತಿ ಹಾಗೂ ಇನ್ನಿತರ ಕಲಾವಿದರ ನಟನೆ ಚಿತ್ರಕ್ಕೆ ಪೂರಕ. ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಸತೀಶ್ ಬಾಬು ಹಿನ್ನೆಲೆ ಸಂಗೀತ ಸೊಗಸು. ಹಾಗಾಗಿ ಇದು ಸಂಪೂರ್ಣ ಮನರಂಜನೆಯ ಪ್ಯಾಕೇಜ್ ಸಿನಿಮಾ.