ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಪಾತ್ರದಲ್ಲಿರುವ ‘ತ್ರಿಬಲ್ ರೈಡರ್’ ಬಿಡುಗಡೆಗೆ ಸಜ್ಜುಗೊಂಡಿದ್ದು, ಮುಂದಿನ ವಾರ ಅಂದರೆ ನವೆಂಬರ್ 25ರಂದು ಚಿತ್ರ ಮಂದಿರಗಳಲ್ಲಿ ಕಣ್ತುಂಬಿಕೊಳ್ಳಬಹುದು..
ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರದ ಭರಟೆ ಜೋರಾಗಿದ್ದು, ಈಚೆಗೆ ಬಿಡುಗಡೆ ಕಂಡ ‘ಟ್ವಿಂಕಲ್ ಟ್ವಿಂಕಲ್ ಲಿಟ್ಲು ಸ್ಟಾರ್’ ಎಂಬ ಹಾಡು ಜನಪ್ರಿಯವಾಗಿ ಯುವ ಜನರ ಬಾಯಿಯ ಚಾಕೋಲೇಟ್ ಆಗಿದೆ.
ಆನಂದ್ ಆಡಿಯೋ ಮೂಲಕ ಹೊರ ಬಂದಿರುವ ಹಾಡಿಗೆ ಸಾಯಿಕಾರ್ತಿಕ್ ಸಂಗೀತ ನೀಡಿದ್ದಾರೆ ಮತ್ತು ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಭೂಷಣ್ ನೃತ್ಯ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಕೊರೊನಾ ಭಯಾನಕವಾಗಿ ಕಾಡುತ್ತಿದ್ದ ದಿನಗಳಲ್ಲಿ ಈ ಚಿತ್ರ ಆರಂಭವಾಯಿತು. ಇಲ್ಲಿಯವರೆಗೆ ಮೂರು ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಕಂಡು ಚಿತ್ರದ ಜನಪ್ರಿಯತೆ ಮತ್ತು ಕುತೂಹಲ ಹೆಚ್ಚಿಸಿದೆ ಎಂದರು ಗೋಲ್ಡನ್ ಸ್ಟಾರ್ ಗಣೇಶ್.
ನಿರ್ದೇಶಕ ಮಹೇಶ್ ಗೌಡ, ನಿರ್ಮಾಪಕ ವೈ.ಎಂ.ರಾಮ್ ಗೋಪಾಲ್ ಚಿತ್ರದ ಆಶಯಗಳ ಬಗ್ಗೆ ತಿಳಿಸಿ, ನಮ್ಮ ಚಿತ್ರಕ್ಕೆ ಮಾಧ್ಯಮಗಳ ಪ್ರೋತ್ಸಾಹವಿರಲಿ ಎಂಬ ಕೋರಿಕೆ ಸಲ್ಲಿಸಿದರು.
ಅಂದ ಹಾಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜೋಡಿಯಾಗಿ ಮೂವರಿದ್ದಾರೆ. ಅದಿತಿ ಪ್ರಭುದೇವ, ರಚನಾ ಹಾಗೂ ಮೇಘಶೆಟ್ಟಿ ಚಿತ್ರದಲ್ಲಿದ್ದಾರೆ. ಆದರೆ ಮೂವರ ಪಾತ್ರ ಏನೆಂಬುದನ್ನು ತಿಳಿಯಲು ಚಿತ್ರ ನೋಡಬೇಕು ಎಂಬ ವಿವರಗಳು ಬಂದವು.