ಮಾಡೆಲಿಂಗ್ ಕ್ಷೇತ್ರದಲ್ಲಿ ಮಿನುಗುವ ನಕ್ಷತ್ರವಾಗಲು ಬಯಸುವಾಗಲೇ ಪ್ರತಿಭಾವಂತ ಯುವ ಪ್ರತಿಭೆಯನ್ನು ಸಿನಿಮಾ ಕ್ಷೇತ್ರ ಬರ ಸೆಳೆದು ಅಪ್ಪಿಕೊಂಡಿದೆ.
ಆ ಪ್ರತಿಭೆಯ ಹೆಸರು ರೋಹಿತ್..!
ಉತ್ತರ ಕರ್ನಾಟಕ ಮೂಲದ ಚೆಂದದ ಮೈಕಟ್ಟು ಹೊಂದಿರುವ ಹುಡುಗ ರೋಹಿತ್ ಈಗ ಸಿನಿಮಾ ನಟ ಕಮ್ ನಿರ್ಮಾಪಕ. ನಟಿಸಿರುವ ಚಿತ್ರದ ಹೆಸರು ರಕ್ತಾಕ್ಷ..
ರೋಹಿತ್ ನಿರ್ಮಿಸಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ರಕ್ತಾಕ್ಷ’ ಈಗ ಬಿಡುಗಡೆಗೆ ಸಿದ್ಧವಾಗಿದೆ. ಈಚೆಗೆ ಚಿತ್ರದ ಸಾಹಿತ್ಯವಿರುವ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ಅತ್ಯಂತ ಉತ್ಸಾಹದಿಂದಲೇ ಮಾಹಿತಿಗಳನ್ನು ನೀಡಿತು.
ಕಳೆದ ಆರು ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ ರೋಹಿತ್ ಈಗ ಸಾಯಿ ಪ್ರೊಡಕ್ಷನ್ ಹೆಸರಿನಲ್ಲಿ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಜೊತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ವಾಸುದೇವ ಎಸ್.ಎನ್ ಚಿತ್ರದ ನಿರ್ದೇಶಕರಾಗಿದ್ದು, ಇದು ಅವರ ಮೊದಲನೇ ಸಿನಿಮಾವಾಗಿದೆ. ರೋಹಿತ್ ಜೊತೆಗೆ ಆಸಕ್ತ ಮನಸ್ಸುಗಳು ಈ ಚಿತ್ರದ ನಿರ್ಮಾಣದಲ್ಲಿ ಸೇರಿಕೊಂಡಿವೆ ಎಂಬ ಮಾಹಿತಿ ನೀಡಿತು ಚಿತ್ರತಂಡ.
ಗುರುವಾರ ಬಿಡುಗಡೆಗೊಂಡ ಹಾಡಿಗೆ ಸುಜಿತ್ ವೆಂಕಟರಾಮಯ್ಯ ಗೀತರಚನೆ ಇದ್ದು, ಧೀರೇಂದರ್ ದಾಸ್ ದಾಸ್ಮೋಡ ಸಂಗೀತ ನೀಡಿದ್ದಾರೆ. ಶೀರ್ಷಿಕೆ ಹಾಡಿಗೆ ವಸಿಷ್ಠ ಸಿಂಹ ಧ್ವನಿಯಾಗಿರುವುದು ವಿಶೇಷವಾಗಿದೆ ಎಂಬ ಮಾಹಿತಿಗಳು ಬಂದವು.
ಸಿನಿಮಾ ನಟನಾಗಬೇಕು ಎಂಬುದು ಬಾಲ್ಯದ ಕನಸು. ಈಗ ನನಸಾಗಿದೆ ಎಂದರು ರೋಹಿತ್. ದೇಹದ ಗಾತ್ರವನ್ನು ಆಗಾಗ ಬದಲಾಯಿಸಿ ರೂಪಾಂತರ ಹೊಂದುವ ಕಲೆ ಸಿದ್ದಿಸಿದೆ. ಹಾಗಾಗಿ ಚಿತ್ರದಲ್ಲಿ ನನ್ನ ಹಲವು ಅವತಾರಗಳನ್ನು ವಿಭಿನ್ನ ಗೆಟ್ ಅಪ್ ಮೂಲಕ ನೋಡಬಹುದಾಗಿದೆ ಎಂದರು ರೋಹಿತ್.
ಕೆಲಸದ ಮೂಲಕವೇ ಏನಾದರೂ ಸಾಧನೆ ಮಾಡಬೇಕು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ಅವರ ಪ್ರತಿನಿಧಿಯಾಗಿ ಚಿತ್ರದಲ್ಲಿ ನಿಲ್ಲಬೇಕು ಎಂಬುದು ಆಶಯವಾಗಿದೆ ಎಂದು ಹೇಳುತ್ತಾ ಹೋದರು.
ಇದು ಮಾಸ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಮೊದಲ ಪ್ರಯತ್ನಕ್ಕೆ ಅವಕಾಶ ನೀಡಿದ ರೋಹಿತ್ ಅವರಿಗೆ ಕೃತಜ್ಞತೆಗಳು ಸಲ್ಲುತ್ತದೆ ಎಂದರು ನಿರ್ದೇಶಕ ವಾಸುದೇವ್ ಎನ್.ಎಸ್.
ನಟಿ ರೂಪಾ ರಾಯಪ್ಪ ತಮ್ಮ ಪಾತ್ರದ ವಿವರಗಳನ್ನು ನೀಡಿದರು. ಇನ್ನುಳಿದಂತೆ ಅರ್ಚನಾ ಕೊಟ್ಟಿಗೆ, ಪ್ರಮೋದ್ ಶೆಟ್ಟಿ, ರಚನಾ ದಶರತ್, ಗುರುದೇವ್ ನಾಗರಾಜ, ವಿಲಾಸ್ ಕುಲಕರ್ಣಿ, ಶಿವಮೊಗ್ಗ ರಾಮಣ್ಣ ಸೇರಿದಂತೆ ಹಲವರು ಚಿತ್ರದ ತಾರಾಬಗಳದಲ್ಲಿದ್ದಾರೆ.