ಶಿವರಾಜ್ ಕೆ.ಆರ್ ಪೇಟೆ ಹಾಗೂ ನಾಯಿ ಮುಖ್ಯ ಪಾತ್ರದಲ್ಲಿದ್ದ ‘ನಾನು ಮತ್ತು ಗುಂಡ’ ಯಶಸ್ಸು ಕಂಡಿತ್ತು. ಈಗ ಅದೇ ಚಿತ್ರದ ಮುಂದುವರೆದ ಭಾಗವಾಗಿ ‘ನಾನು ಮತ್ತು ಗುಂಡ-2’ ಚಿತ್ರ ಸಿದ್ಧವಾಗುತ್ತಿದೆ.
ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆ ಕಾಣುತ್ತಿರುವ ಈ ಚಿತ್ರದ ಪೋಸ್ಟರ್ ಈಗ ಬಿಡುಗಡೆಗೊಂಡಿದೆ. ರಘು ಹಾಸನ್ ನಿರ್ದೇಶನದಲ್ಲಿ ಯಜಮಾನನನ್ನು ಕಳೆದುಕೊಂಡ ನಾಯಿಯ ಹೃದಯ ಸ್ಪರ್ಶಿ ಘಟನೆಗಳಿರುತ್ತವೆ.
ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ‘ನಾನು ಮತ್ತು ಗುಂಡ’ ಚಿತ್ರದಲ್ಲಿ ಯಜಮಾನ ಹಾಗೂ ನಾಯಿ ನಡುವಿನ ಭಾವನಾತ್ಮಕ ಸಂಬಂಧದ ಕಥೆ ಹೇಳಲಾಗಿತ್ತು.
ಆ ಚಿತ್ರದಲ್ಲಿ ನಟ ಶಿವರಾಜ್ ಕೆ.ಆರ್. ಪೇಟೆ ಮತ್ತು ನಾಯಿಯ ಮನೋಜ್ಞ ನಟನೆ ಇತ್ತು. ಈಗ ಅದರ ಮುಂದುವರೆದ ಭಾಗವಾಗಿ ‘ನಾನು ಮತ್ತು ಗುಂಡ -2’ ಎಂಬ ಚಿತ್ರ ಮೂಡಿ ಬರುತ್ತಿದೆ.
ಮೊದಲ ಭಾಗದಲ್ಲಿ ಶಿವರಾಜ್ ಕೆ.ಆರ್.ಪೇಟೆ ಅವರ ಪಾತ್ರ ಮರಣ ಹೊಂದುತ್ತದೆ. ಎರಡನೇ ಭಾಗದಲ್ಲಿ ಯಜಮಾನನನ್ನು ಕಳೆದುಕೊಂಡ ನಾಯಿ ಸಮಾಜದಲ್ಲಿ ಹೇಗೆ ಜೀವನ ನಡೆಸುತ್ತದೆ ಎಂಬುದನ್ನು ಭಾವನಾತ್ಮಕ ಹಾಗೂ ಮನರಂಜನಾತ್ಮಕವಾಗಿ ಚಿತ್ರಿಸಲಾಗುತ್ತಿದೆ.
ಆರ್.ಪಿ.ಪಟ್ನಾಯಕ್ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ, ತನ್ವಿಕ್ ಜಿ. ಛಾಯಾಗ್ರಹಣ, ರೋಹಿತ್ ರಾಮನ್ ಸಂಭಾಷಣೆ ಚಿತ್ರಕ್ಕಿದೆ.