Snehapriya.com

June 9, 2025

ಫೈಟರ್ ಚಿತ್ರವಿಮರ್ಶೆ

Social Share :

ನಿರ್ಮಾಪಕರು : ಕೆ.ಸೋಮಶೇಖರ್ ಕಟ್ಟಿಗೇನಹಳ್ಳಿ

ನಿರ್ದೇಶನ : ನೂತನ್ ಉಮೇಶ್

ಸಾಹಸಗಳೇ ಮೋಹಕ ವಿಸ್ಮಯ

ಗತ್ತು ಗೈರತಿನ ಜೊತೆಗೆ ಹುರಿಗೊಳಿಸಿಕೊಂಡ ದೇಹ. ತೊಲೆಯಂತಹ ತೋಳುಗಳು. ಎಂತಹ ಗಟ್ಟಿಯಾಳನ್ನೂ ತೆಗೆದು ಒಗೆಯುವ ಆತ್ಮಸ್ಥೈರ್ಯ; ಮೇಲಾಗಿ ಫೈಟರ್ ಎಂಬುದಕ್ಕೆ ಅಪ್ಪನ ಹಿನ್ನೆಲೆ; ಹಾಗಾಗಿ ಫೈಟಿಂಗ್ ಇಲ್ಲಿ ಸೊಗಸು..

ವಿನೋದ್ ಪ್ರಭಾಕರ್ ಎಂಬ ಕನ್ನಡದ ಅರ್ನಾಲ್ಡ್ ತಮ್ಮ ಅಪ್ರತಿಮ ಸಾಹಸದ ಕುಸುರಿಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿರುವ ಚಿತ್ರದ ಹೆಸರೂ ಫೈಟರ್.

ಚಿತ್ರದ ಉದ್ದಕ್ಕೂ ಫೈಟಿಂಗ್ ದೃಶ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ಮರಿ ಟೈಗರ್ ಕನ್ನಡದ ಮುಂಚೂಣಿಯ ನಟರ ಸಾಲಿಗೆ ಸೇರುವ ದಿಶೆಯಲ್ಲಿ ವೇದಿಕೆ ಕಲ್ಪಿಸಿಕೊಂಡಿದ್ದಾರೆ.

ಹಾಗೆ ನೋಡಿದರೆ ಇದೊಂದು ಮಾಮೂಲಿ ಸೇಡಿನ ಕಥೆ. ಅದರಲ್ಲಿ ಮೋಹಕ ಮತ್ತು ವಿಸ್ಮಯ ಕಾಣುವುದು ಚಿನಕುರಳಿಯಂತೆ ಮಾತನಾಡುವ ವೈಯಾರಿ ವಿಸ್ಮಯ ಮತ್ತು ಮೌನದಲ್ಲೇ ಕೊಲ್ಲುವ ಮೋಹಕನ ನಡೆ.

ಮೊದಲರ್ಧ ಮೋಹಕ ಮಾತು ಮತ್ತು ವಿಸ್ಮಯದ ನೋಟದ ಜೊತೆಗೆ ಡಬ್ಬಲ್ ಮೀನಿಂಗ್ ಸಂಭಾಷಣೆಯ ಕಚಗುಳಿ ಸಮಯ ಹೋಗುವುದೇ ತಿಳಿಯುವುದಿಲ್ಲ. ಉತ್ತರಾರ್ಧದಲ್ಲಿ ಚಿತ್ರದುರ್ಗದ ದೊಡ್ಡ ಕುಟುಂಬದ ಸುತ್ತ ನಡೆಯುತ್ತದೆ. ಇಲ್ಲಿಯೂ ಮನರಂಜನೆಗೆ ಪ್ರಾಮುಖ್ಯತೆ ನೀಡಿರುವುದರಿಂದ ಸಂಭಾಷಣೆಗಳಲ್ಲಿ ಎರಡರ್ಥದ ಧಮಾಕ.

