ಶ್ರೀನಗರ ಕಿಟ್ಟಿ ಮುಖ್ಯ ಪಾತ್ರದಲ್ಲಿರುವ ‘ಗೌಳಿ’ ಚಿತ್ರವು ಭರ್ಜರಿ ವ್ಯಾಪಾರದಿಂದಾಗಿ ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿದೆ.
ಅದ್ದೂರಿ ಮೇಕಿಂಗ್ ಹಾಗೂ ಟೈಟಲ್ ಮತ್ತು ಟೀಸರ್ ಮೂಲಕವೇ ಹೆಚ್ಚು ಸುದ್ದಿಯಾಗಿರುವ ಗೌಳಿ ಚಿತ್ರದ ತೆಲುಗು ಡಬ್ಬಿಂಗ್ ರೈಟ್ಸ್ ಹಾಗೂ ವಿತರಣಾ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.
ಶ್ರೀನಗರ ಕಿಟ್ಟಿ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್ ಈಗಾಗಲೇ ಸಾಕಷ್ಟು ವೈರಲ್ ಆಗಿರುವುದರಿಂದ ದೇಶವ್ಯಾಪಿ ಗಮನ ಸೆಳೆದಿದೆ ಎಂಬುದು
ನಿರ್ಮಾಪಕ ರಘು ಸಿಂಗಂ ವಿವರಣೆ.
ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ಈ ಸಮಯದಲ್ಲಿ ಗೌಳಿ ಚಿತ್ರದ ಬಿಡುಗಡೆ ದಿನಾಂಕವನ್ನು ಸಹ ಪ್ರಕಟಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಈಚೆಗೆ ಮಹಾರಕ್ಕಸ ಹಾಡಿನ ಮೇಕಿಂಗ್ ಬಗ್ಗೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್, ದುನಿಯಾ ವಿಜಯ್, ಪ್ರಜ್ವಲ್ ಸೇರಿದಂತೆ ಅನೇಕ ಕಲಾವಿದರು ಚಿತ್ರತಂಡವನ್ನು ಅಭಿನಂದಿಸಿದ್ದರು.
ಶ್ರೀನಗರ ಕಿಟ್ಟಿ ರಗಡ್ ಹಾಗೂ ಕೌಟುಂಬಿಕ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಎದುರು ಪಾವನಾಗೌಡ ಮೊದಲಬಾರಿಗೆ ಗ್ರಾಮೀಣ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ರಂಗಾಯಣ ರಘು, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧೀ, ಗೋಪಾಲಕೃಷ್ಣ ದೇಶಪಾಂಡೆ,
ಮರುಡಯ್ಯ, ಗೋವಿಂದೇಗೌಡ ಚಿತ್ರದ ತಾರಾಬಳಗದಲ್ಲಿ ಇದ್ದಾರೆ.
ಶಶಾಂಕ್ ಶೇಷಗಿರಿ ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಮೇಶ್ ಸಂಕಲನ, ರಘು ಎಂ. ಕಲಾನಿರ್ದೇಶನ, ವಿಕ್ರಂಮೋರ್, ಅರ್ಜುನ್ ರೈ ಸಾಹಸ ನಿರ್ದೇಶನ ಚಿತ್ರಕ್ಕಿದೆ.