ಕನ್ನಡದ ಜನಪ್ರಿಯ ನಿರ್ದೇಶಕರ ಸಾಲಿಗೆ ಸೇರುವ ನಾಗ್ ಶೇಖರ್ ಈಗ ತಮ್ಮ ಪ್ರತಿಭಾ ಸಾಮರ್ಥ್ಯ ಪರಿಚಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ ದಕ್ಷಿಣ ಭಾರತ ಸಿನಿಮಾ ಅವರಿಗೆ ರತ್ನಗಂಬಳಿ ಹಾಸಿದೆ..
ಸಂಜು ವೆಡ್ಸ್ ಗೀತ, ಮೈನಾ ಹಾಗೂ ಇನ್ನಿತರ ಲವ್ ಕ್ಲಾಸಿಕ್ ಚಿತ್ರಗಳ ಮೂಲಕ ಹೆಸರಾದ ನಾಗ್ ಶೇಖರ್ ನಟನೆಯ ಮೂಲಕವೇ ಚಿತ್ರರಂಗಕ್ಕೆ ಬಂದವರು. ಈಗ ಅವರು ನಿರ್ದೇಶನ ಮಾಡಿರುವ ತೆಲುಗು ಚಿತ್ರ ‘ಗುರುತುಂದ ಸೀತಾಕಾಲಂ’ ಬಿಡುಗಡೆ ಕಂಡಿದೆ.
ಹಾಗೆಯೇ ಸೀಳು ತುಟಿ ಕಥೆ ಇರುವ ತಮಿಳು ಚಿತ್ರದ ಮುಖ್ಯ ಪಾತ್ರದಲ್ಲಿ ನಾಗ್ ಶೇಖರ್ ನಟಿಸಿದ್ದು, ಆ ಚಿತ್ರ ಬಿಡುಗಡೆ ಸಜ್ಜುಗೊಂಡಿದೆ.
‘ಗುರುತುಂದ ಸೀತಾಕಾಲಂ’ ಚಿತ್ರದ ಮುಖ್ಯ ಪಾತ್ರದಲ್ಲಿ ಸತ್ಯದೇವ ಕಾಂಚರನಾ ಹಾಗೂ ತಮನ್ನಾ ಭಾಟಿಯಾ ನಟಿಸಿರುವುದು ವಿಶೇಷವಾಗಿದೆ. ಇದು ಕಳೆದ ವರ್ಷ ಕನ್ನಡದಲ್ಲಿ ಯಶಸ್ಸು ಕಂಡಿದ್ದ ‘ಲವ್ ಮಾಕ್ ಟೈಲ್’ ಚಿತ್ರದ ಹೊಸ ಅವತರಣಿಕೆಯಾಗಿ ಮೂಡಿ ಬಂದಿದೆ.
ಈಚೆಗೆ ಚಿತ್ರದ ಕುರಿತು ವಿವರಣೆ ನೀಡಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು. ಈ ವೇಳೆ ನಟ, ನಿರ್ದೇಶಕ ನಾಗ್ ಶೇಖರ್ ಬಹಳ ಕಾಲದ ತಮ್ಮ ಅಜ್ಞಾತ ವಾಸದ ವಿಷಯದ ಜೊತೆಗೆ ಚಿತ್ರದ ವಿವರಗಳನ್ನು ಬಿಚ್ಚಿಟ್ಟರು.
ಲವ್ ಮಾಕ್ ಟೈಲ್ ಚಿತ್ರದ ಹಕ್ಕು ಪಡೆದು ಚಿತ್ರ ಮಾಡಲು ಹೊರಟಾಗ ನಿರ್ಮಾಪಕರ ಕೊರತೆ ಎದುರಾಯಿತು. ಆಗ ಗೆಳೆಯರ ಸಹಕಾರದ ಜೊತೆಗೆ ನಾಗ್ ಶೇಖರ್ ಮೂವೀಸ್, ಮಣಿಕಂಠ ಎಂಟರ್ಟೈನ್ಮೆಂಟ್ , ಶ್ರೀ ವೇದಾಕ್ಷರ ಮೂವೀಸ್ ಮೂಲಕ ಭಾವನಾ ರವಿ, ನಾಗ್ ಶೇಖರ್ ಹಾಗೂ ರಾಮರಾವ್ ಚಿಂಟಪಲ್ಲಿ ಜೊತೆ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂಬ ವಿವರ ಕೊಟ್ಟರು ನಾಗ್ ಶೇಖರ್.
ತೆಲುಗಿನಲ್ಲಿ ಚಿತ್ರ ನಿರ್ದೇಶನ ಮಾಡುವಾಗ ಇರಬಹುದಾದ ಸವಾಲುಗಳನ್ನು ಎದುರಿಸಿ ಈ ಚಿತ್ರ ನಿರ್ದೇಶನ ಮಾಡಿರುವೆ; ತಮನ್ನಾ ಭಾಟಿಯಾ ಅವರು ಪಾತ್ರ ಮಾಡಲು ಒಪ್ಪಿದ ಬಳಿಕ ನಮ್ಮ ಶಕ್ತಿ ಹೆಚ್ಚಾಯಿತು ಎಂದು ಹೇಳುತ್ತಾ ಹೋದರು ನಾಗ್ ಶೇಖರ್.
ಗೆಳೆಯ ಸತ್ಯ ಹೆಗಡೆ ಕ್ಯಾಮೆರಾ ಕೆಲಸ ನಿರ್ವಹಿಸಿದ್ದು ಬಹಳ ಅದ್ಭುತವಾಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸುಮಧುರವಾದ ನಾಲ್ಕು ಹಾಡುಗಳಿಗೆ ಕಾಲಭೈರವ ಸಂಗೀತವನ್ನು ನೀಡಿದ್ದಾರೆ. ಬಾಹುಬಲಿ ಚಿತ್ರಕ್ಕೆ ಸಂಕಲನ ಮಾಡಿದಂತಹ ಕೋಟಗಿರಿ ವೆಂಕಟೇಶ್ವರ ರಾವ್ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಕನ್ನಡದ ಕಾವ್ಯ ಶೆಟ್ಟಿ, ಮೇಘ ಆಕಾಶ್ ಇತರ ಪಾತ್ರ ವರ್ಗದಲ್ಲಿದ್ದಾರೆ ಎಂಬ ವಿವರ ಕೊಟ್ಟರು.
ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಪತ್ರಕರ್ತ ಚಂದ್ರು ಚೂಡು, ಆನಂದ್ ಆಡಿಯೋ ಶ್ಯಾಮ್, ಸ್ಟೀಲ್ ಶ್ರೀನಾಥ್, ನಿರ್ದೇಶಕ ರವಿವರ್ಮ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.