ವಿಕ್ಕಿ ವರುಣ್ ನಿರ್ದೇಶನ ಮಾಡಿರುವ ಹಾಗೂ ಮುಖ್ಯ ಪಾತ್ರದಲ್ಲಿರುವ ಚಿತ್ರ ‘ಕಾಲಾಪತ್ಥರ್’ ಹೊಸ ಹಾಡು ಬುಧವಾರ ಬಿಡುಗಡೆಗೊಂಡಿದೆ..
‘ಗೋರುಕನ ಗಾನ’ ಎಂದು ಕರೆಯಲ್ಪಡುವ ಈ ಹಾಡನ್ನು ನವ ಗಾಯಕಿ ಶಿವಾನಿ ಹಾಡಿದ್ದು, ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಅನೂಪ್ ಸೀಳಿನ್ ಸಂಗೀತವಿದೆ.
ಗೋರುಕನ ಗಾನ ಎಂಬುದು ಬುಡಕಟ್ಟ ಸಮುದಾಯ ಸೋಲಿಗರ ಹಟ್ಟಿಯಲ್ಲಿ ಕೇಳಿ ಬರುತ್ತದೆ. ಇಲ್ಲಿ ಅದು ಅತ್ಯಾದ್ಭುತವಾಗಿ ಮೂಡಿ ಬಂದಿದೆ. ಹೊಸ ಗಾಯಕಿ ಶಿವಾನಿ ಕಂಠಸಿರಿಯೂ ಅದ್ಭುತ ಎಂದು ಬಣ್ಣಿಸಿದರು ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್.
ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ ಹಾಡಿನ ಬಗ್ಗೆ ಮಾತನಾಡುತ್ತಲೇ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರನ್ನು ಹೊಗಳಿದರು ತಾರಾ ಅನುರಾಧ.
ಅನೂಪ್ ಸೀಳಿನ್ ಮಣ್ಣಿನ ಗುಣ ಮೈಗೂಡಿಸಿಕೊಂಡಿರುವ ಸಂಗೀತ ನಿರ್ದೇಶಕ. ಹಾಗಾಗಿ ಅವರ ಹಾಡುಗಳು ಜನರಿಗೆ ಆಪ್ತವಾಗುತ್ತವೆ ಎಂದರು.
ದೊಡ್ಮನೆ ಮೊಮ್ಮಗಳು ಧನ್ಯಾ ಅವರಿಗೆ ಉತ್ತಮ ಭವಿಷ್ಯವಿದೆ. ಅವರ ತಾಯಿ ಪೂರ್ಣಿಮಾ ಸಹಕಾರ ಅವರಿಗೆ ಶ್ರೀರಕ್ಷೆಯಾಗಲಿದೆ ಎಂದು ಹೇಳುತ್ತಾ ಹೋದರು ತಾರಾ ಅನುರಾಧ.
ಇದಕ್ಕೆ ಪೂರಕವಾಗಿಯೇ ಮಾತನಾಡಿದ ಪೂರ್ಣಿಮಾ ರಾಮ್ ಕುಮಾರ್ ಧನ್ಯಾಗೆ ಈ ಪಾತ್ರ ಸಿಕ್ಕಿರುವುದೇ ಧನ್ಯ ಎಂದರು.
ಧನ್ಯಾ ಮಾತನಾಡುವಾಗ ನನಗೆ ಅಮ್ಮನ ದೊಡ್ಡ ಬೆಂಬಲ ಇದೆ ಎಂದರು. ಹಾಡು ನೋಡುವಾಗ ನನ್ನ ಪಾತ್ರವನ್ನೇ ಗಮನಿಸುತ್ತಿದೆ. ನಿಜಕ್ಕೂ ಖುಷಿಯಾಗಿದೆ ಎಂದೂ ಹೇಳಿದರು ಧನ್ಯಾ.
ಈ ಹಾಡಿನಲ್ಲಿ ಖಂಡಿತಾ ಮಂಗಳಮುಖಿಯರಿಗೆ ಸಂಬಂಧ ಇದೆ. ನಾವು ಮೊದಲು ಸಂಯೋಜಕ ಸಿದ್ದು ಇದೇ ಹಾಡು ಸಂಪೂರ್ಣ ಕನ್ನಡ ಇರಬೇಕೆಂಬ ಆಕಾಕ್ಷೆ ನಮ್ಮೊಳಗೆ ಇತ್ತು ಎಂದರು ನಿರ್ದೇಶಕ ಕಮ್ ನಟ ವಿಕ್ಕಿ ವರುಣ್.
ಸಿನಿಮಾ ಸೆನ್ಸಾರ್ ಹಂತದಲ್ಲಿದೆ. ಸದ್ಯವೇ ಬಿಡುಗಡೆ ದಿನಾಂಕ ಪ್ರಕಟಿಸುವ ಮಾಹಿತಿ ನೀಡಿದರು ವಿಕ್ಕಿ ವರುಣ್.
ಈ ಚಿತ್ರಕ್ಕೆ ಸುರೇಶ್ ಹಾಗೂ ನಾಗರಾಜು (ಬಿಲ್ಲಿನಕೋಟೆ) ನಿರ್ಮಾಪಕರು. ನಾಗರಾಜು ವೇದಿಕೆಯಲ್ಲಿ ಮಾತನಾಡಿದರು. ಸಿಂಪಲ್ ಸುನಿ ಹಾಗೂ ಮದಗಜ ಮಹೇಶ್, ನಿರ್ಮಾಪಕರ ಸ್ನೇಹಿತರಾದ ಜಗದೀಶ್ ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು.