ಒಂದು ಕಾಲದಲ್ಲಿ ಸ್ಟಾರ್ ಸಿಂಗರ್.. ಹೆಸರು ಆದರ್ಶ್ ಅಯ್ಯಂಗಾರ್. ಅಮೆರಿಕಾದಲ್ಲಿ ನೆಲೆಸಿದ್ದರೂ ದೇಶ ಮತ್ತು ಭಾಷೆಯ ಮೇಲೆ ಅಪಾರ ಗೌರವ.. ಹಾಗಾಗಿಯೇ ಹೊರಬಂದಿರುವುದು ‘ಜಯಯೇ..’
ಇದೊಂದು ದೇಶ ಭಕ್ತಿ ಬಿಂಬಿಸುವ ಆಲ್ಬಮ್. ಆದರ್ಶ್ ಅಯ್ಯಂಗಾರ್ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಗೀತೆ ಯುವ ಜನತೆಯನ್ನು ಸೇನೆಗೆ ಸೇರಲು ಪ್ರೋತ್ಸಾಹಿಸುತ್ತದೆ..
ಸಂಗೀತವೇ ತಮ್ಮ ಸಂಗಾತಿ ಅಂತಾ ಆರಾಧಿಸುತ್ತಿರುವ ಆದರ್ಶ್, ಜಯ ಹೇ ಎಂಬ ಗೀತೆ ಮೂಲಕ ಕರುನಾಡಿನ ಮನೆ-ಮನ ತಲುಪುವ ಪ್ರಯತ್ನ ಮಾಡಿದ್ದಾರೆ. ಆದರ್ಶ್ ಅವರ ಕನಸಿನ ಈ ಹಾಡನ್ನು ವಿಂಗ್ ಕಮಾಂಡರ್ ಸುದರ್ಶನ್, ರಾಮ್ ದಾಸ್ ಜಿ ಎನ್ ( Retired LT Col ), ನಟ ವಿರಾಟ್ ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರ್ಶ್ ಅಯ್ಯಂಗಾರ್ ಮೂಲತಃ ಮಲೆನಾಡಿನ ತವರು ಶಿವಮೊಗ್ಗದವರು. ಸದ್ಯ ಅಮೇರಿಕಾದಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದೆ ಸ್ಟಾರ್ ಸುವರ್ಣ ‘ಸ್ಟಾರ್ ಸಿಂಗರ್’ ಕಾರ್ಯಕ್ರಮದಿಂದ ಅಪಾರ ಜನಪ್ರಿಯತೆ ಪಡೆದುಕೊಂಡರು. ನಂತರ ಉದ್ಯೋಗ ಅರಸಿ ದೂರದ ಅಮೇರಿಕಾಗೆ ಹೋದರೂ ಸಂಗೀತದ ಮೇಲಿನ ಅವರ ಆಸಕ್ತಿ ಕಡಿಮೆಯಾಗಲಿಲ್ಲ. ಈ ದಿಶೆಯಲ್ಲಿ ಏನನ್ನಾದರೂ ಸಾಧಿಸುವ ಹಂಬಲ. ಹೀಗಾಗಿ ಅಮೇರಿಕಾದಲ್ಲೇ ತಮ್ಮದೊಂದು ಚಿಕ್ಕ ಸ್ಟುಡಿಯೋ ಮಾಡಿ ಬಿಡುವಿನ ಸಮಯದಲ್ಲಿ ಕೆಲವು ಪ್ರಯೋಗಗಳನ್ನು ಮಾಡಿದರು. ನಂತರ ‘ಮೈ ಫ್ರೆಂಡ್’ ಎಂಬ ವಿಡಿಯೋ ಹಾಡನ್ನು ‘ಶ್ರೀ ಕೃಷ್ಣ ಪ್ರೊಡಕ್ಷನ್’ ಮೂಲಕ ಮಾಡಿದರು. ಇದಕ್ಕೆ ಭಾರತ ಮತ್ತು ಅಮೇರಿಕಾ ಎರಡು ಕಡೆ ಶೂಟ್ ಮಾಡಿ ಹೊಸ ಹೆಜ್ಜೆ ಇಟ್ಟರು. ಇದೀಗ ಜಯ ಹೇ ಹಾಡನ್ನು ಭಾರತದ ಸೈನಿಕರಿಗೆ ಅರ್ಪಿಸಲಾಗಿದೆ.
ಹಳ್ಳಿಗಾಡಿನಿಂದಲೇ ಸೈನ್ಯಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಮಲೆನಾಡಿನ ಹಳ್ಳಿಯೊಂದರಲ್ಲಿ ಮತ್ತು ಅಲ್ಲಿನ ಕುಟುಂಬವನ್ನು ಆಯ್ಕೆ ಮಾಡಿಕೊಂಡು ತೀರ್ಥಹಳ್ಳಿಯ ಸುತ್ತ ಮುತ್ತ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಿ ಹೊರತಂದಿರುವ ಆಲ್ಬಂ ಗಮನ ಸೆಳೆದಿದೆ.
ರಾಕ್-ಪಾಪ್ ಜಾನರ್ ನಲ್ಲಿ ಮೂಡಿ ಬಂದಿರುವ ಜಯ ಹೇ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಹೇಮಂತ್ ಜೋಯೀಸ್ ಸಂಗೀತ ನೀಡಿದ್ದಾರೆ. ಆದರ್ಶ್ ಅಯ್ಯಂಗಾರ್
ಹಾಡಿಗೆ ಧ್ವನಿಯಾಗುವುದರ ಜೊತೆಗೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಹೇಮಂತ್ ಜೋಯಿಸ್, ಗುರುಪ್ರಸಾದ್ ಬಡಿಗೇರ್, ದರ್ಶನ್ ಕುಮಾರ್, ಶ್ರೀ ಹರ್ಷ ರಾಮ್ ಕುಮಾರ್ ನಟಿಸಿದ್ದು, ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ, ಗುರುಪ್ರಸಾದ್ ನರ್ನಾಡ್ ಕ್ಯಾಮೆರಾ,
ಸುಧೀರ್ ಎಸ್ ಜೆ ಸಂಕಲನವಿರುವ ಈ ಹಾಡು, ಆದರ್ಶ್ ಅಯ್ಯಂಗಾರ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಲಾಗಿದೆ..