ಉತ್ತರ ಕರ್ನಾಟಕ ಮೂಲದ ಇಬ್ಬರು ಸಾಹಸಿಗಳ ಪ್ರಯತ್ನದ ಫಲವಾಗಿ ಮೂಡಿ ಬಂದಿರುವ ‘ಚಾಂಪಿಯನ್’ ಚಿತ್ರ ಬಿಡುಗಡೆ ದಿನ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಆರ್ಭಟ ಹೆಚ್ಚಾಗಿದೆ ಮತ್ತು ಇದೇ ವೇಳೆ ಚಿತ್ರದ ಹೊಸ ಹಾಡು ಬಿಡುಗಡೆಗೊಂಡಿದೆ.
ಚಿತ್ರದ ಮುಖ್ಯ ಪಾತ್ರದಲ್ಲಿರುವ ಸಚ್ಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ ಮರಳುಗಾಡಿನಲ್ಲಿ ನೃತ್ಯ ಮಾಡುತ್ತಾ ಹಾಡುವ ‘ಕ್ರೇಜಿ ಹಾರ್ಟಿಗೆ..’ ಎಂಬ ಈ ಹಾಡು ಕಣ್ಮನ ಸೆಳೆಯುತ್ತಿದೆ.
ಮುಂದಿನ ವಾರ ಅಂದರೆ ಅಕ್ಟೋಬರ್ 14 ರಂದು ಬಿಡುಗಡೆ ಕಾಣುತ್ತಿರುವ ‘ಚಾಂಪಿಯನ್’ ಚಿತ್ರದ ವಿಭಿನ್ನ ಬಗೆ ಪೋಸ್ಟರ್ ಗಳು ಸರ್ಕಾರಿ ಸಾರಿಗೆ ಬಸ್ ಹಾಗೂ ಇತರ ವಾಹನಗಳ ಮೇಲೆ ರಾರಾಜಿಸುತ್ತಿವೆ.
‘ಏನಾದರೂ ಸರಿ ನಾವು ಗೆದ್ದೆ ಗೆಲ್ಲುವೆವು’ ಎಂದು ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದ ನಿರ್ಮಾಪಕ ಶಿವಾನಂದ್ ಎಸ್. ನೀಲಣ್ಣನವರ್, ಸ್ನೇಹಿತ ಸಚ್ಚಿನ್ ಧನಪಾಲ್ ಅವರಿಗೆ ಚಿತ್ರರಂಗದಲ್ಲಿ ನೆಲೆ ಕಲ್ಪಿಸಲು ಸಾಹಸ ಪಡುತ್ತಿದ್ದಾರೆ.
ಅದಕ್ಕೆ ತಕ್ಕಂತೆ ಚಿತ್ರದ ಮುಖ್ಯ ಪಾತ್ರಧಾರಿ ಸಚ್ಚಿನ್ ಧನಪಾಲ್ ಚಿತ್ರದ ಸಲುವಾಗಿ ಹಗಲಿರುಳು ಶ್ರಮಿಸಿದ್ದಾರೆ. ಮೈ ಹುರಿಗೊಳಿಸಲು ನಿಯಮಿತ ಕಸರತ್ತು ಮಾಡಿದ್ದಾರೆ. ಹಾಗೆಯೇ ಎದುರಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ತಯಾರಿದ್ದಾರೆ.
ಚಿತ್ರದ ಬಿಡುಗಡೆ ಹತ್ತಿರವಾಗುತ್ತಿದಂತೆ ‘ಚಾಂಪಿಯನ್’ ಪ್ರಚಾರವೂ ಅಬ್ಬರವನ್ನು ಪಡೆದುಕೊಂಡಿದೆ.