Snehapriya.com

April 14, 2025

admin

ಅಮರಾವತಿ ಪೋಲಿಸ್ ಸ್ಟೇಷನ್ ಥ್ರಿಲ್ಲರ್ ಚಿತ್ರದ ಟೀಸರ್ ಬಿಡುಗಡೆ

Social Share :

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಹೆಸರು ಅಮರಾವತಿ ಪೊಲೀಸ್ ಸ್ಟೇಷನ್. ಚಿತ್ರದ ಟೀಸರ್ ಈಚೆಗೆ ಬಿಡುಗಡೆಗೊಂಡಿತು.

ಕಡಲ ತೀರದ ಕಾಲ್ಪನಿಕ ಊರು ಅಮರಾವತಿ ಎಂಬಲ್ಲಿ ನಡೆಯುವ ವ್ಯಕ್ತಿಗಳ ನಿಗೂಢ ನಾಪತ್ತೆ ಮತ್ತು ಕೊಲೆಯ ಪ್ರಕರಣಗಳನ್ನು ಬೇಧಿಸುವ ಕಥಾ ಹಂದರವನ್ನು ಹೊಂದಿರುವ ಚಿತ್ರವನ್ನು ಪುನೀತ್ ಅರಸೀಕೆರೆ ನಿರ್ದೇಶನ ಮಾಡಿದ್ದಾರೆ.

ಧರ್ಮ ಕೀರ್ತಿರಾಜ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರ ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು,
ಚಿತ್ರದ ಟೀಸರ್ ಈಚೆಗೆ ಬಿಡುಗಡೆ ಕಂಡಿತು.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಆವರಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಜನಪ್ರಿಯ ಪ್ರಚಾರಕರ್ತ ನಾಗೇಂದ್ರ ಟೀಸರ್ ಬಿಡುಗಡೆಗೊಳಿಸಿದರು.

ಅಮರಾವತಿ ಎಂಬ ಊರಿನಲ್ಲಿ ಊರ ಗೌಡನ ನಿಗೂಢ ನಾಪತ್ತೆ ಸುದ್ದಿಯಾಗುತ್ತದೆ. ಜೊತೆಗೆ ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ಬಂದ ಪೊಲೀಸ್ ಕೂಡ ನಾಪತ್ತೆಯಾಗುವ ಘಟನೆ ನಡೆಯುತ್ತದೆ.

ಇಂತಹ ನಿಗೂಢ ಘಟನೆಗಳನ್ನು ಬೇಧಿಸುವ ಕಥೆಯಲ್ಲಿ ಕಾಣುವುದು ಕ್ಷಣ ಕ್ಷಣವೂ ಕುತೂಹಲ. ನಾಗಾ ಸಾಧುಗಳ ಕಥೆ ಕೂಡ ಚಿತ್ರದಲ್ಲಿದೆ ಎಂಬ ವಿವರ ನೀಡಿತು ಚಿತ್ರತಂಡ.

ಯುವನಟ ಧರ್ಮ ಕೀರ್ತಿರಾಜ್ ಈ ಚಿತ್ರದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ನಟಿಸಿದ್ದು, ಗುರುರಾಜ್ ಜಗ್ಗೇಶ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧರ್ಮ ಕೀರ್ತಿರಾಜ್ ಜೋಡಿಯಾಗಿ ವೇದ್ವಿಕ ಕಾಣಿಸಿಕೊಂಡಿದ್ದಾರೆ ಎಂಬ ವಿವರಗಳು ಬಂದವು.

ಮಫ್ತಿಯಲ್ಲಿರುವ ಪೊಲೀಸ್ ಪಾತ್ರ ನನ್ನದು.ಸಿನಿಮಾದಲ್ಲಿ ಸಾಹಸ ದೃಶ್ಯ ಗಳು ಬಹಳ ವಿಶೇಷವಾಗಿದೆ ಎಂದರು ಧರ್ಮ ಕೀರ್ತಿರಾಜ್.

