ಟೈಟಲ್, ಪೋಸ್ಟರ್, ಟೀಸರ್ ಹೀಗೆ ಪ್ರತಿ ಹಂತದಲ್ಲೂ ಕುತೂಹಲ ಹುಟ್ಟಿಸಿರುವ ಸಿನಿಮಾ ಫೋರ್ ವಾಲ್ಸ್.. ಫರ್ ದ ಫಸ್ಟ್ ಟೈಮ್
ಈ ತಿಂಗಳಲ್ಲಿ ಬಿಡುಗಡೆ ಕಾಣುತ್ತಿದೆ..
ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿರುವ ‘ಫೋರ್ ವಾಲ್ಸ್’ ಸಿನಿಮಾ ಬಿಡುಗಡೆಗೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಮಾಹಿತಿಗಳನ್ನು ಹಂಚಿಕೊಂಡಿತು ಚಿತ್ರತಂಡ.
ಅಚ್ಯುತ್, ಸುಜಯ್, ಜಾಹ್ನವಿ, ಭಾಸ್ಕರ್ ನೀನಾಸಂ, ಡಾ.ಪವಿತ್ರ, ರಚನಾ ಅಭಿಪ್ರಾಯಗಳನ್ನು ಹಂಚಿಕೊಂಡರು. ಗಾಯಕ ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿ ಬಂದಿದ್ದ ‘ಕಣ್ಮಣಿಯೇ ಕಣ್ಮಣಿಯೇ’ ಹಾಡು ಗಮನ ಸೆಳೆದಿತ್ತು. ಅಚ್ಯುತ್ ಕುಮಾರ್ ಸೈಕಲ್ ಹಿಡಿದು ಗೆಳತಿ ಹಿಂದೆ ಸುತ್ತುತ್ತ, ಪ್ರೀತಿ ನಿವೇದನೆ ಮಾಡುವ ಹಾಡು ಕೇಳುಗರಿಗೆ ಮೋಡಿ ಮಾಡಿತ್ತು. ಶ್ರೀ ತಲಗೇರಿ ಬರೆದ ಸಾಹಿತ್ಯಕ್ಕೆ ಆನಂದ ರಾಜಾ ವಿಕ್ರಮ ಸಂಗೀತ ಸಂಯೋಜನೆ ಮಾಡಿದ್ದಾರೆ.
ಮಂತ್ರಂ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಾಗಿರುವ ಎಸ್.ಎಸ್ ಸಜ್ಜನ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಅಚ್ಯುತ್ ಕುಮಾರ್ ಅವರ ಬಗ್ಗೆ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಇದು ಕೌಟುಂಬಿಕ ನೆಲೆಯ ಚಿತ್ರ. ತಂದೆ ಮಗನ ನಡುವಿನ ಬಾಂಧವ್ಯದ ಕಥೆ ಚಿತ್ರದಲ್ಲಿದೆ. ಭರಪೂರ ಮನರಂಜನೆಯೂ ಇದೆ ಎಂದು ಹೇಳಿಕೊಂಡಿತು ಚಿತ್ರತಂಡ.
ಎಸ್.ವಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಟಿ. ವಿಶ್ವನಾಥ್ ನಾಯಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಡಾ. ಪವಿತ್ರ ನಾಯಕಿಯಾಗಿ ಅಭಿನಯಿಸಿದ್ದಾರೆ. ಡಾ. ಜಾನ್ಹವಿ ಜ್ಯೋತಿ, ದತ್ತಣ್ಣ, ಭಾಸ್ಕರ್ ನೀನಾಸಂ, ಶ್ರೇಯಾ ಶೆಟ್ಟಿ, ಆಂಚಲ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ವಿಡಿಆರ್ ಛಾಯಾಗ್ರಹಣ ಚಿತ್ರಕ್ಕಿದೆ.