ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಹುಡುಗನೊಬ್ಬ ಮುಂದೆ ಐಎಎಸ್ ಅಧಿಕಾರಿಯಾಗುವ ಅದಮ್ಯ ಛಲದ ಕಥೆ ಹೊಂದಿರುವ ಚಿತ್ರವಿದು..
ಹೆಸರು ರಾಯಲ್ ಮೆಕ್..!
ಎಂಜಿನಿಯರಿಂಗ್ ನಲ್ಲಿ ಮೆಕ್ ಮತ್ತು ರಾಯಲ್ ಮೆಕ್ ಎಂಬುದಕ್ಕೆ ವಿಶೇಷ ಅರ್ಥವಿದೆ. ಆ ಹಿನ್ನೆಲೆಯಲ್ಲಿ ಚಿತ್ರದ ಹೆಸರನ್ನು ಇಡಲಾಗಿದೆ ಎಂದು ಸಮರ್ಥಿಸಿಕೊಂಡವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಧನುಷ್.
ನಟನೆಯನ್ನು ಕಲಿಕೆಯಾಗಿ ಆಯ್ದುಕೊಂಡು ಇನ್ಸ್ಟಿಟ್ಯೂಟ್ ಮೂಲಕ ಕಲಿತಿರುವ ಧನುಷ್ ಗೆ ಅಲ್ಲಿ ಪ್ರಾಂಶುಪಾಲರಾಗಿದ್ದ ರೇಖಾದಾಸ್ ಅವರೇ ಸ್ಫೂರ್ತಿ ಮತ್ತು ಅವರ ಪುತ್ರಿ ಶ್ರೇಯ ಧನುಷ್ ಎದುರು ನಟಿಸಿದ್ದಾರೆ.
ಮೂಲವಾಗಿ ಎಂಜಿನಿರಿಂಗ್ ಕಲಿತಿರುವ ಧನುಷ್, ಚಿತ್ರದಲ್ಲಿ ನಟಿಸಬೇಕು ಎಂಬ ಇಚ್ಚೆಯ ಜೊತೆಗೆ ನಿಜ ಜೀವನದಲ್ಲಿ ಕನಸುಗಳನ್ನು ನನಸು ಮಾಡಿಕೊಳ್ಳುವ ಪ್ರಯತ್ನವೇ ಇದು.
ಈ ಚಿತ್ರಕ್ಕೆ ಇಬ್ಬರು ನಿರ್ದೇಶಕರು.
ನಾಗಭೂಷಣ್ ಜೆ ಎಚ್ ಹಾಗೂ
ಡಾ.ಜಯದೇವ್ ಇಬ್ಬರೂ ಹೊಸಬರೇ. ಚಿತ್ರೀಕರಣವೆಲ್ಲ ಮುಗಿದು ಬಿಡುಗಡೆಯ ಹಂತಕ್ಕೆ ಬಂದಿದೆ ಚಿತ್ರ.
ಜೊತೆಗೆ ಚಿತ್ರದ ಕೆಲವು ಹಕ್ಕುಗಳನ್ನು ಮಾರಾಟ ಮಾಡಿಕೊಳ್ಳುವ ಮೂಲಕ ಸ್ವಲ್ಪ ಮಟ್ಟಿಗೆ ಸೇಫ್ ಆಗಿದೆ ಎಂಬುದು ಚಿತ್ರತಂಡದ ಜೊತೆಗೆ ಗುರುತಿಸಿಕೊಂಡಿರುವ ಅಶೋಕ್ ನೀಡಿದ ಮಾಹಿತಿ.
ಅಂತಾರಾಷ್ಟ್ರೀಯ ಹಕ್ಕುಗಳು ಸಂಸ್ಥೆ ಕನ್ನಡ ಚಿತ್ರಗಳ ಜೊತೆ ಕೈ ಜೋಡಿಸಿ ಬೆಂಬಲವಾಗಿ ನಿಂತಿದೆ ಎಂಬ ಮಾಹಿತಿ ಕೊಟ್ಟರು ಅಶೋಕ್.
ತಮ್ಮ ವಿದ್ಯಾರ್ಥಿ ಧನುಷ್ ಪರಿಶ್ರಮವನ್ನು ರೇಖಾದಾಸ್ ಕೊಂಡಾಡಿದರು. ನಟಿ ಗೌತಮಿ ಚಿತ್ರತಂಡದ ಅನುಭವ ಹೇಳಿಕೊಂಡರು.
ರಾಘವೇಂದ್ರ ರಾಜ್ ಕುಮಾರ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೊಂದು ಐಎಎಸ್ ಕನಸುಗಳನ್ನು ಹೊತ್ತವರಿಗೆ ಸ್ಫೂರ್ತಿಯಾಗುವ ಪಾತ್ರ ಎಂದರು ಧನುಷ್.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಈ ಸಂದರ್ಭದಲ್ಲಿ ಹಾಜರಿದ್ದು, ಹೊಸ ತಂಡಕ್ಕೆ ಶುಭ ಕೋರಿದರು.