ಚಿತ್ರಕ್ಕೆ ಈಗಾಗಲೇ 36 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಶೇ.60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಕ್ಲೈಮ್ಯಾಕ್ಸ್ ಮತ್ತು ಒಂದು ಹಾಡಿನ ಭಾಗ ಮಾತ್ರವೇ ಬಾಕಿ ಇದೆ ಎಂಬ ವಿವರ ನೀಡಿದವರು ನಿರ್ದೇಶಕ ಪುನೀತ್.

ಅಲ್ಲದೆ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಮಾರ್ಚ್ 17ರಂದು ಚಿತ್ರದ ಪ್ರೇಮ ಗೀತೆ ಬಿಡುಗಡೆ ಮಾಡುವ ಆಶಯವಿದೆ ಎಂದರು.

ಪುನೀತ್ ಅರಸೀಕೆರೆ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ಪಿ. ಪಿ. ಪವರ್ ಪಿಕ್ಚರ್ಸ್ ಲಾಂಛನದಲ್ಲಿ ಕೆ.ಆರ್.ಪ್ರದೀಪ್ ಕಮಲಪುರ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಗೀತಾ ಅಂಜನರೆಡ್ಡಿ ಸಹ ನಿರ್ಮಾಪಕಿಯಾಗಿದ್ದಾರೆ.

ಹಿರಿಯನಟಿ ಭವ್ಯ, ಸಾಧು ಕೋಕಿಲ, ಕಾಕ್ರೋಚ್ ಸುಧಿ, ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಮುಂತಾದವರು ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.

ರೋಣದ ಬಕ್ಕೇಶ್ ಸಂಗೀತ ನಿರ್ದೇಶನ, ಗೌತಮ್ ಮಟ್ಟಿ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಸಾಹಸ, ವೆಂಕಿ ಯುವಿಡಿ ಸಂಕಲನ, ಆರ್ಯ ಶಿವು ಕರಗುಂದ ಸಂಭಾಷಣೆ ಚಿತ್ರಕ್ಕಿದೆ.

Social Share :

ವಿಷ್ಣು ಮಂಚ್ ಕಣ್ಣಪ್ಪ ಹಾಡು ಶಿವ ಶಿವ ಶಂಕರ ಬಿಡುಗಡೆ..

Social Share :

* ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಮೋಹನ್ ಬಾಬು ನಿರ್ಮಾಣದ, ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಚಿತ್ರದ ‘ಶಿವ ಶಿವ ಶಂಕರ’ ಹಾಡಿನ‌ ಬಿಡುಗಡೆ*

* ಭಾರತಿ ವಿಷ್ಣುವರ್ಧನ್, ಸುಮಲತ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಸಮಾರಂಭದಲ್ಲಿ ಉಪಸ್ಥಿತಿ *

ತೆಲುಗು ಚಿತ್ರರಂಗದ ಹೆಸರಾಂತ ನಟ ಮೋಹನ್ ಬಾಬು ನಿರ್ಮಾಣದ ಮತ್ತು ಅವರ ಪುತ್ರ ವಿಷ್ಣು ಮಂಚ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕಣ್ಣಪ್ಪ’ ಚಿತ್ರದ ಹಾಡು ಬಿಡುಗಡೆಗೊಂಡಿದೆ.

ಈಚೆಗೆ ಬೆಂಗಳೂರಿನ ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ‘ಶಿವ ಶಿವ ಶಂಕರ’ ಎಂಬ ಭಕ್ತಿ ಪ್ರಧಾನ ಹಾಡು ಬಿಡುಗಡೆಗೊಂಡಿದೆ.

ಎರಡನೇ ‘ಮಹಾ ಭಾರತ’ ಧಾರಾವಾಹಿ ಖ್ಯಾತಿಯ ಮುಖೇಶ್ ಕುಮಾರ್ ಸಿಂಗ್ ನಿರ್ದೇಶನವಿರುವ ‘ಕಣ್ಣಪ್ಪ’ ಚಿತ್ರದ ಹಾಡನ್ನು ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ನಟ ಮೋಹನ್ ಬಾಬು, ವಿಷ್ಣು ಮಂಚು, ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಜೊತೆಗೆ ಡಾ.ಭಾರತಿ ವಿಷ್ಣುವರ್ಧನ್, ಸುಮಲತಾ ಅಂಬರೀಶ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಣ್ಣಪ್ಪ ಅಂದ ಕೂಡಲೆ ನೆನಪಿಗೆ ಬರುವುದು ಕನ್ನಡದ ವರನಟ ಡಾ.ರಾಜಕುಮಾರ್ ಮತ್ತು ಅವರ ಅಮೋಘ ನಟನೆಯ ‘ಬೇಡರ ಕಣ್ಣಪ್ಪ’ ಕಣ್ಣ ಮುಂದೆ ಬರುತ್ತದೆ ಎಂದರು ನಟ, ನಿರ್ಮಾಪಕ ಮೋಹನ್ ಬಾಬು.

