
* ಜನವರಿ 29 ಮುಖ್ಯಮಂತ್ರಿಗಳಿಂದ ಉದ್ಘಾಟನೆ *
* ಜನವರಿ 30 ರಿಂದ ಫೆಬ್ರವರಿ 6ರವರೆಗೆ ಚಿತ್ರರಸಿಕರಿಗೆ ರಸದೌತಣ *
* ರಾಜಾಜಿನಗರದ ಲುಲು ಮಾಲ್ ನ 11 ಪರದೆಗಳಲ್ಲಿ ಪ್ರದರ್ಶನ *
ಚಿತ್ರರಸಿಕರಿಗೆ ರಸದೌತಣ ಬಡಿಸುವ ’17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜನವರಿ 29 ರಂದು ಸಂಜೆ ವಿಧಾನಸೌಧದ ಮುಂಭಾಗ (ಪೂರ್ವದ್ವಾರ ಮೆಟ್ಟಿಲು) ಚಾಲನೆ ದೊರೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಿನಿಮೋತ್ಸವ ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ದೇಶ – ವಿದೇಶದ ಅತಿಥಿಗಳು ಸಹ ಜೊತೆಗಿರಲಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಬಿ.ಬಿ.ಕಾವೇರಿ, ಆಯುಕ್ತ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಕಲಾತ್ಮಕ ನಿರ್ದೇಶಕ ಪಿ.ಬಿ.ಮುರಳಿ ಈ ಕುರಿತ ವಿವರಗಳನ್ನು ನೀಡಿದರು.

ಬೆಂಗಳೂರಿನ ರಾಜಾಜಿನಗರದ ಲುಲುಮಾಲ್‌ನಲ್ಲಿರುವ, ಸಿನಿಪೊಲಿಸ್‌ನ 11 ಸ್ಕ್ರೀನ್‌ಗಳಲ್ಲಿ ಜನವರಿ 30 ರಿಂದ ಫೆಬ್ರವರಿ 6 ರವರೆಗೆ ಚಲನಚಿತ್ರಗಳ ಪ್ರದರ್ಶನಗಳು ನಡೆಯಲಿವೆ.
ಲುಲುಮಾಲ್ ಜೊತೆಗೆ, ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಸಹ ಚಲನಚಿತ್ರ ಪ್ರದರ್ಶನಗಳು ನಡೆಯಲಿದ್ದು, ಇದರಲ್ಲಿ 65 ದೇಶಗಳ ಸುಮಾರು 225 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಆಯಾ ದೇಶದ ಸ್ಥಿತಿ-ಗತಿ, ಜನ ಜೀವನ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು ಭಾಗವಹಿಸಿರುವುದು ಈ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ವೈಶಿಷ್ಟ್ಯ ವಾಗಿದೆ.
ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಕೊರಿಯಾ, ಆಷ್ಟ್ರಿಯಾ, ಬೆಲ್ಜಿಯಂ, ನೆದರ್ಲೆಂಡ್, ಫಿನ್‌ಲೆಂಡ್, ಇರಾನ್, ಅರ್ಜೆಂಟೈನಾ, ಕೆನಡಾ, ಡೆನ್‌ಮಾರ್ಕ್, ಗ್ರೀಸ್, ರಷ್ಯಾ, ಫಿಲಿಫೈನ್ಸ್, ಪೋಲೆಂಡ್, ರೊಮಾನಿಯಾ, ಜಪಾನ್, ಸ್ಪೇನ್, ಇಂಡೋನೇಷಿಯಾ, ಇಟಲಿ, ಆಸ್ಟ್ರೇಲಿಯಾ, ಚೀನಾ, ಕಿರ್ಗಿಸ್ತಾನ್ ಮೊದಲಾದ ದೇಶಗಳ ಅತ್ಯುತ್ತಮ ಚಲನಚಿತ್ರಗಳು ಸಮಕಾಲೀನ ವಿಶ್ವಸಿನಿಮಾ ವಿಭಾಗದ ಮೂಲಕ ‘ಬೆಂಗಳೂರಿನಲ್ಲಿ ಜಗತ್ತು’ ಎಂಬ ಶೀರ್ಷಿಕೆಯಡಿ ಪ್ರದರ್ಶನಗೊಳ್ಳಲಿವೆ.

‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್ ನ ಜೊತೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯುವುದು ವಾರ್ತಾ ಇಲಾಖೆ ಉಸ್ತುವಾರಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯವಾಗಿದೆ.
ಮುಖ್ಯಮಂತ್ರಿಗಳ ಆಶಯದಂತೆಯೇ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಸಾಲಿನೊಂದಿಗೆ ʼಸ್ತ್ರೀ ಸಂವೇದನೆ, ಸಮಾನತೆಯ ದನಿʼ ಎಂಬ ಟ್ಯಾಗ್ ಲೈನ್ ಹೊಂದಿರುವ ಧ್ಯೇಯ ವಾಕ್ಯದೊಂದಿಗೆ ಈ ಚಿತ್ರೋತ್ಸವ ಆಚರಿಸಲಾಗುತ್ತಿದೆ.
ಚಲನ ಚಿತ್ರೋತ್ಸವ ನಡೆಯುವ ಪ್ರತಿ ದಿನವೂ ಚಲನಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕತೆ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ವಿಚಾರ ಸಂಕಿರಣಗಳು ನಡೆಯಲಿವೆ.
