ಕಳೆದ ಕೆಲ ತಿಂಗಳ ಹಿಂದೆ ತೆರೆ ಕಂಡಿದ್ದ ‘ಕಾಶ್ಮೀರಿ ಫೈಲ್ಸ್’ ಎಂಬ ಚಿತ್ರ ವಿವಾದ ಮತ್ತು ಜನಪ್ರಿಯತೆ ಎರಡನ್ನೂ ಪಡೆದಿತ್ತು. ಅದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ನಲುಗಿದ ಕಾಶ್ಮೀರಿ ಪಂಡಿತರ ಸುತ್ತ ಕಥೆ ಹೆಣೆಯಲಾಗಿತ್ತು..
ಈಗ ಇದರ ಪ್ರಸ್ತಾಪ ಏಕೆಂದರೆ ಕನ್ನಡದಲ್ಲಿಯೂ ಅದೇ ಮಾದರಿಯ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಅದೇ ‘ವಿಧಿ (ಆರ್ಟಿಕಲ್)370’. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆಯುವುದಕ್ಕೆ ಮುಂಚೆ ಅಲ್ಲಿ ದೇಶದ ಯೋಧರ ತ್ಯಾಗ ಮತ್ತು ಪರಿಶ್ರಮ ಹೇಗಿತ್ತು ಎಂಬುದರ ಸುತ್ತ ಈ ಚಿತ್ರದ ಕಥೆಯನ್ನು ರೂಪಿಸಲಾಗಿದೆ.
ಭರತ್ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಕೆ.ಶಂಕರ್ ನಿರ್ದೇಶನ ಮಾಡಿದ್ದು, ಚಿತ್ರವು ನವೆಂಬರ್ ಗೆ ಬಿಡುಗಡೆ ಕಾಣಲಿದೆ. ಸುಪ್ರೀಂ ಹೀರೋ ಶಶಿಕುಮಾರ್, ಶೃತಿ, ದಿ.ಶಿವರಾಮ್, ರಮೇಶ್ ಭಟ್ ಮೊದಲಾದವರು ಚಿತ್ರದ ತಾರಾಗಣದಲ್ಲಿ ಇದ್ದಾರೆ.
ಸೋಮವಾರ ನಡೆದ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಭಾರತೀಯ ಸೈನ್ಯದಲ್ಲಿ ದುಡಿದ ಯೋಧರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ವಿಶೇಷವಾಗಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಕಾಶ್ಮೀರಿ ಪಂಡಿತರಾದ ಆರ್.ಕೆ.ಮುಟ್ಟು ಆರ್ಟಿಕಲ್ 370 ತೆಗೆಯುವ ಮುಂಚೆ ಮತ್ತು ಆನಂತರದ ಪರಿಸ್ಥಿತಿಗಳನ್ನು ವಿವರಿಸಿದರು. ಭಯಾನಕ ಸನ್ನಿವೇಶಗಳಲ್ಲಿ ಜನರು ನಲುಗಿದ್ದಾರೆ. ಉಗ್ರಗಾಮಿಗಳಿಂದ ಪಂಡಿತರ ಹತ್ಯೆ ಮತ್ತು ಮಹಿಳೆಯರ ಅತ್ಯಾಚಾರದ ಘಟನೆಗಳು ಅತ್ಯಂತ ಘೋರ ಎಂಬುದನ್ನು ವಿವರಿಸಿದರು ಮುಟ್ಟು.
ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸಿರುವ ಪ್ರಹ್ಲಾದ್ ವಿ.ಕುಲಕರ್ಣಿ ಉಗ್ರರ ವಿರುದ್ಧದ ಕಾರ್ಯಾಚರಣೆ ಸಂದರ್ಭಗಳನ್ನು ವಿವರಿಸಿದರು. ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿರುವ ನಿವೃತ್ತ ಯೋಧ ಜಯರಾಮ್ ಕೃಷ್ಣಪ್ಪ, ಪ್ರಸ್ತುತ ಆರ್.ಟಿ.ನಗರ ರಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉದೋಶಿ ಈರಣ್ಣ, ಇಸ್ರೋ ಉಪಗ್ರಹ ಕೇಂದ್ರದಲ್ಲಿ ಸಿನಿಯರ್ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಿವೃತ್ತ ಯೋಧ ಗೋವಿಂದರಾಜು, ಎನ್ ಸಿ ಸಿ ಎರಡನೇ ಪಡೆಯಲ್ಲಿರುವ ಯೋಧ ಹವಲ್ದಾರ್ ಈರಪ್ಪ ಹುರಕಡ್ಲಿ ಪೋಸ್ಟರ್ ಬಿಡುಗಡೆಗೆ ಸಾಕ್ಷಿಯಾಗಿದ್ದರು.
ನಿರ್ದೇಶಕರು ಬಂದು ಕಥೆ ಹೇಳಿದಾಗ, ಅದು ಇಷ್ಟವಾಗಿ ಲೈರಾ ಎಂಟಟೈನರ್ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದ್ದು ನಿರ್ಮಾಪಕ ಭರತ್ ಗೌಡ.
ಚಿತ್ರದ ಆಶಯಗಳನ್ನು ವಿವರಿಸಿದ ನಿರ್ದೇಶಕ ಕೆ.ಶಂಕರ್, ಈ ಚಿತ್ರವನ್ನು ನೋಡಿದ ಸೆನ್ಸಾರ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕೆಲವೆಡೆ ಮತ್ತು ಕರ್ನಾಟಕದ ಮಡಿಕೇರಿ, ಚಿಕ್ಕಮಗಳೂರು ಮೊದಲಾದ ಕಡೆ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರ ಕೂಡ ಬಂತು ಅವರಿಂದ..
ರವಿ ಮತ್ತು ಚಂದ್ರು ಸೊಂಡೆಕೊಪ್ಪ ಚಿತ್ರದ ಛಾಯಾಗ್ರಾಹಕರಾಗಿದ್ದು, ವಿನು ಮನಸು ಸಂಗೀತ ನೀಡಿದ್ದಾರೆ. ವೇಲು ಸಾಹಸ ಚಿತ್ರಕ್ಕಿದೆ ಎಂಬ ಮಾಹಿತಿಗಳು ಬಂದವು.