ಅದಮ್ಯ ಸಾಹಸಿಗನ ವಿನಮ್ರ ಛಲ
ಕ್ಲಾಸಿಕ್ ಮಾದರಿ ವಿಜಯದ ಸಂಕೇತ
ಅದಮ್ಯ ಸಾಹಸದ ಉತ್ಸಾಹ ಮೈದಳೆಯುವುದು ಯೌವನ ಕಾಲದಲ್ಲಿ..
ಮುಂಬೈನಿಂದ ಗದಗ ರೈಲು ನಿಲ್ದಾಣಕ್ಕೆ ಬಂದಿಳಿಯುವ ದಪ್ಪ ಮೀಸೆಯ ದಷ್ಟ ಪುಷ್ಟ ದೇಹದ ಯುವಕ ಬ್ಯಾಂಡ್ ಬಜಾಯಿಗೆ ಹೆಜ್ಜೆ ಹಾಕುವಾಗ ಕಾಣುವುದು ಹುಚ್ಚು ಸಾಹಸಗಳ ಮೂರ್ತ ರೂಪವೇ..
ಅತ್ಯಂತ ವೇಗದ ಮುದ್ರಣ ಯಂತ್ರ ತಂದಿಡುವ ಆ ಯುವಕನ ವೇಗ ಅದನ್ನೂ ಮೀರಿದ್ದು.. ಎತ್ತರಕ್ಕೆ ಬೆಳೆಯುವ ಆಕಾಂಕ್ಷೆ ಎದ್ದು ಕಾಣುತ್ತದೆ..
ಗದಗ ಎಂಬ ಮಣ್ಣಿನ ರೂಪವನ್ನೇ ಹೊತ್ತ ಊರಿನಲ್ಲಿ ಬಿ.ಜಿ.ಸಂಕೇಶ್ವರ ಅಂಡ್ ಕೋ.. ಎಂಬ ಮುದ್ರಣ ಸಂಸ್ಥೆ ಅತ್ಯಂತ ಜನಪ್ರಿಯ ಮತ್ತು ಜನತೆಯ ಉಸಿರಿನಲ್ಲಿ ಬೆರೆತ ಪುಸ್ತಕ ಸಂಸ್ಕೃತಿಯ ಹೆಗ್ಗಳಿಕೆ.
ಅದರ ಮಾಲೀಕರಾದ ಸಂಕೇಶ್ವರ ಸರಳತೆಯ ಸಾಕಾರ ಮೂರ್ತಿ. ಊರಿನ ಜನರಲ್ಲಿ ಗೌರವಸ್ಥ ಮತ್ತು ಆದರ್ಶದ ವ್ಯಕ್ತಿ. ಅವರ ಮಗನೇ ಈ ವಿಜಯ್. ಅಪ್ಪನ ನೆರಳು ಬಹಳ ಸಮಯ ಬೇಡವೆಂದು ಹೊರಬಂದು ಟ್ರಾನ್ಸ್ ಪೋರ್ಟ್ ಉದ್ಯಮ ಸ್ಥಾಪಿಸಿದ ಗಟ್ಟಿಗ..
ಆದರೆ ಅದು ಕಠಿಣವಾದ ಹಾದಿ. ಕಲ್ಲು ಮುಳ್ಳುಗಳೇ ಹೆಚ್ಚು. ಆದರೂ ತಾಳ್ಮೆಗೆಡದೆ ಮುನ್ನಡೆದ ವಿಜಯ್ ಅಲಿಯಾಸ್ ವಿಜಯ್ ಸಂಕೇಶ್ವರ ಕಟ್ಟಿದ್ದು ಬೃಹತ್ ಸಾಮ್ರಾಜ್ಯ.
