Snehapriya.com

June 9, 2025

ನಿಖಿಲ್ ಕುಮಾರ್ ಹೊಸ ಚಿತ್ರ ಲೈಕಾ ಸಂಸ್ಥೆಯಿಂದ ನಿರ್ಮಾಣ

Social Share :


ಕೆಲ ಸಮಯ ರಾಜಕೀಯ ಕಾರಣದಿಂದ ಅಭಿನಯದಿಂದ ದೂರವಿದ್ದ ನಿಖಿಲ್ ಕುಮಾರಸ್ವಾಮಿ ಈಗ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಬುಧವಾರ ಅಂದರೆ ಆಗಸ್ಟ್ 23 ರಂದು ಸ್ಟಾರ್ ಹೊಟೇಲ್ ನಲ್ಲಿ ನಡೆದ
ನೂತನ ಚಿತ್ರದ ಮುಹೂರ್ತದಲ್ಲಿ ನಿಖಿಲ್ ತಾತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ತಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಈಗ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಲಕ್ಷ್ಮಣ್ ಈ ಚಿತ್ರದ ನಿರ್ದೇಶಕರು.

ಈ ಹಿಂದೆ ‘ಸೀತಾರಾಮ ಕಲ್ಯಾಣ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಲೈಕಾ ಸಂಸ್ಥೆಯ ಸುಭಾಸ್ಕರನ್ ಆಗಮಿಸಿದ್ದರು. ಆಗ ‘ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರದಲ್ಲಿ ನೀವು ಮುಖ್ಯ ಪಾತ್ರದಲ್ಲಿ ನಟಿಸಬೇಕು’ ಎಂದು ಸುಭಾಸ್ಕರನ್ ಅಹ್ವಾನ ನೀಡಿದ್ದರು. ಈಗ ಚಿತ್ರ ಆರಂಭವಾಗುತ್ತಿದೆ. ಈ ಚಿತ್ರಕ್ಕಾಗಿ ನಿರ್ದೇಶಕರು ಒಂದು ವರ್ಷದಿಂದ ಬೆಂಗಳೂರಿನಲ್ಲೇ ಇದ್ದು ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿಖಿಲ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು.

ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ. ನಾನು ಬರೆದ ಕಥೆಯನ್ನು ಒಪ್ಪಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪಕರಿಗೆ ಹಾಗೂ ನಿಖಿಲ್ ಕುಮಾರ್ ಅವರಿಗೆ ಧನ್ಯವಾದ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ನೀಡುವ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ವಿವರಣೆ ನೀಡುವೆ ಎಂದರು ನಿರ್ದೇಶಕ ಲಕ್ಷ್ಮಣ್.

ಕನ್ನಡದ ಸೆನ್ ಸೆಷನಲ್ ಸ್ಟಾರ್ ಕೋಮಲ್ ಕುಮಾರ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಟಿಸಲು ನಿಖಿಲ್ ಕುಮಾರ್ ಅಹ್ವಾನ ನೀಡಿದರು. ನಾನು ಕಥೆ ಕೇಳಿ ಒಪ್ಪಿಕೊಂಡೆ. ಎಂದರು ಕೋಮಲ್.

ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಕನ್ನಡ ಚಿತ್ರವಿದು. ಚಿತ್ರ ಯಶಸ್ವಿಯಾಗಲಿ ಎಂದು ಲೈಕಾ ಪ್ರೊಡಕ್ಷನ್ಸ್ ಮುಖ್ಯಸ್ಥರಾದ ಸುಭಾಸ್ಕರನ್ ಇದೇ ವೇಳೆ ಹಾರೈಸಿದರು.

ನಿಖಿಲ್ ಎದುರು ಯುಕ್ತಿ ತರೇಜ ನಟಿಸುತ್ತಿದ್ದು, ಅವರೂ ನೂತನ ಚಿತ್ರದ ಕುರಿತು ಮಾತನಾಡಿದರು. ಹಲವಾರು ತಂತ್ರಜ್ಞರು ಹಾಗೂ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *