ಚಿತ್ರಗಳು : ಕೆ.ಎನ್.ನಾಗೇಶ್ ಕುಮಾರ್
ಬೇರೆ ಬೇರೆ ಭಾಷೆಯ ಚಿತ್ರಗಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಹಾಗೂ ಸಾಹಸ ಕಲಾವಿದನಾಗಿ ಅಭಿನಯಿಸಿರುವ ಜಿಮ್ ರವಿ ಈಗ ಹೀರೋ ಆಗಿ ಅಭಿನಯಿಸಿರುವ ಚಿತ್ರ ಪುರುಷೋತ್ತಮ..
ಇನ್ನೇನು ಕೆಲವೇ ದಿನಗಳಲ್ಲಿ (ಮೇ6) ಬಿಡುಗಡೆಗೆ ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ ವೈಭವದ ಮತ್ತು ಆತ್ಮೀಯ ನಡವಳಿಕೆಯಿಂದ ಗಮನ ಸೆಳೆಯಿತು. ಮುಖ್ಯವಾಗಿ ಜಿಮ್ ರವಿ ತಮಗೆ ಸಹಾಯ ಮಾಡಿದ ಎಲ್ಲರನ್ನೂ ನೆನೆಯುತ್ತಾ ಸನ್ಮಾನಿಸಿ ಆನಂದಪಟ್ಟರು..
ಇದೊಂದು ಕೌಟುಂಬಿಕ ಮನರಂಜನಾ ಚಿತ್ರ. ಸಾಹಸ ದೃಶ್ಯಗಳು ಕಡಿಮೆ. ಆದರೆ ಅಭಿನಯ ಸಾಮರ್ಥ್ಯಕ್ಕೆ ಹೇಳಿ ಮಾಡಿಸಿದ ಚಿತ್ರ. ಮುಖ್ಯವಾಗಿ ಜಿಮ್ ರವಿ ಎದುರು ನಟಿಸಿರುವ ಅಪೂರ್ವ ಮೂರು ಶೆಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಪೂರ್ವಗೆ ನಟನಾ ಸಾಮರ್ಥ್ಯ ಹಾಕಲು ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ.
ಸುಮಾರು ಮೂರು ದಶಕಗಳ ಕಾಲ ಕ್ರೀಡಾಪಟುವಾಗಿ ಬಾಡಿ ಬಿಲ್ಡರ್ ಆಗಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ರವಿ ಅವರ ಜೀವನ ಹೂವಿನ ಹಾಸಿಗೆಯಲ್ಲ; ಅದು ಕಡು ಕಷ್ಟದ ಬದುಕು ಎಂಬುದನ್ನು ಅವರೇ ಹೇಳಿಕೊಂಡರು.
ಹಾಡು ಮತ್ತು ಟ್ರೈಲರ್ ಬಿಡುಗಡೆಗೊಳಿಸಲಾದ ಈ ಸಂದರ್ಭದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮಾಜಿ ಸಚಿವ ನರೇಂದ್ರಸ್ವಾಮಿ ಹಾಗೂ ಇತರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಚಿತ್ರದ ವಿತರಣೆಯನ್ನು ರಾಮರಾಮ ರೇ ನಿರ್ದೇಶಕ ಸತ್ಯಪ್ರಕಾಶ್ ಹಾಗೂ ಮಂಜುನಾಥ್ ಅವರ ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ ಮಾಡುತ್ತಿದ್ದರೆ, ಚಿತ್ರದ ಪ್ರಚಾರವನ್ನು ಐಪ್ಲೆಕ್ಸ್ ಕಂಪನಿ ವಹಿಸಿಕೊಂಡಿದೆ.
ಬೂಕನಕೆರೆಯ ವಿಜಯ್ ರಾಮೇಗೌಡ ನಿರ್ಮಿಸುತ್ತಿರುವ ‘ಪುರುಷೋತ್ತಮ’ ದ ನಿರ್ದೇಶಕರು ಎಸ್.ವಿ.ಅಮರನಾಥ್. ಕುಮಾರ್ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇದು ಬಡ ಹುಡುಗನೊಬ್ಬ ಸಾಧಿಸಿದ ಅಪೂರ್ವ ಕಥಾನಕ. ಚಿತ್ರದ ಒಳಗಡೆ ಏನಿದೆ ಎಂಬುದಕ್ಕಿಂತ ಸನಾರಂಭದಲ್ಲಿ ಜಿಮ್ ರವಿ ಬೆಳೆದ ಸಾಹಸಗಾಥೆ ರೋಚಕವಾಗಿತ್ತು.