
* ಸಬ್ಸಿಡಿ ಭಾಗ್ಯ ಕೊಡಿ:
ಸರ್ಕಾರಕ್ಕೆ ಹಂಸಲೇಖ ಮನವಿ *
* ವೀರ ಕಂಬಳ ಟ್ರೈಲರ್, ಹಾಡು ಬಿಡುಗಡೆ *
ಗುಣಮಟ್ಟದ ಚಿತ್ರಗಳಿಗೆ ಸರ್ಕಾರ ಸಹಾಯಧನ ನೀಡುವ ಪರಂಪರೆಯಿಂದ ನಿರ್ಮಾಪಕ ಕೊಂಚ ಉಸಿರಾಡುತ್ತಿದ್ದಾನೆ. ದಯವಿಟ್ಟು ಅದನ್ನು ನಿಲ್ಲಿಸಬೇಡಿ..
ಹೀಗೆಂದು ಮನವಿ ಮಾಡಿದವರು ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು..!

‘2026 ನೇ ಸಾಲಿನಿಂದ ಕನ್ನಡ ಚಿತ್ರಗಳಿಗೆ ಸರ್ಕಾರ ನೀಡುತ್ತಿರುವ ಸಹಾಯ ಧನಕ್ಕೆ ಕತ್ತರಿ ಬೀಳಲಿದೆ..’
ಹೀಗೊಂದು ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಸುದ್ದಿ ಬಂದಿದೆ. ‘ಸಬ್ಸಿಡಿ ಕನ್ನಡ ಚಿತ್ರರಂಗದ ಉಸಿರು; ದಯವಿಟ್ಟು ಅದನ್ನು ನಿಲ್ಲಿಸುವುದು ಬೇಡ ಎಂದು ಮನವಿ ಮಾಡಿದರು.
ತಮ್ಮ ನಿರ್ದೇಶನದ ‘ವೀರ ಕಂಬಳ’ ಚಿತ್ರದ ಹಾಡುಗಳ ಬಿಡುಗಡೆಯಲ್ಲಿ ರಾಜೇಂದ್ರ ಸಿಂಗ್ ಬಾಬು ಈ ಮನವಿ ಮಾಡಿದರು.

ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ನಾದಬ್ರಹ್ಮ ಹಂಸಲೇಖ ಅವರು, ಇದು ಭಾಗ್ಯಗಳನ್ನು ನೀಡುತ್ತಿರುವ ಸರ್ಕಾರ. ದಯವಿಟ್ಟು ಸಬ್ಸಿಡಿ ಭಾಗ್ಯ ಕೊಡಿ ; ಅದನ್ನು ನಿಲ್ಲಿಸಬೇಡಿ ಎಂದರು.
ತುಳುನಾಡಿನ ಜನ ಜೀವನದೊಂದಿಗೆ ಹೊಸೆದುಕೊಂಡಿರುವ ಕಂಬಳ ಎಂಬುದು ಒಂದು ಧೀಮಂತ ಪರಂಪರೆ. ಏಕೆಂದರೆ ಅದೊಂದು ಅದ್ವಿತೀಯ ಸಾಹಸ. ಅಂತಹ ಕ್ರೀಡೆಯ ಮೇಲೆ ಬೆಳಕು ಚೆಲ್ಲುವ ‘ವೀರ ಕಂಬಳ’ ಸಾಕಷ್ಟು ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಚಿತ್ರವಾಗಿದೆ ಎಂಬ ವಿವರ ನೀಡಿದರು ರಾಜೇಂದ್ರ ಸಿಂಗ್ ಬಾಬು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಂಬಳದ ಸುತ್ತಾ ಘಟಿಸುವ ರೋಚಕ ಕಥನವಿರುವ ವೀರ ಕಂಬಳದ ಟ್ರೈಲರ್ ಅನ್ನು ನಾದಬ್ರಹ್ಮ ಹಂಸಲೇಖ ಬಿಡುಗಡೆಗೊಳಿಸಿದರು.
ಇದೇ ವೇಳೆ ತುಳು ಆವೃತ್ತಿಯಾದ ಬಿರ್ದ್‌ದ ಕಂಬುಳದ ಟ್ರೈಲರ್ ಕೂಡಾ ಅನಾವರಣಗೊಂಡಿತು.

ಕಲೆ ಎಂಬುದು ಮುಪ್ಪಿಲ್ಲದ, ಸುಕ್ಕಿಲ್ಲದ ಕನ್ಯೆಯಿದ್ದಂತೆ. ಅದು ಮನುಷ್ಯನನ್ನು ಸದಾ ಜೀವಂತಿಕೆಯಿಂದ ಉಳಿಸುತ್ತದೆ ಎಂದರು ಹಂಸಲೇಖ.
ವೀರತ್ವದ ಸಂಕೇತದಂತಿರುವ ಕಂಬಳಕ್ಕೆ ಕಲೆಯೆಂಬ ಕನ್ಯೆ ಕೊಟ್ಟ ತಾಂಬೂಲವೇ `ವೀರ ಕಂಬಳ’.
ತುಳುನಾಡಿನ ನೆಲದ ಘಮಲು ಹೊಂದಿರುವ ಕಂಬಳವನ್ನು ದೃಶ್ಯ ಮಾಧ್ಯಮಕ್ಕೆ ಒಗ್ಗಿಸುವ ಸಾಹಸ ಮಾಡಿರುವ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಇಡೀ ತಂಡಕ್ಕೆ ಶುಭವಾಗಲಿ ಎಂದರು.
ಚಿತ್ರದಲ್ಲಿ ಆದಿತ್ಯ, ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಧಿಕಾ ನಾರಾಯಣ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಈ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ.

ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನವಿದೆ. ಆರ್.ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ಅವರ ವಸ್ತ್ರವಿನ್ಯಾಸವಿರುವ ವೀರ ಕಂಬಳ ಫೆಬ್ರವರಿ 27ರಂದು ತೆರೆ ಕಾಣಲಿದೆ ಎಂಬ ವಿವರ ಬಂದವು.
ನಿರ್ಮಾಪಕರಾದ ಅರುಣ್ ರೈ, ವಿನಿತಾ ವಿಜಯ್ ಕುಮಾರ್ ರೆಡ್ಡಿ, ಸಾಹಿತಿ ವಿಜಯಕುಮಾರ್ ಕೊಡಿಯಾಲ್ ಬೈಲ್, ನಟ ಆದಿತ್ಯ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಹಿರಿಯ ನಟಿ ಉಷಾ ಭಂಡಾರಿ, ನಟಿ ದಿವ್ಯ ವಿಸ್ಮೀತಾ ಮೊದಲಾದವರು ಹಾಜರಿದ್ದರು.
