ಹೆಸರಾಂತ ಸಿನಿಮಾ ಛಾಯಾಗ್ರಾಹಕ ಎಚ್.ಎಂ.ಕೆ ಮೂರ್ತಿ ಅವರ ಪುತ್ರ ರಾಜೇಶ್ ಮೂರ್ತಿ ನಿರ್ದೇಶನ ಮಾಡಿರುವ ಚಿತ್ರ ಈ ವಾರ ಬಿಡುಗಡೆ ಕಾಣುತ್ತಿದೆ.
ಅದೇ ಲಿಫ್ಟ್ ಸ್ಟಿಕ್ ಮರ್ಡರ್..!
ಚಿತ್ರವು ಈಗಾಗಲೇ ಹಿಂದಿ ಭಾಷೆಗೆ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದು, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೂ ಮಾರಾಟವಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಸಹಜವಲ್ಲದ ಮನಸ್ಥಿತಿಯ ಹುಡುಗಿ ಸುತ್ತ ನಡೆಯುವ ಕಥೆಯಲ್ಲಿ ತನಿಖಾಧಿಕಾರಿ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಮಾಡೆಲಿಂಗ್ ಕ್ಷೇತ್ರದ ಉತ್ತರ ಕರ್ನಾಟಕ ಮೂಲದ ಆರ್ಯನ್ ರಾಜ್ ಹಾಗೂ ಹೈದರಾಬಾದ್ ಮೂಲದ ಅಲೈಕಾ ಮುಖ್ಯ ಪಾತ್ರದಲ್ಲಿದ್ದಾರೆ.
ಆಧುನಿಕ ಜೀವನ ಶೈಲಿಯಲ್ಲಿ ಮೋಹ ಪಾಶಕ್ಕೆ ಸಿಲುಕಿದವರ ಕಥೆ ಏನಾಗಬಹುದು.. ಥ್ರಿಲ್ಲಿಂಗ್ ಕ್ಷಣಗಳನ್ನು ಹುಡುಕಿದವರು ಏನಾದರು ಎಂಬುದನ್ನು ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ..
ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಹೊಸ ಸಾಹಸಗಳಿಗೆ ಮನಸ್ಸು ಮಾಡಿದರೆ ಎದುರಾಗುವ ಆಪತ್ತು ಹೇಗಿರುತ್ತದೆ ಎಂಬುದರ ಕೈಗನ್ನಡಿ ಈ ಸಿನಿಮಾ..
ಹಾಗೆಂದು ಚಿತ್ರತಂಡ ಹೇಳಿಕೊಂಡಿದೆ.
ಹೆಚ್ಚು ಪರಿಚಯವೇ ಇಲ್ಲದವರ ಜೊತೆ ಬೇರೆ ರೀತಿಯ ಸಾಹಸ ಮಾಡಲು ಹೋದರೆ ಏನಾಗುತ್ತದೆ..
ಮೋಜು ಮಸ್ತಿ ಮತ್ತು ಆಪತ್ತು ಇಂತಹ ವಿಷಯಗಳ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆ ಎಂಬುದು ನಿರ್ದೇಶಕ ರಾಜೇಶ್ ಮೂರ್ತಿ ವಿವರಣೆ.
ಕೊಲೆಯೊಂದರ ತನಿಖೆಯ ಸುತ್ತ ಕಥೆ ಇರುತ್ತದೆ. ಡೇಟಿಂಗ್ ಚಾಟಿಂಗ್ ಉಂಟು ಮಾಡುವ ಅಪಾಯಗಳನ್ನು ಚಿತ್ರವು ಒಳಗೊಂಡಿದೆ ಎಂಬುದನ್ನೂ ಚಿತ್ರತಂಡ ವಿವರಿಸಿದೆ.
ಯು/ಎ ಪ್ರಮಾಣ ಪತ್ರ ಪಡೆದು ಬಿಡುಗಡೆಗೆ ಸಿದ್ಧವಿರುವ ಈ ಚಿತ್ರವನ್ನು ಬಿ.ಎಸ್. ಮಂಜುನಾಥ್ ಹಾಗೂ ರಾಜೇಶ್ ಮೂರ್ತಿ ಸೇರಿ ನಿರ್ಮಿಸಿದ್ದಾರೆ.
ಆರ್.ವಿನೋದ್ ಛಾಯಾಗ್ರಹಣ, ನಿತೀಶ್ ಕುಮಾರ್ ಸಂಗೀತ ಚಿತ್ರಕ್ಕಿದೆ.
ಅಂದ ಹಾಗೆ ಚಿತ್ರವು ಈ ವಾರ ಅಂದರೆ ಡಿಸೆಂಬರ್ 16ರಂದು ತೆರೆ ಕಾಣುತ್ತಿದೆ.