ಆರ್ಟಿಕಲ್ 370 ಚಿತ್ರವಿಮರ್ಶೆ
ದೇಶಭಕ್ತಿ ಭಾವುಕ ಅಭಿವ್ಯಕ್ತಿ
ಭಾರತೀಯ ಸೈನ್ಯದಲ್ಲಿ ದುಡಿಯುವ ಪ್ರತಿಯೊಬ್ಬ ಯೋಧನಲ್ಲಿ ದೇಶಭಕ್ತಿ ಇಡೀ ಮೈಮನ ಆವರಿಸಿರುತ್ತದೆ.. ದೇಶಕ್ಕಾಗಿ ದುಡಿಯುವಾಗ ಖಾಸಗಿ ಬದುಕು ಅನೇಕ ಕಷ್ಟ ಕೋಟಲೆಗಳಿಂದ ನರಳುತ್ತದೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆಯುವ ಮುನ್ನ ಅಲ್ಲಿನ ಜನರು ಎದುರಿಸುತ್ತಿದ್ದ ದುರ್ಬರ ಬದುಕು
ಕಾಣ ಸಿಗುತ್ತದೆ..
ಹೀಗೆ ಸಾಕಷ್ಟು ವಿಷಯಗಳ ಸುತ್ತ ಕಥೆ ಹೆಣೆಯಲಾಗಿರುವ ‘ವಿಧಿ 370’ಯಲ್ಲಿ ಕಾಣುವುದು ಯಥೇಚ್ಛ ದೇಶಭಕ್ತಿ ಮತ್ತು ಮುಗ್ಧ ಜನರ ನರಕ ಸದೃಶ ಬದುಕು..
ಹಳ್ಳಿಯಿಂದ ದಿಲ್ಲಿವರೆಗೆ ಎಂಬಂತೆ ಕರ್ನಾಟಕದಿಂದ ಕಾಶ್ಮೀರದವರೆಗೆ ಅಮಾಯಕರ ಬದುಕು ಮತ್ತು ದುಷ್ಕೃತ್ಯ ನಡೆಸುವ ವಿಚ್ಛಿದ್ರಕಾರಕ ಶಕ್ತಿಗಳ ಅಟ್ಟಹಾಸದ ಚಿತ್ರಣ ಇರುವ ಚಿತ್ರದ ಪ್ರತಿ ನೆಲೆಯಲ್ಲಿ ಕಾಣುವುದು ದೇಶ ಭಕ್ತಿಯೇ.
ಕೇವಲ ಒಂದು ವಿಷಯದ ಸುತ್ತ ಕೇಂದ್ರೀಕೃತವಾಗದ ಕಥೆಯಲ್ಲಿ ಬಂದು ಹೋಗುವ ಪಾತ್ರಗಳಿಗೆ ಲೆಕ್ಕವೇ ಇಲ್ಲ; ಹಾಗೆಯೇ ವಿಷಯಾಂತರವಾಗುವ ಸನ್ನಿವೇಶಗಳೂ ಅಷ್ಟೇ.
ನಿರ್ದೇಶಕ ಕೆ.ಶಂಕರ್ ಭಾರೀ ಎನಿಸುವ ವಿಷಯವನ್ನು ಗಂಭೀರವಾಗಿ ಹೇಳಲು ಹೋಗಿಲ್ಲ; ಬದಲಿಗೆ ಅತ್ತ ಇತ್ತ ಸುತ್ತ ಮುತ್ತ ಎಂಬಂತೆ ಗಮನ ಹರಿಸುವುದರಿಂದ ಅವರು ನಿಜಕ್ಕೂ ಏನು ಹೇಳ ಹೊರಟಿದ್ದಾರೆ ಎಂಬುದು ಪ್ರಶ್ನೆಯಾಗುತ್ತದೆ.
ಆದರೆ ಕಾಶ್ಮೀರದ ಕ್ರೌರ್ಯದ ಒಂದು ಮುಖವನ್ನು ಅನಾವರಣ ಮಾಡುವುದರಿಂದ ಪ್ರೇಕ್ಷಕ ಆಸಕ್ತಿಯಿಂದ ಕುತೂಹಲ ಕಾಯ್ದುಕೊಳ್ಳುವುದು ಸಾಧ್ಯವಾಗಿದೆ. ಉಗ್ರಗಾಮಿ ಚಟುವಟಿಕೆ ನಡೆಯುವ ಸನ್ನಿವೇಶಗಳಲ್ಲಿ ಹಿಂದಿ ಭಾಷೆ ಯಥೇಚ್ಛ ಬಳಕೆಯಾಗಿದೆ.
ಮುಖ್ಯ ಪಾತ್ರದಲ್ಲಿರುವ ಶಶಿಕುಮಾರ್ ಅವರ ಹೀರೋಯಿಸಂ ಇಲ್ಲಿ ಕಾಣುವುದಿಲ್ಲ; ಶೃತಿ ಅವರಿಗೆ ಗಂಭೀರ ಕಾಯಿಲೆ ಇದ್ದರೂ ಅದು ವ್ಯಕ್ತವಾಗುವುದಿಲ್ಲ. ಗಣೇಶ್ ರಾವ್, ದೊಡ್ಡ ರಂಗೇಗೌಡ, ಯತಿರಾಜ್, ದಿವಂಗತ ಶಿವರಾಮ್ ಹಾಗೂ ಲಕ್ಷ್ಮಣ್ ಅವರ ಪಾತ್ರಗಳು ಎದ್ದು ಕಾಣುತ್ತದೆ. ನಿರ್ಮಾಪಕ ಸಿ.ರಮೇಶ್ ಕೂಡ ಒಂದು ಪಾತ್ರ ನಿರ್ವಹಿಸಿರುವುದು ವಿಶೇಷ.
ವಿನು ಮನಸ್ಸು ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್.