ಇನ್ನು ಆತ್ಮೀಯ ಗೆಳೆಯರಾಗಿದ್ದ ವಿಷ್ಣುವರ್ಧನ್ ಹಾಗು ಅಂಬರೀಶ್ ಅವರ ಪತ್ನಿಯರಾದ ಭಾರತಿ ವಿಷ್ಣುವರ್ಧನ್ ಹಾಗೂ ಸುಮಲತಾ ಅಂಬರೀಶ್ ಅವರ ಹಾಜರಾತಿ ಅತ್ಯಂತ ಖುಷಿ ಕೊಟ್ಟಿದೆ ಎಂದರು ಮೋಹನ್ ಬಾಬು.

ರಾಕ್ ಲೈನ್ ವೆಂಕಟೇಶ್ ಅವರು ಕರ್ನಾಟಕದಲ್ಲಿ ‘ಕಣ್ಣಪ್ಪ’ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ಕಲಾವಿದರು ಅಭಿನಯಿಸಿರುವುದು ಚಿತ್ರದ ಹೆಚ್ಚುಗಾರಿಕೆಯಾಗಿದೆ ಎಂದರು ಮೋಹನ್ ಬಾಬು.

ವಿಷ್ಣು ಮಂಚ್ ಕೂಡ ರವಿಶಂಕರ್ ಗುರೂಜಿ ಹಾಗೂ ಇತರ ಗಣ್ಯರಿಗೆ ಧನ್ಯವಾದ ಅರ್ಪಿಸಿದರು. ಮೋಹನ್ ಬಾಬು ಹಾಗೂ ನಮ್ಮ ಯಜಮಾನರ ಒಡನಾಟ ಉತ್ತಮವಾಗಿತ್ತು. ಆದ್ದರಿಂದಲೇ ಮಗನಿಗೆ ವಿಷ್ಣು ಎಂಬ ಹೆಸರನ್ನು ಇಟ್ಟಿದ್ದಾರೆ. ಅವರ ಚಿತ್ರಕ್ಕೆ ಒಳಿತಾಗಲಿ ಎಂದರು ಭಾರತಿ ವಿಷ್ಣುವರ್ಧನ್.

ತೆಲುಗಿನಲ್ಲಿ ಮೋಹನ್ ಬಾಬು ಅವರ ಜೊತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವೆ. ಅಲ್ಲದೆ ಅಂಬರೀಶ್ ಅವರಿಗೆ ಮೋಹನ್ ಬಾಬು ಅತ್ಯಂತ ಆಪ್ತರಾಗಿದ್ದರು. ಈಗ ಚಿತ್ರದ ಹಾಡು ಮತ್ತು ಚಿತ್ರವೂ ಯಶಸ್ವಿಯಾಗಲಿ ಎಂದರು ಸುಮಲತಾ.

ಚಿತ್ರವನ್ನು ಈಗಾಗಲೇ ನೋಡಿರುವೆ; ಈ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ ಎಂದು ಕರ್ನಾಟಕದ ವಿತರಣೆ ಹಕ್ಕು ಪಡೆದುಕೊಂಡಿರುವ ರಾಕ್ ಲೈನ್ ವೆಂಕಟೇಶ್ ತಿಳಿಸಿದರು.

ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್, ನಟ ಅರ್ಪಿತ್ ರಂಕ,
ಹಾಡು ಬರೆದಿರುವ ರಾಮಜೋಗಿ ಶಾಸ್ತ್ರಿ ಹಾಗೂ ಸಂಗೀತ ನಿರ್ದೇಶಕ ಸ್ಟೀಫನ್ ದೇವಸ್ಸಿ ಚಿತ್ರದ ಕುರಿತು ಮಾತನಾಡಿದರು. ಹೆಸಾರಾಂತ ಗಾಯಕ ವಿಜಯ್ ಪ್ರಕಾಶ್ ಈ ಹಾಡನ್ನು ಹಾಡಿರುವುದು ವಿಶೇಷ.

Social Share :

ಕೆ.ಮಂಜು ನಿರ್ಮಾಣ @ 50 ವಿಷ್ಣುಪ್ರಿಯಾ ಈ ವಾರ ಬಿಡುಗಡೆ

Social Share :


* ನೈಜ ಘಟನೆಯ ಅಮರಕಾವ್ಯ *

* ಶ್ರೇಯಸ್ ಕೆ.ಮಂಜು ನಟನೆ *

* ಮೂಲ ಕಥೆಗಾರ್ತಿ‌ ಸಿಂಧುಶ್ರೀ *

ಗಂಡುಗಲಿ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ವಿಷ್ಣು ಪ್ರಿಯಾ’ ಚಿತ್ರ ಈ ವಾರ ಅಂದರೆ ಫೆಬ್ರವರಿ 21ರಂದು ಬಿಡುಗಡೆ ಕಾಣುತ್ತಿದೆ.

ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ಜೊತೆಗೆ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಕಾಣಿಸಿಕೊಂಡಿದ್ದು, ಈ ಅಮರ ಪ್ರೇಮ ಕಾವ್ಯ ಪ್ರೇಕ್ಷಕರಿಗೆ ನವಿರು ಪ್ರೇಮದ ರಸದೌತಣ ಬಡಿಸಲು ಸಜ್ಜಾಗಿದೆ.

ಮಲಯಾಳಂ ಮೂಲದ ಹೆಸರಾಂತ ನಿರ್ದೇಶಕ ವಿ.ಕೆ.ಪ್ರಕಾಶ್ ನಿರ್ದೇಶನದ ಈ ಚಿತ್ರ ಹಲವು ಕಾರಣಗಳಿಗೆ ಕುತೂಹಲ ಹುಟ್ಟಿಸಿದೆ.

90ರ ದಶಕದ ಪ್ರೇಮಕಥೆಯನ್ನು ಮಲೆನಾಡು ಹಸಿರು ಸಿಂಗಾರದ ಜೊತೆ ಜೋಡಿಸಿ ಕಣ್ಮನ ಸೆಳೆಯುತ್ತದೆ ತಣಿಯುವಂತೆ ಮಾಡಿರುವುದು ಚಿತ್ರದ ಮೊದಲ ಸಾರ್ಥಕತೆ ಎಂಬುದು ನಿರ್ಮಾಪಕ ಕೆ.ಮಂಜು ಅವರ ನಂಬಿಕೆ.

ಈಚೆಗೆ ನಡೆದ ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಈ ಚಿತ್ರದ ಮೂಲ ಕಥೆಗಾರ್ತಿ ಸಿಂಧು ಶ್ರೀ ಎಂಬುದಾಗಿ ಪರಿಚಯಿಸಿತು ಚಿತ್ರತಂಡ.

ಈ ಚಿತ್ರದ ಸಲುವಾಗಿ ಲೇಖಕರಿಂದ ಕಥೆಗಳನ್ನು ಆಹ್ವಾನ ಮಾಡಿದಾಗ ಸುಮಾರು 55 ಕಥೆಗಳು ಬಂದಿದ್ದವು. ಅದರಲ್ಲಿ ಅಥಣಿ ಮೂಲದ ಸಿಂಧು ಶ್ರೀ ಅವರ ಕಥೆ ಆಯ್ಕೆಯಾಯಿತು ಎಂಬ ವಿವರ ಕೊಟ್ಟರು ಕೆ.ಮಂಜು.