ಆನಂತರವೂ ಕೋಟೆಯ ಸುತ್ತ ನಡೆಯುವ ಫೈಟಿಂಗ್ ನೋಡಲು ಹಬ್ಬ. ಕಣ್ಣಿಗೆ ವಿಶಾಲ ನೆಲೆಯ ದೃಶ್ಯಗಳು ಗೋಚರಿಸುತ್ತಾ ಹೋಗುವಾಗ ನಡೆಯುವ ಸಾಹಸಗಾಥೆಯಲ್ಲಿ ವಿನೋದ್ ಪ್ರಭಾಕರ್ ಸಾಹಸದ ಪರಿಣಿತಿಯ ಪರಿಚಯವಾಗುತ್ತದೆ.

ಕೊನೆಯಲ್ಲಿ ಕುರಿ ಪ್ರತಾಪ್ ಹಾಸ್ಯ ಮತ್ತು ಮನೆಯೊಳಗಿನ ರಹಸ್ಯ ಎರಡೂ ಪ್ರೇಕ್ಷಕನಿಗೆ ಕಚಗುಳಿ ಇಡುತ್ತವೆ. ಈ ವೇಳೆ ಪಾವನಗೌಡ ಬಂದು ಹೋಗುತ್ತಾರೆ ಅಷ್ಟೇ.

ಕೊನೆಯಲ್ಲಿ ಬಿಚ್ಚಿಕೊಳ್ಳುವ ರಹಸ್ಯದಲ್ಲಿ ರೈತ ಹೋರಾಟದ ಸಂದೇಶವೂ ಎದ್ದು ಕಾಣುತ್ತದೆ. ಭೂಮಿ ಫಲವತ್ತತೆ ಕಳೆದುಕೊಂಡು ರೈತರಿಂದ ಉದ್ಯಮಿಗಳ ಪಾಲಾಗುವಲ್ಲಿ ನಡೆಯುವ ಕಾರ್ಪೊರೇಟ್ ವಲಯದ ಸಂಚು ಬಯಲಾಗುತ್ತದೆ.

ವಿನೋದ್ ಪ್ರಭಾಕರ್ ಇಡೀ ಸಿನಿಮಾವನ್ನು ಬೆನ್ನ ಮೇಲೆ ಹೊತ್ತಿದ್ದಾರೆ. ವಿಸ್ಮಯ ಆಗಿ ಲೇಖಾಚಂದ್ರ, ತಾಯಿಯಾಗಿ ನಿರೋಶಾ ಅವರ ಪಾತ್ರಗಳು ಗಮನಾರ್ಹ.

ಇನ್ನುಳಿದಂತೆ ಶರತ್ ಲೋಹಿತಾಶ್ವ, ಶೀಧರ್, ಗಿರಿಜಾ ಲೋಕೇಶ್, ರಾಜೇಶ್, ದೀಪಕ್ ಶೆಟ್ಟಿ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಗುರುಕಿರಣ್ ಸಂಗೀತದಲ್ಲಿ ‘ಫಾಲೋಯು..’ (ಸಾಹಿತ್ಯ ಕವಿರಾಜ್) ಹಾಡು ಕೇಳಲು ಸೊಗಸು. ಈ ಹಾಡಿನಲ್ಲಿ ಗಾಯಕಿ ಚೈತ್ರಾ ಹಾಗೂ ಲೇಖಾಚಂದ್ರ ಇಬ್ಬರೂ ಸೊಗಸು. ಫೈಟಿಂಗ್ ದೃಶ್ಯಗಳಿಗೆ ಹಿನ್ನೆಲೆ ಸಂಗೀತವೇ ಹೈಲೈಟ್. ಶೇಖರ್ ಚಂದ್ರ ಅವರ ಕ್ಯಾಮೆರಾ ಕೈಚಳಕವೂ ಅಷ್ಟೇ..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *