
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಬದುಕಿಗೆ ಕಾರಣವಾದ ಮೆಜೆಸ್ಟಿಕ್ ಚಿತ್ರವು 25 ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಚಿತ್ರ.
ಇದೀಗ ಅದೇ ಹೆಸರಿನ ಮತ್ತೊಂದು ಚಿತ್ರ ನಿರ್ಮಾಣವಾಗಿದೆ. ಈ ಚಿತ್ರದಲ್ಲೂ ಈಗಿನ ಮೆಜೆಸ್ಟಿಕ್ ಏರಿಯಾದಲ್ಲಿ ಏನೇನೆಲ್ಲ ವ್ಯವಹಾರಗಳು, ದಂಧೆಗಳು ನಡೆಯುತ್ತವೆ ಎಂಬುದನ್ನು ನೈಜವಾಗಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಲಾಗಿದೆ.
ಅಮ್ಮಾ ಎಂಟರ್‌ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರದಲ್ಲಿ ಹಿರಿಯ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಹಿರಿಯ ನಟಿ ಶೃತಿ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೆ ಮತ್ತೊಬ್ಬ ಹಿರಿಯ ನಟಿ ಮಾಲಾಶ್ರೀ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭರತ್ ಕುಮಾರ್ ಜೋಡಿಯಾಗಿ ಸಂಹಿತಾ ವಿನ್ಯಾ ಕಾಣಿಸಿಕೊಂಡಿದ್ದಾರೆ, ಈಗಿನ ಮೆಜೆಸ್ಟಿಕ್ ಏರಿಯಾದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು ಮತ್ತು ಈಗಲೂ ನಡೆಯುವ ರೌಡಿಸಂ ಬಗ್ಗೆ ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ನಿರ್ದೇಶರು ಹೇಳಿದ್ದಾರೆ.
ಚಿತ್ರದ ಟ್ರೈಲರ್‌ನ್ನು ನಿರ್ಮಾಪಕರ ಪತ್ನಿ ನಿರ್ಮಲಮ್ಮ ಈಚೆಗೆ ಬಿಡುಗಡೆ ಮಾಡಿದರು. ಮಾರ್ಚ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ಹೆಚ್.ಆನಂದಪ್ಪ ಸಿದ್ದತೆ ಮಾಡಿಕೊಂಡಿದ್ದಾರೆ.

ವೀನಸ್ ಮೂರ್ತಿ ಛಾಯಾಗ್ರಹಣ, ವಿನು ಮನಸು ಸಂಗೀತ, ಚಿನ್ನಯ್ಯ ಸಾಹಸ, ವಿಜಯಕುಮಾರ್ ಸಹ ನಿರ್ದೇಶನ ಚಿತ್ರಕ್ಕಿದೆ.