ಮರ್ಯಾದೆಗೇಡು ಹತ್ಯೆ ಪ್ರಕರಣಗಳು ಕಣ್ಣ ಮುಂದೆ ನಡೆದಾಗ ಆ ಕುರಿತು ಕಥೆ ಬರೆಯಬೇಕು ಎಂದು ಕೊಂಡು ಬರೆದ ಕಥೆ ಇದು. ಕೆ.ಮಂಜು ಅವರು ನಿಮ್ಮ ಕಥೆ ಆಯ್ಕೆಯಾಗಿದೆ ಎಂದು ಕರೆ ಮಾಡಿದಾಗ ನಿಜಕ್ಕೂ ನಂಬಲು ಸಾಧ್ಯವಾಗಲಿಲ್ಲ ಎಂಬ ವಿವರಣೆ ಬಂತು ಕಥೆಗಾರ್ತಿ ಸಿಂಧು ಶ್ರೀ ಅವರಿಂದ.

ಈ ಚಿತ್ರದಲ್ಲಿನ ಅನುಭವಗಳು ಸದಾ ನೆನಪುಗಳಾಗಿ ಕಾಡಬಹುದು. ಏಕೆಂದರೆ ಇದು ಇಷ್ಟ ಪಟ್ಟು ಮಾಡಿರುವ ಸಿನಿಮಾ ಎಂದರು ಶ್ರೇಯಸ್ ‌ಮಂಜು.

ಈ ಚಿತ್ರದಲ್ಲಿ ಜೋಡಿಯಾಗಿರುವ ಶ್ರೇಯಸ್ ಹಾಗೂ ಪ್ರಿಯಾ ವಾರಿಯರ್ ಅವರದು ಅನುಪಮ ಜೋಡಿ ಎಂಬಷ್ಟು ನೈಜವಾಗಿ ಬಂದಿದೆ. ಕೆ.ಮಂಜು ಅವರಿಗೆ ಪ್ರಚಾರ ಕೂಡ ಅತ್ಯುತ್ತಮವಾಗಿ ಮಾಡುವುದು ತಿಳಿದಿದೆ ಎಂದವರು ನಿರ್ದೇಶಕ ವಿ.ಕೆ.ಪ್ರಕಾಶ್.

ನಟಿ ಪ್ರಿಯಾ ವಾರಿಯರ್ ಅವರಿಗೆ ಇದು ಮೊದಲ ಕನ್ನಡ ಚಿತ್ರ ಮತ್ತು ಬಹಳವೇ ಇಷ್ಟವಾದ ಚಿತ್ರ ಎಂದು ಹೇಳಿಕೊಂಡರು.


ಬಿಂದ್ಯಾ ಮೂವೀಸ್ ಕೆ. ಮಂಜು ಸಿನಿಮಾಸ್ ಮೂಲಕ ಈ ಚಿತ್ರವನ್ನು ಡಾ. ಕೆ.ಮಂಜು‌ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಇದು ಮಂಜು ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ 50 ನೇ ಚಿತ್ರ ಎಂಬುದು ವಿಶೇಷ.(ಬೇರೆ ಭಾಷೆಯ 2 ಚಿತ್ರ ಸೇರಿ). ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಜೀವನದಲ್ಲಿ ಪ್ರೀತಿಯ ಮಹತ್ವ ಏನೆಂಬುದನ್ನು ನವೀನ ಶೈಲಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ.
ತೆಲುಗಿನಲ್ಲಿ ಹೆಸರು ಮಾಡಿರುವ ಗೋಪಿಸುಂದರ್ ಈ ಚಿತ್ರಕ್ಕೆ
ಸಂಗೀತ ನಿರ್ದೇಶಕ.

ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ಅವರಂತಹ ಮಾಗಿದ ನಟರು ಚಿತ್ರದಲ್ಲಿ ತಂದೆಯ ಪಾತ್ರಗಳನ್ನು ಮಾಡಿದ್ದಾರೆ.

ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ.

Social Share :

ಮಲ್ಲು ಜಮಖಂಡಿ ವಿದ್ಯಾ ಗಣೇಶ್ ಫೆಬ್ರವರಿ 21ಚಿತ್ರ ಬಿಡುಗಡೆ..