ಅತ್ಯಂತ ಬುದ್ಧಿಮತ್ತೆ ಮತ್ತು ವ್ಯಾವಹಾರಿಕ ಗುಣಗಳ ಗಣಿಯಾಗಿದ್ದ ವಿಜಯ್ ಒಂದು ಲಾರಿಯಿಂದ ಆರಂಭಿಸಲಾದ ಉದ್ಯಮ ವಿ.ಆರ್.ಎಲ್ ಸಂಸ್ಥೆ. ಅದು ಬೃಹದಾಕಾರವಾಗಿ ಬೆಳೆದು ನಾಡಿನ ಹೆಮ್ಮೆಯ ಸಂಸ್ಥೆ ಆಗುವಲ್ಲಿ ಎದುರಿಸಿದ ಸಮಸ್ಯೆ ಮತ್ತು ಬೆಳೆದ ಪರಿಯನ್ನು ಒಂದು ಮಿತಿಯಲ್ಲಿ ಕಟ್ಟಿ ಕೊಡಲಾಗಿದೆ.
ಅದೇ ವಿಜಯಾನಂದ..!
ರಿಶಿಕಾ ಶರ್ಮಾ ನಿರ್ದೇಶನದ ಈ ಬಯೋಪಿಕ್ ಮೊದಲು ಗಮನ ಸೆಳೆಯುವುದು ಸವೆದು ಹೋದ ಕಾಲಘಟ್ಟವನ್ನು ಮತ್ತೆ ಅದೇ ಮಾದರಿಯಲ್ಲಿ ಕಟ್ಟಿ ಕೊಡುವುದರಲ್ಲಿ..
ಎರಡನೇಯದು ಅದಮ್ಯ ಛಲ ಮತ್ತು ಉತ್ಸಾಹ ಕಣ್ಣು ಮತ್ತು ದೇಹ ಭಾಷೆಯಲ್ಲಿ ತುಂಬಿಕೊಂಡ ಯುವಕ ಆತಂಕವನ್ನೂ ಸಮ ಚಿತ್ತದಿಂದ ಎದುರಿಸುವ ದಿಟ್ಟತನ ಅನುಪಮ.
‘ಸಂಪತ್ತು ಸಾಹಸಿಯ ಪರ’ ಎಂಬುದಕ್ಕೆ ನಿದರ್ಶನವಾದ ಆ ಯುವಕ ಬೆಳೆಯುವ ಪರಿ ರೋಚಕ. ವಿ.ಆರ್.ಎಲ್ ಸಂಸ್ಥೆ ಕನ್ನಡ ನೆಲದ ಮೂಲೆ ಮೂಲೆಯಲ್ಲಿ ಬೇರು ಬಿಟ್ಟು ವಿಸ್ತಾರವಾದ ನೆಲೆ ಕಂಡುಕೊಂಡಿರುವುದರಿಂದ ಈ ಚಿತ್ರ ಹೆಚ್ಚು ಆಪ್ತವೆನಿಸುತ್ತದೆ..
ಮಹಾನ್ ಸಾಧನೆ ಮಾಡಿದ ವ್ಯಕ್ತಿಯ ಬದುಕಿನಲ್ಲಿ ನಡೆದಿರಬಹುದಾದ ನೈಜ ಘಟನೆಗಳನ್ನು ತೆರೆಯ ಮೇಲೆ ಸಮರ್ಥವಾಗಿ ಅಭಿವ್ಯಕ್ತಿಸುವಲ್ಲಿ ‘ವಿಜಯಾನಂದ’ ಸಫಲವಾಗಿದೆ. ನಿಜವಾಗಿ ಚಿತ್ರವೊಂದು ಭಾವುಕ ಪಯಣ. ಹಾಗಾಗಿ ಪ್ರೇಕ್ಷಕ ಇಲ್ಲಿ ವಿ.ಆರ್.ಎಲ್ ನ ಯಾತ್ರಿಕ.
‘ನೈತಿಕ ತಳಹದಿಯ ಮೇಲೆ ಕಟ್ಟಿದ ಸಂಸ್ಥೆ ಎಂದಿಗೂ ಸೋಲುವುದಿಲ್ಲ..’
ಎಂಬುದಕ್ಕೆ ನಿದರ್ಶನ ನಮ್ಮ ಸಂಸ್ಥೆ ಎಂಬುದನ್ನು ಗಟ್ಟಿಯಾಗಿಯೇ ಪ್ರತಿಪಾದಿಸಲಾಗಿದೆ.
ವಿ ಆರ್ ಎಲ್ ಪ್ರೊಡಕ್ಷನ್ ಮೂಲಕ ಚಿತ್ರವನ್ನು ನಿರ್ಮಿಸಿರುವ ಆನಂದ್ ಸಂಕೇಶ್ವರ ಅವರ ನಿರೂಪಣೆ ಆಪ್ತ ವೆನಿಸುವುದರ ಜೊತೆಗೆ ಸಂಸ್ಥೆ ಕಟ್ಟುವಲ್ಲಿ ಅವರ ಪರಿಶ್ರಮವೂ ಎದ್ದು ಕಾಣುತ್ತದೆ.
ವಿಜಯ ಸಂಕೇಶ್ವರ್ ಮಾಧ್ಯಮ ಲೋಕದಲ್ಲಿ ಮಾಡಿದ ಕ್ರಾಂತಿ ಅನನ್ಯ.. ಅದರ ವಿವರ ಹೇಳುವಾಗ ಕೊಂಚ ನಿಧಾನ ಎನಿಸುವುದನ್ನು ಬಿಟ್ಟರೆ ಇದೊಂದು ಅತ್ಯುತ್ತಮ ಮನರಂಜನಾತ್ಮಕ ಮತ್ತು ಸ್ಫೂರ್ತಿದಾಯಕ ಚಿತ್ರ.
ಹಾಗೆಯೇ ಅವರು ಒಂದು ರಾಜಕೀಯ ಪಕ್ಷ ಕಟ್ಟಿದ ವಿವರಗಳು ಚಿತ್ರದ ಭಾಗವಾಗಿಲ್ಲ.. ಮತ್ತು ಅದು ಕೊರತೆಯೂ ಅಲ್ಲ..
ಮುಖ್ಯ ಪಾತ್ರ ನಿರ್ವಹಿಸಿರುವ ನಿಹಾಲ್ ರಜಪೂತ್ ಅವರದು ಅತ್ಯುತ್ತಮ ಅಭಿನಯ. ಹಿರಿಯ ನಟ ಅನಂತ್ ನಾಗ್ ಎಂದಿನ ಸಹಜ ನಟನೆ ಮೆರೆದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ನೋಡುವುದೇ ಥ್ರಿಲ್.
ಇನ್ನುಳಿದಂತೆ ಸಿರಿ ಪ್ರಹ್ಲಾದ್, ಭರತ್ ಭೂಪಣ್ಣ, ವಿನಯ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಪ್ರಕಾಶ್ ಬೆಳವಾಡಿ, ದಯಾಳ್ ಪದ್ಮನಾಬ್, ರಮೇಶ್ ಭಟ್, ಗಣೇಶ್ ರಾವ್, ನಟರಾಜ್ ಮೊದಲಾದವರ ಅಭಿನಯ ಅಚ್ಚುಕಟ್ಟು.
ಕೀರ್ತನ್ ಪೂಜಾರಿ ಛಾಯಾಗ್ರಹಣ, ಗೋಪಿ ಸುಂದರ್ ಸಂಗೀತ ಚಿತ್ರಕ್ಕೆ ಪೂರಕ..
ಅದರಂತೆಯೇ ನಿಮ್ಮ ಬರವಣಿಗೂ ಆಸಕ್ತಿಯನ್ನು ಹೆಚ್ಚಿಸುವ ಕಲಾಕುಸುರಿ ಸರ್ ಅಭಿನಂದನೆಗಳು