ನಟ ವಿನೋದ್ ಪ್ರಭಾಕರ್ ಸ್ವತಃ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಟೈಗರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಮೂಲಕ ಅವರು ಮೊದಲಿಗೆ ‘ಲಂಕಾಸುರ’ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ವಿನೋದ್ ಅವರೇ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಚಿತ್ರೀಕರಣ ಈಚೆಗೆ ಮುಕ್ತಾಯ ಗೊಂಡಿದೆ.
ಬೆಂಗಳೂರು ಹಾಗೂ ಗೋವಾದಲ್ಲಿ ಸುಮಾರು 65 ದಿನಗಳ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಟೀಸರ್ ಸಹ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕಿ ನಿಶಾ ವಿನೋದ್ ಪ್ರಭಾಕರ್ ತಿಳಿಸಿದ್ದಾರೆ.
ವಿನೋದ್ ಪ್ರಭಾಕರ್ ಹಾಗೂ ಲೂಸ್ ಮಾದ ಯೋಗಿ ಮೊದಲ ಬಾರಿಗೆ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಜೊತೆಗೆ ಪಾರ್ವತಿ ಅರುಣ್ ಅಭಿನಯಿಸಿದ್ದಾರೆ. ಹಿರಿಯ ನಟರಾದ ದೇವರಾಜ್, ರವಿಶಂಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಈ ಚಿತ್ರದ ಆಕ್ಷನ್ ಸನ್ನಿವೇಶಗಳು ಮೈನವಿರೇಳಿಸುವಂತಿವೆ. ಐದು ಸಾಹಸ ಸನ್ನಿವೇಶಗಳನ್ನು ಡಿಫರೆಂಟ್ ಡ್ಯಾನಿ, ವಿನೋದ್, ಚೇತನ್ ಡಿಸೋಜ, ಅರ್ಜುನ್ ರಾಜ್ , ಕುಂಗ್ಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ.
ಒಂದು ಸಾಹಸ ಸನ್ನಿವೇಶಕ್ಕಾಗಿ ವಿನೋದ್ ಪ್ರಭಾಕರ್ ಹತ್ತು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಗಾಗಿ ಮರಿ ಟೈಗರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಪ್ರಮೋದ್ ಕುಮಾರ್ ಈ ಚಿತ್ರದ ನಿರ್ದೇಶಕರು. ವಿಜೇತ್ ಕೃಷ್ಣ ಸಂಗೀತ ನಿರ್ದೇಶನ, ಸುಜ್ಞಾನ್ ಛಾಯಾಗ್ರಹಣ, ಮುರಳಿ, ಮೋಹನ್ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.
ಅಲ್ಲದೆ ‘ಟೈಗರ್ ಟಾಕೀಸ್’ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಸಹ ಆರಂಭ ಮಾಡಿದ್ದು, ‘ಲಂಕಾಸುರ’ ಚಿತ್ರದ ಕುರಿತಾದ ಎಲ್ಲಾ ಮಾಹಿತಿ ಈ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ ಎಂದು ವಿನೋದ್ ಪ್ರಭಾಕರ್ ಮಾಹಿತಿ ನೀಡಿದ್ದಾರೆ.