Social Share :

ಉತ್ತರ ಕರ್ನಾಟಕ ಭಾಗದಲ್ಲಿ ರೀಲ್ಸ್ ಮೂಲಕ ಹೆಸರಾಗಿರುವ ಮಲ್ಲು ಜಮಖಂಡಿ ಈಗ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಅದು ವಿದ್ಯಾ ಗಣೇಶ್..!

ಇದೇ ವಾರ ಅಂದರೆ ಫೆಬ್ರವರಿ 21 ರಂದು ಬಿಡುಗಡೆ ಕಾಣುತ್ತಿರುವ ಈ ಚಿತ್ರದ ಪ್ರಚಾರದ ಸಲುವಾಗಿ ಕಳೆದ ವಾರ ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.

ಹಿರಿಯ ನಟ ರಮೇಶ್ ಭಟ್, ಜನಪ್ರಿಯ ನಟ ತಬಲಾನಾಣಿ ಸೇರಿದಂತೆ ಮಲ್ಲು ಜಮಖಂಡಿ, ಕಾಕ್ರೋಚ್ ಸುಧಿ, ನಟಿ ಸುರಕ್ಷ ಕೈರಾ, ಸಂಭಾಷಣೆ ಬರೆದ ನಾಗೇಶ್, ನಿರ್ಮಾಪಕ ಚೇತನ್ ಹಾಗೂ ನಿರ್ದೇಶಕ ಉಮೇಶ್ ಚಂದ್ರ ವೇದಿಕೆಯ ಮೇಲಿದ್ದರು.

ಚಿತ್ರತಂಡದ ಪರವಾಗಿ ಮಾತನಾಡಿದ ನಟ ತಬಲ ನಾಣಿ, ಸಾಕಷ್ಟು ಪರಿಶ್ರಮ ಹಾಕಲಾಗಿದೆ. ಉತ್ತರ ಕರ್ನಾಟಕದ ಭಾಷೆ ಗಮನ ಸೆಳೆಯುತ್ತದೆ. ಅಲ್ಲಿ ಜಮಖಂಡಿ ಅವರು ಈಗಾಗಲೇ ಪ್ರಖ್ಯಾತರಾಗಿದ್ದಾರೆ ಎಂಬ ವಿವರ ನೀಡಿದರು.

ವೃತ್ತಿ ಜೀವನದ ಆರಂಭದ ದಿನಗಳನ್ನು ಮೆಲುಕು ಹಾಕುತ್ತಲೇ ಈ ಚಿತ್ರವೂ ಅನೇಕ ವಿಷಯಗಳಲ್ಲಿ ವರವಾಗಿರುವುದರ ಬಗ್ಗೆ ವಿವರ ನೀಡಿದವರು ನಟ ಕಾಕ್ರೋಚ್ ಸುಧಿ.

ಮಲ್ಲು ಜಮಖಂಡಿ ಹಾಗೂ ಸುರಕ್ಷಾ ಕೈರಾ ಪಾತ್ರಗಳ ಬಗ್ಗೆ ವಿವರ ನೀಡಿದರು. ಹಿರಿಯ ನಟ ರಮೇಶ್ ಭಟ್ ತಂಡದ ಸ್ಫೂರ್ತಿಯ ಬಗ್ಗೆ ಮಾತನಾಡಿದರು.

ತಾಯಿಯವರನ್ನು ಕಳೆದುಕೊಂಡ ದುಃಖದಲ್ಲಿ ಭಾವುಕರಾಗಿ ಮಾತನಾಡಿದವರು ನಿರ್ದೇಶಕ ಉಮೇಶ್ ಚಂದ್ರ. ಕಷ್ಟದ ದಿನಗಳಲ್ಲಿ ಸಾಕಿದ ಅವ್ವನಿಗೆ ಚಿತ್ರ ತೋರಿಸಲು ಸಾಧ್ಯವಾಗಿಲ್ಲ ಎಂದರು.

