ಕನ್ನಡದ ಅರ್ನಾಲ್ಡ್, ಮರಿ ಟೈಗರ್ ವಿನೋದ್ ಪ್ರಭಾಕರ್ ನಟಿಸಿ, ನಿರ್ಮಾಣ ಮಾಡಿರುವ ‘ಲಂಕಾಸುರ’ ಚಿತ್ರವು ಬಿಡುಗಡೆಗೆ ಸಜ್ಜುಗೊಂಡಿದೆ. ಇದೇ ವೇಳೆ ಚಿತ್ರದ ಜನಪ್ರಿಯತೆಯ ಧಾಟಿಯ ಹಾಡು ಬಿಡುಗಡೆಗೊಂಡಿದೆ.
ಅದೇ ಮಾಡರ್ನ್ ಮಹಾಲಕ್ಷ್ಮಿ..!
ಟೈಗರ್ ಟಾಕೀಸ್ ಮೂಲಕ ನಿಶಾ ವಿನೋದ್ ಪ್ರಭಾಕರ್ ನಿರ್ಮಿಸಿರುವ ಲಂಕಾಸುರ ಚಿತ್ರದ ಈ ಹಾಡನ್ನು ಜನಪ್ರಿಯ ನಿರ್ದೇಶಕ ಚೇತನ್ ಕುಮಾರ್ ಬರೆದಿದ್ದಾರೆ.
ಎ2 ಮ್ಯೂಜಿಕ್ ಮೂಲಕ ಹೊರಬಂದಿರುವ ಈ ಹಾಡನ್ನು ಕನ್ನಡದ ಡೈನಾಮಿಕ್ ನಟಿ ಮಾಲಾಶ್ರೀ ಬಿಡುಗಡೆಗೊಳಿಸಿದ್ದು ವಿಶೇಷ.
ಶನಿವಾರ (ಫೆ.11) ನಡೆದ ಅದ್ದೂರಿ ಸಮಾರಂಭದಲ್ಲಿ ಹಿರಿಯ ನಟಿ ಶೃತಿ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ.ಜಿ.ರಾಮಮೂರ್ತಿ, ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರ ಹಾಜರಾತಿಯೂ ವಿಶೇಷವಾಗಿತ್ತು.
ವಿನೋದ್ ಪ್ರಭಾಕರ್ ಮಾಡುವ ಸಾಹಸ ಸನ್ನಿವೇಶಗಳು ನನಗೆ ಸ್ಫೂರ್ತಿ. ಹಾಗಾಗಿ ನಾನು ಅವರ ದೊಡ್ಡ ಅಭಿಮಾನಿ ಎಂದರು ಮಾಲಾಶ್ರೀ. ಟೈಗರ್ ಟಾಕೀಸ್ ಮೂಲಕ ವಿನೋದ್ ದಂಪತಿಗಳು ಮಾಡಿರುವ ಪ್ರಯತ್ನ ಅತ್ಯಂತ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಹಿಂದೆ ಪ್ರಭಾಕರ್ ಅವರ ಜೊತೆ ನಟಿಸಿದ್ದೆ. ಈಗ ‘ಮಾದೇಶ’ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರ ಜೊತೆ ನಟಿಸಿದ್ದೇನೆ. ಅವರ ‘ಲಂಕಾಸುರ’ ಯಶಸ್ಸು ಕಾಣಲಿ ಎಂದು ನಟಿ ಶೃತಿ ಹಾರೈಸಿದರು.
ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ.ಜಿ.ರಾಮಮೂರ್ತಿ ಸೇರಿದಂತೆ ಗಣ್ಯರು ತಮ್ಮ ಮಾತುಗಳ ಮೂಲಕ ಚಿತ್ರಕ್ಕೆ ಶುಭ ಕೋರಿದರು.
ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ನೋಡಿ ಹಾರೈಸಿ ಎಂದರು ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್.
ಕೊರೋನ ಬರುವ ಮುಂಚೆ ರಾಘವ ಮುನಿಸ್ವಾಮಿ ಅವರು ನನಗೆ ಅಡ್ವಾನ್ಸ್ ನೀಡಿ ಈ ‘ಲಂಕಾಸುರ’ ಚಿತ್ರ ಆರಂಭಿಸಿದ್ದರು. ಆನಂತರ ಕಾರಣಾಂತರದಿಂದ ನಾವೇ ಟೈಗರ್ ಟಾಕೀಸ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಬೇಕಾಯಿತು ಎಂದರು ವಿನೋದ್ ಪ್ರಭಾಕರ್.
ಹಿಂದೆ ಟೀಸರ್ ಬಿಡುಗಡೆ ಮಾಡಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ, ಹಾಗೆಯೇ ಲೋಗೊ ಅನಾವರಣ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾನು ಆಭಾರಿ. ನನ್ನ ಇಡೀ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ. ಎಲ್ಲರೂ ಇಷ್ಟಪಡುವ ಚಿತ್ರ ಮಾಡಿದ್ದೇವೆ. ನೋಡಿ ಪ್ರೋತ್ಸಾಹ ನೀಡಿ ಎಂದರು.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲಾ ಹಾಡುಗಳನ್ನು ಚೇತನ್ ಕುಮಾರ್ ಬರೆದಿರುವುದು ವಿಶೇಷ.
ವಿಜೇತ್ ಕೃಷ್ಣ ಈ ಚಿತ್ರದ ಸಂಗೀತ ನಿರ್ದೇಶಕರು.
ನಿರ್ದೇಶಕ ಪ್ರಮೋದ್ ಕುಮಾರ್, ಛಾಯಾಗ್ರಾಹಕ ಸುಜ್ಞಾನ್, ನೃತ್ಯ ನಿರ್ದೇಶಕ ಭಜರಂಗಿ ಮೋಹನ್ ಈ ಸಂದರ್ಭದಲ್ಲಿ ಹಾಜರಿದ್ದರು.