ಇಲ್ಲಿ ಪ್ರೇಮಿಗಳಿದ್ದಾರೆ.. ಪ್ರೇಮ ಎರಡು ರೀತಿಯಲ್ಲಿರುತ್ತದೆ ಜೋಡಿ ಪ್ರೇಮ ಮತ್ತು ಕುಟುಂಬ ಪ್ರೇಮ.. ನಿರ್ದೇಶಕರ ಪ್ರಕಾರ ಸಿಹಿ ಕುಟುಂಬ..
ಅದೇ ದಿಲ್ ಪಸಂದ್..!
ಒಬ್ಬ ಹೀರೋ ಇಬ್ಬರು ನಟಿಯರು. ಸಿಕ್ಕಿ ಒದ್ದಾಡುವುದರಲ್ಲಿ ಥ್ರಿಲ್. ಹುಡುಗಿಯರ ಪೈಕಿ ಒಬ್ಬರು ಮಾಡ್ ಮತ್ತು ಇನ್ನೊಬ್ಬರು ಸ್ಯಾಡ್. ಆದರೆ ತೆರೆಯ ಮೇಲೆ ನೋಡುವುದೇ ಮಜಾ.. ಏಕೆಂದರೆ ಇದು ದಿಲ್ ಪಸಂದ್ ಎಂದರು ನಿರ್ದೇಶಕ ಶಿವ ತೇಜಸ್.
ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ದಿಲ್ ಪಸಂದ್ ಸವಿದು ಆಚೆ ಬಂದಂತಹ ಅನುಭವ ಕೊಡುತ್ತದೆ ಈ ನಮ್ಮ ಚಿತ್ರ. ಡಾರ್ಲಿಂಗ್ ಕೃಷ್ಣ ಅವರ ಜೊತೆ ಕಾಣಿಸಿ ಕೊಂಡಿರುವುದು ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ. ಇಲ್ಲಿ ಅರ್ಜುನ್ ಜನ್ಯ ಸಂಗೀತ ಮತ್ತು ಶೇಖರ್ ಚಂದ್ರ ಛಾಯಾಗ್ರಹಣ ವಿಶೇಷವಾಗಿದೆ ಎಂದರು.
ಇಬ್ಬರಿದ್ದಾರೆ.. ಖಂಡಿತಾ ಸಂಘರ್ಷ ಇದ್ದೇ ಇದೆ. ಆದರೆ ಇಲ್ಲಿ ವಿಭಿನ್ನವಾಗಿದೆ. ಅದೇನೋ ಗೊತ್ತಿಲ್ಲ ನನಗೆ ರೀಲ್ ನಲ್ಲಿ ಇಬ್ಬರು ಸಿಕ್ಕೇ ಸಿಗುತ್ತಾರೆ ಎಂದು ನಕ್ಕರು ಡಾರ್ಲಿಂಗ್ ಕೃಷ್ಣ.
ಪ್ರೀತಿ ಪ್ರೇಮದ ಕಥೆ ಅದರಲ್ಲಿ ಪೇಚಾಡುವುದು ಮಾಮೂಲಿ ವರಸೆ. ಆದರೆ ಏಕೋ ಗೊತ್ತಿಲ್ಲ ಅಂತಹ ಪಾತ್ರಗಳೇ ಸಿಗುತ್ತಿವೆ ಎಂದರು.
ನಿಶ್ವಿಕಾ ನಾಯ್ಡು ಅವರಿಗೆ ಬೋಲ್ಡ್ ಎನಿಸುವ ಪಾತ್ರ. ಆದರೂ ಬಹಳವೇ ಇಷ್ಟವಾದ ಪಾತ್ರ. ಅದು ಹೇಗೆ ಎಂಬುದನ್ನು ವರ್ಣಿಸಲು ಸಾಧ್ಯವಿಲ್ಲ; ನೀವೇ ತೆರೆಯ ಮೇಲೆ ನೋಡಿ ಎಂದರು ನಿಶ್ವಿಕಾ.
ಮೇಘಾ ಶೆಟ್ಟಿ ಅವರ ಪಾತ್ರದಲ್ಲಿ ಎರಡು ಶೆಡ್ ಇರುತ್ತದೆ. ಒಂದು ಅಳು ಮುಂಜಿ ರೀತಿಯ ಪಾತ್ರ ಬಳಿಕ ಆಕೆ ಬದಲಾಗುತ್ತಾಳೆ. ಅದು ಬೇರೆ ರೀತಿಯಲ್ಲಿ ಇರುತ್ತದೆ ಎಂಬ ಉತ್ತರ ಬಂತು ಅವರಿಂದ.
ಅಂದ ಹಾಗೆ ಸುಮನ್ ಕೀರ್ತಿ ಈ ಚಿತ್ರದ ನಿರ್ಮಾಪಕರು. ಚಿತ್ರದ ಅಗತ್ಯಗಳಿಗೆ ಅನುಗುಣವಾಗಿ ಬಂಡವಾಳ ಹೂಡಿದ್ದೇನೆ ಎಂದರು.