
ರೇಟಿಂಗ್ : 4/5
ನಿರ್ಮಾಣ : ಕೆ.ವಿ.ಸತ್ಯಪ್ರಕಾಶ್, ಹೇಮಂತ್ ಗೌಡ ಕೆ.ಎಸ್.
ನಿರ್ದೇಶನ : ಜಡೇಶ್ ಕೆ.ಹಂಪಿ
ಸಮಾನತೆಗಾಗಿ ಹೋರಾಟದ ಕಿಚ್ಚು

ದಲಿತ ಸಮುದಾಯದಿಂದ ಬಂದು ಐಪಿಎಸ್ ಅಧಿಕಾರಿಯಾಗಿದ್ದ ಸುಭಾಷ್ ಭರಣಿ ಅವರು ಬಳ್ಳಾರಿ ಎಸ್ಪಿ ಆಗಿದ್ದಾಗ, ದೇವದಾಸಿ ಪದ್ಧತಿ ಮತ್ತು ಹೆಣ್ಣು ಮಕ್ಕಳ ಮೇಲೆ ಬಣ್ಣದ ನೀರು ಎರಚುವ ಹೀನ ಆಚರಣೆಗಳನ್ನು ನಿಷೇಧಿಸುವಂತೆ ಮಾಡಿದ್ದೂ ಅಲ್ಲದೆ. ಅದಕ್ಕೆ ಕಾರಣರಾದವರನ್ನು ಮಟ್ಟ ಹಾಕಿದ್ದರು.
ಆಗ ಅದು ಸಾಧಾರಣ ವಿಷಯವೇ ಅಲ್ಲ; ಜಮೀನ್ದಾರಿ ಪದ್ಧತಿ ಮತ್ತು ಅದರ ದರ್ಪಗಳನ್ನು ಅಭಿವ್ಯಕ್ತಿಸುವಲ್ಲಿ ಆಂಧ್ರ ಗಡಿಯಲ್ಲಿದ್ದ ಬಳ್ಳಾರಿ ಮುಂಚೂಣಿಯಲ್ಲಿತ್ತು.
ವಿದ್ಯೆ ಕಲಿತರೆ ಸಮಾಜ-ಸಂವಿಧಾನ ಅರ್ಥೈಸಿ ಉತ್ತಮ ಬಾಳು ಬದುಕುವುದಕ್ಕೆ ಅವಕಾಶವಾಗುತ್ತದೆ ಮತ್ತು ಅಧಿಕಾರದಿಂದ ದುಂಡಾವರ್ತಿ ಮಾಡುವವರನ್ನು (ಎಂಥಾ ಪ್ರಭಾವಿ ಆದರೂ) ಮಟ್ಟ ಹಾಕಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.
ದೇಶದ ಎರಡು ಅತ್ಯಂತ ದೊಡ್ಡ ಮೂಲಭೂತ ಸಮಸ್ಯೆಗಳೆಂದರೆ, ಮೊದಲನೇಯದು ಅಸ್ಪೃಶ್ಯತೆಯ ಆಚರಣೆ. ಎರಡನೇಯದು ಹಕ್ಕನ್ನು ಕಸಿದುಕೊಳ್ಳುವುದು..
ಎರಡರ ಮೇಲೂ ಬೆಳಕು ಚೆಲ್ಲುವ ಈ ಚಿತ್ರದಲ್ಲಿ ತಾಂತ್ರಿಕತೆ ಮತ್ತು ಮಾತುಗಾರಿಕೆಯ ವೇಗ ಎಲ್ಲಿಯೂ ಪ್ರೇಕ್ಷಕನನ್ನು ಅಲುಗಾಡಲು ಬಿಡುವುದಿಲ್ಲ ಎಂಬುದು ಹೆಚ್ಚುಗಾರಿಕೆ.
ಶ್ರೇಷ್ಠತೆಯ ವ್ಯಸನದಿಂದ ಮತ್ತು ದಬ್ಬಾಳಿಕೆ ನಡೆಸುವ ಮನೋ ವ್ಯಸನದ ಅಸ್ವಸ್ಥ ಮನಸ್ಥಿತಿಯಿಂದ ದುರ್ಬಲರ ಮೇಲೆ ಅಟ್ಟಹಾಸ ಮಾಡುತ್ತಾ ಮೆರೆಯುವ ಖಳರನ್ನು ಧ್ವಂಸ ಮಾಡುವ ವ್ಯಕ್ತಿ ಇಲ್ಲಿ ಇತಿಹಾಸವನ್ನು ಮೆರೆಸುವವನಂತೆ ಕಾಣುತ್ತಾನೆ.
ಹಾಗಾಗಿ ಕೊಡ್ಲಿ ರಾಚಯ್ಯ ಎಂಬುದು ಕೇವಲ ವ್ಯಕ್ತಿಯಲ್ಲ; ಆತ ದಮನಿತ ಸಮಾಜದ ಪ್ರಜ್ವಲ ಪ್ರತಿನಿಧಿ. ರಾಚಯ್ಯನ ಮಗಳು ರಥ ಮುಟ್ಟಿದಳು ಎಂಬ ಕಾರಣಕ್ಕೆ ರಥವನ್ನೇ ಸುಟ್ಟು ಹಾಕುವ ಹೀನ ಮನಸ್ಥಿತಿಗಳು ಬಹಳ ಕಾಲದ ನಂತರವಾದರೂ ಟೀಕೆ ಮತ್ತು ಆಕ್ರೋಶಕ್ಕೆ ಗುರಿಯಾಗುವುದು ದಮನಿತ ಸಮಾಜದ ವಿಜಯೋತ್ಸವದಂತೆ ಕಾಣುತ್ತದೆ.
ಎರಡು ಎಕರೆ ಭೂಮಿಗಾಗಿ ಹೋರಾಟ ನಡೆಸುವ ರಾಚಯ್ಯ, ಮಗಳ ವಿದ್ಯಾಭ್ಯಾಸಕ್ಕೂ ತುಡಿಯುವುದು ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡ ನಿಲುವು. ಆದರೂ ಆತ ಕೊಡಲಿಯಂತಹ ಶಸ್ತ್ರ ಹಿಡಿಯ ಬೇಕಾಗಿ ಬರುವುದು ಸಾಮಾಜಿಕ ನೆಲೆಯಲ್ಲಿನ ದೌರ್ಜನ್ಯ ಮತ್ತು ಅಸಮಾನತೆಯ ಶಾಪದಿಂದಲೇ..
ಅವ್ವನ ಕೈ ತುತ್ತು ಆತನ ಸಾಮರ್ಥ್ಯ. ಆದರೆ ಅವ್ವನನ್ನೇ ಮುಗಿಸುವ ಖಳರ ಅಟ್ಟಹಾಸ ಆತನನ್ನು ಶಾಂತಿಯ ಹೊಸ್ತಿಲನ್ನು ದಾಟುವಂತೆ ಮಾಡುವುದು ವಿಪರ್ಯಾಸ. ತನ್ನವರೇ ದ್ರೋಹ ಬಗೆಯುವ (ನೀರಿಗೆ ಪಾಚಿ ವೈರಿ) ಕ್ರೌರ್ಯದ ನಡುವೆಯೂ ಆತ ಬದುಕುಳಿಯುವುದು ಅಪ್ರತಿಮ ಎದೆಗಾರಿಕೆ ಮತ್ತು ಸಂಯಮದಿಂದ.
ಒಬ್ಬ ಸ್ಟಾರ್ ನಟನಾಗಿ ಚಪ್ಪಲಿ ಹಾರ ಹಾಕಿಸಿಕೊಳ್ಳುವ ಮಟ್ಟಕ್ಕೆ ಪಾತ್ರದಲ್ಲಿ ತಲ್ಲೀನತೆ ಪಡೆದಿರುವ ವಿಜಯಕುಮಾರ್ ನಿಜವಾಗಿ ದಮನಿತ ಸಮುದಾಯದ ಪ್ರತಿನಿಧಿಯಾಗೇ ಕಾಣುತ್ತಾರೆ.

‘ಸಾಹಸ’ದ ಮೂಲಕವೇ ಚಿತ್ರರಂಗಕ್ಕೆ ಬಂದ ವಿಜಯಕುಮಾರ್ ಆಕ್ರೋಶಭರಿತನಾಗಿ ಅಷ್ಟು ಜನರನ್ನು ಹೊಡೆದು ಹಾಕುವಾಗ ನೈಜತೆ ಕಾಣುವುದೇ ಈ ಚಿತ್ರದ ಹೈಲೈಟ್. ಮುಖ ಮತ್ತು ಕಣ್ಣಿನ ಕಿಚ್ಚು ಹೊಡೆದಾಟದಲ್ಲೂ ಅಭಿವ್ಯಕ್ತಿ ಪಡೆದಿರುವುದರಿಂದ ಅದು ಸಾಧ್ಯ..
ಅದೂ ಅಲ್ಲದೆ ವಿಜಯ್ ಕೋಟು ಧರಿಸುವಾಗ ಸಂವಿಧಾನ ಮತ್ತು ಬಾಬಾ ಸಾಹೇಬರನ್ನು ಮೈಮೇಲೆ ಹೊದ್ದಂತೆ ಕಾಣುತ್ತಾರೆ.
ನಿರ್ದೇಶಕ ಜಡೇಶ್ ಕೆ.ಹಂಪಿ ಸಿಕ್ಕ ಅವಕಾಶವನ್ನು ಎಲ್ಲಿಯೂ ಸಡಿಲಗೊಳಿಸಿಲ್ಲ; ಸಾಮಾಜಿಕ ಸಮಸ್ಯೆಯನ್ನು ಕಮರ್ಷಿಯಲ್ ಗುಣಕ್ಕೆ ಒಗ್ಗಿಸುವ ಅಪರಿಮಿತ ಶಕ್ತಿ ಅವರಲ್ಲಿದೆ. ಹಾಗಾಗಿ ಯಾವ ಪಾತ್ರ ಮತ್ತು ಸನ್ನಿವೇಶ ಕೂಡ ಬೋರ್ ಎನಿಸುವುದಿಲ್ಲ.

ಅದಕ್ಕೆ ಮತ್ತೊಂದು ಕಾರಣ ಚಿತ್ರದ ಬೆಂಕಿಯಂತಹ ಸಂಭಾಷಣೆ. ಮಾಸ್ತಿ ಮತ್ತು ಇತರರು ಶಕ್ತಿಯ ಅರಿವು ಮಾಡಿಕೊಟ್ಟಿದ್ದಾರೆ.
ಸಾಕವ್ವ ಉಮಾಶ್ರೀ ಪಾತ್ರವನ್ನು ನುಂಗಿ ಹಾಕಿದ್ದಾರೆ. ಅಚ್ಚರಿ ಎಂಬಂತೆ ರಚಿತಾ ರಾಮ್ ತಾನೊಬ್ಬ ಅಪ್ರತಿಮ ಕಲಾವಿದೆ ಎಂಬುದನ್ನು ನಿಂಗವ್ವನ ಪಾತ್ರದ ಮೂಲಕ ಸಾಬೀತು ಪಡಿಸಿದ್ದಾರೆ. ಹಾಗೆಯೇ ವಿಜಯಕುಮಾರ್ ಪುತ್ರಿ ರಿತನ್ಯ, ಭಾಗ್ಯ ಪಾತ್ರದಲ್ಲಿ ಸಹನೆಯ ಪೊಲೀಸ್ ಆಗಿ ಮಿಂಚಿದ್ದಾರೆ.
ಸಂಯಮದ ಖಳನ ಪಾತ್ರದಲ್ಲಿ ರಾಜ್ ಬಿ.ಶೆಟ್ಟಿ ಅವರದು ಅದ್ಭುತ ಅಭಿನಯ ಎಂದು ಹೇಳಲೇ ಬೇಕಿಲ್ಲ. ರಾಕೇಶ್ ಅಡಿಗ ಖಳ ನಟನಾಗಿಯೂ ಮಿಂಚಬಲ್ಲೆ ಎಂದು ತೋರಿದ್ದಾರೆ.
ಬಿ.ಸುರೇಶ್, ಗೋಪಾಲಕೃಷ್ಣ ದೇಶಪಾಂಡೆ, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಮಿತ್ರ, ಸಂಪತ್ ಕುಮಾರ್ ಮೈತ್ರಿ, ಸನತ್ ಹೀಗೆ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಲ್ಲೇ ಜೀವಿಸಿರುವುದು ವಿಶೇಷ..
ಸ್ವಾಮಿ ಜೆ.ಗೌಡ ಛಾಯಾಗ್ರಹಣ ಚಿತ್ರದ ಮೆರುಗನ್ನು ಹೆಚ್ಚಿಸಿದರೆ, ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರ ಮುಗಿದ ನಂತರವೂ ಅದೇ ಚಮತ್ಕಾರಿಕ ತನ್ಮಯತೆ ನೀಡುವಂತೆ ಅಬ್ಬರಿಸುತ್ತದೆ.
