ಕವಿ, ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ಭಾವ ಭಾಗೀರಥಿ ಹಾಗೂ ಗೀತ ಸರಸ್ವತಿ ಎಂಬ ಗೀತಗುಚ್ಚ ಬಿಡುಗಡೆ ಕಂಡಿದೆ..
ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಅವರ ನೆನಪಿನಲ್ಲಿ ಹೊರಬಂದಿರುವ ‘ಕೊಳಲು ನೀನಿರೇ….ಹಾಡು..’ ಎಂಬ ಹಾಡನ್ನು ಸಹ ಈ ಆಲ್ಬಂ ಒಳಗೊಂಡಿದೆ.
ಕನ್ನಡದ ಚಲನಚಿತ್ರ ಗೀತ ಸಾಹಿತ್ಯದಲ್ಲಿ ವಿಶೇಷ ಹೆಸರು ಮಾಡಿರುವ ದೊಡ್ಡರಂಗೇಗೌಡರು ಇಲ್ಲಿಯವರೆಗೂ 500ಕ್ಕೂ ಅಧಿಕ ಗೀತೆಗಳನ್ನು ರಚಿಸಿದ್ದಾರೆ. ಈಗ 20 ಗೀತೆಗಳಿರುವ ಭಾವ ಭಾಗೀರಥಿ ಎಂಬ ಗೀತ ಗುಚ್ಚವನ್ನು ಅಭಿನಂದನ್ ಆಡಿಯೋ ಮೂಲಕ ಪರಮ್ ಗುಬ್ಬಿ ಹೊರತಂದಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಈ ಆಲ್ಬಂಗಳಿಗೆ ಸಂಗೀತ ನೀಡಿದ್ದಾರೆ.
ಈ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಡಾ.ಮಂಜುನಾಥ್, ರೇವಣಪ್ಪ,
ಶ್ರೀನಿವಾಸ್, ಸಂಗೀತ ನಿರ್ದೇಶಕ ವೀರಸಮರ್ಥ್, ಗಾಯಕರಾದ ಅಜಯ್ ವಾರಿಯರ್, ಬದ್ರಿಪ್ರಸಾದ್,
ಕಲಾವಿದರಾದ ಮಾಲತಿ ಶ್ರೀ, ಇಳಾ ವಿಟ್ಲಾ ಹಾಗೂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗೀತ ಸರಸ್ವತಿ ಆಲ್ಬಂ ಜೊತೆಗೆ ಹಸಿರು ಮೂಡಲಿ ಎಂಬ ಕೃತಿಯನ್ನು ಸಹ ಬಿಡುಗಡೆಗೊಳಿಸಲಾಯಿತು.
ಮೀನಾ ಹರೀಶ್ ನಿರ್ಮಾಣದಲ್ಲಿ ಹೊರಬಂದಿರುವ ಈ ಎರಡೂ ಆಲ್ಬಂಗಳಿಗೆ ಪರಮ್‌ಗುಬ್ಬಿ ನಿರ್ದೇಶನ ಮಾಡಿದ್ದಾರೆ. ವಿಶೇಷವಾಗಿ ಡಾ.ಪುನೀತ್ ರಾಜಕುಮಾರ್ ಭಾವಚಿತ್ರಗಳನ್ನು ಒಳಗೊಂಡ ಕೊಳಲು ನೀನಿರೇ, ದನಿಯು ನಾನಿರೇ ಎಂಬ ಸುಂದರ
ಗೀತೆಯೂ ಈ ಆಲ್ಬಮ್‌ನಲ್ಲಿದ್ದು, ಆ ಗೀತೆಯನ್ನು ಪುನೀತ್ ರಾಜ್ ಕುಮಾರ್ ಅವರಿಗೇ ಸಮರ್ಪಣೆ ಮಾಡಲಾಗಿದೆ.
ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಅವರು ಡಾ.ದೊಡ್ಡರಂಗೇಗೌಡರ ಸಾಹಿತ್ಯ ಕೃಷಿ ಹಾಗೂ ಸಾಹಸಗಳ ಬಗ್ಗೆ ಮಾತನಾಡಿದರು.