ರಾಜ್ ಬಿ ಶೆಟ್ಟಿ ಅಭಿನಯದ ‘ಟೋಬಿ’ ಚಿತ್ರದ ಟ್ರೈಲರ್ ಈಚೆಗೆ ನಡೆದ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆಗೊಂಡಿದ್ದು, ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ ದಾಖಲಿಸಿದೆ.
ನಟ ರಕ್ಷಿತ್ ಶೆಟ್ಟಿ, ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಹಾಜರಾತಿಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಅನೇಕ ಚಿತ್ರತಂಡಗಳು ಭಾಗವಹಿಸಿದ್ದು ವಿಶೇಷ.
‘ಒಂದು ಮೊಟ್ಟೆಯ ಕಥೆ’ ಸರಳ ಚಿತ್ರ ಹಾಗೂ ‘ಗರುಡ ಗಮನ ವೃಷಭ ವಾಹನ’ ದಂತಹ ಅದ್ಧೂರಿ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿರುವ ರಾಜ್ ಬಿ.ಶೆಟ್ಟಿ ‘ಟೋಬಿ’ ಚಿತ್ರದ ಬಳಿಕ ಮನೆ ಮಾತಾಗಲಿದ್ದಾರೆ ಎಂಬುದು ಇಬ್ಬರು ಗೆಳೆಯರ ಹಾರೈಕೆಯಾಗಿತ್ತು.
ಟಿ.ಕೆ.ದಯಾನಂದ್ ಕಥೆ ಬರೆದಿದ್ದು, ಬಾಸಿಲ್ ಅಲ್ಚಾಲಕ್ಕಲ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರವಿ ರೈ ಕಳಸ, ಶ್ರೀಕಾಂತ್ ನಿರ್ಮಾಣವಿದೆ.
ಟೋಬಿ ಇದೇ ತಿಂಗಳು ಅಂದರೆ ಆಗಸ್ಟ್ 25ರಂದು ತೆರೆ ಕಾಣುತ್ತಿದ್ದು, ಚಿತ್ರತಂಡದ ಪರಿಶ್ರಮ ಮತ್ತು ಗೆಳೆಯರ ಹಾರೈಕೆ ಉತ್ಸಾಹವನ್ನು ಹೆಚ್ಚಿಸಿದೆ ಎಂಬುದು ರಾಜ್ ಬಿ.ಶೆಟ್ಟಿ ಅವರ ಮಾತು.
ಜೊತೆಗೆ ಚಾರ್ಲಿ ನಿರ್ದೇಶಕ ಕಿರಣ್ ರಾಜ್, ಪ್ರಮೋದ್ ಶೆಟ್ಟಿ, ಸಂಯುಕ್ತ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಸಮಾರಂಭದಲ್ಲಿ ಹಾಜರಿದ್ದರು.
ಚಿತ್ರಕ್ಕೆ ಮಿಧುನ್ ಮುಕುಂದನ್ ಹಿನ್ನೆಲೆ ಸಂಗೀತ, ಪ್ರವೀಣ್ ಶೀಯಾನ್ ಛಾಯಾಗ್ರಹಣವಿದ್ದು, ಲೈಟರ್ ಬುದ್ದ ಫಿಲಂಮ್ಸ್, ಆಗಸ್ತ್ಯ ಫಿಲಂಮ್ಸ್, ಕಾಫೀ ಗ್ಯಾಂಗ್ ಸ್ಟುಡಿಯೋ ಮತ್ತು ಸ್ಮೂತ್ ಸೈಲರ್ಸ್ ಜಂಟಿಯಾಗಿ ನಿರ್ಮಿಸಿದೆ.