ಇದಕ್ಕೂ ಮೊದಲು ಚಿತ್ರದ ಟ್ರೈಲರ್ ಬಿಡುಗಡೆ ಕಂಡಿತು. ಮಲ್ಲು ಜಮಖಂಡಿ ಹಾಸ್ಯದ ಮೂಲಕ ಜನಪ್ರಿಯತೆ ಪಡೆದಿದ್ದರೂ ಚಿತ್ರದಲ್ಲಿ ಎಲ್ಲಾ ರೀತಿಯ ನಟನೆ ಹಾಗೂ ಸಾಹಸಗಳನ್ನು ಮಾಡಿದ್ದಾರೆ ಎಂಬ ವಿವರ ಕೊಟ್ಟರು ನಿರ್ದೇಶಕ ಉಮೇಶ್ ಚಂದ್ರ.

Social Share :

ಗಂಡಸ್ಸಿನ ಸೀಮಂತದಲ್ಲಿ ನಿಮಗೊಂದು ಸಿಹಿ ಸುದ್ದಿ..

Social Share :

ಜಗತ್ತಿನ ಹಾಗೂ ದೇಶದ ವಿವಿದೆಡೆ ಗಂಡಸರು ಗರ್ಭ ಧರಿಸಿದ ಬಗ್ಗೆ ಅಚ್ಚರಿಯ ವರದಿಗಳು ಮಾಧ್ಯಮಗಳಲ್ಲಿ ವಿಚಿತ್ರ ವರದಿಗಳಾಗಿ ಪ್ರಕಟಗೊಂಡಿವೆ.

ಅದೇ ಮಾದರಿಯ ಕಥೆ ಆಧರಿಸಿದ ‘ನಿಮಗೊಂದು ಸಿಹಿ ಸುದ್ದಿ’ ಎಂಬ ಚಿತ್ರವೊಂದು ಕನ್ನಡದಲ್ಲಿ ತಯಾರಾಗಿದ್ದು ಮುಂದಿನ ವಾರ ಅಂದರೆ ಫೆಬ್ರವರಿ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ.

ಇದಕ್ಕೂ ಮುನ್ನ ಕಳೆದ ವಾರ ಜಿ.ಟಿ.ಮಾಲ್ ನ ಎಂ.ಎಂ.ಬಿ ಲೆಗಾಸ್ಸಿ ಸಭಾಂಗಣದಲ್ಲಿ ಗರ್ಭಿಣಿಯಾಗಿದ್ದ ಗಂಡಸಿನ ಸೀಮಂತ ಮಾಡಿದ್ದಲ್ಲದೆ ಟ್ರೈಲರ್ ಬಿಡುಗಡೆ ಮಾಡಿತು ಚಿತ್ರತಂಡ.

ಯುವಕನೊಬ್ಬ ಗರ್ಭಧರಿಸಿ‌ ಅಚ್ಚರಿ ಹುಟ್ಟಿಸುವ ಕಥೆ ಇದು. ಫೆಬ್ರವರಿ 28ಕ್ಕೆ ‘ನಿಮಗೊಂದು ಸಿಹಿ ಸುದ್ದಿ’ ಬಿಡುಗಡೆ ಕಾಣಲಿದೆ ಎಂದು ಸೀಮಂತ ಮಾಡಿಸಿಕೊಂಡ ಮುಖ್ಯ ಪಾತ್ರಧಾರಿ ಮತ್ತು ನಿರ್ದೇಶಕ ರಘು ಭಟ್ ವಿವರ ನೀಡಿದರು.

ಮಹಾಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 28ರಂದು ಬಿಡುಗಡೆ ಕಾಣುತ್ತಿರುವ ಈ ಚಿತ್ರದ ಟ್ತೈಲರ್ ಕೂಡ ಗಮನ ಸೆಳೆಯಿತು.

ಮೊದಲಿಗೆ ರಘು ಭಟ್‍ ಅವರನ್ನು ವೇದಿಕೆಗೆ ಸಂಭ್ರಮದಿಂದ ಬರಮಾಡಿಕೊಂಡು, ಆ ನಂತರ ಅವರಿಗೆ ಸೀಮಂತ್ ಶಾಸ್ತ್ರ ಮಾಡಲಾಯಿತು. ನಂತರ ಚಿತ್ರತಂಡದವರೆಲ್ಲಾ ಸೇರಿ ಟ್ರೈಲರ್ ಬಿಡುಗಡೆ ಮಾಡಿದರು. ಇದೀಗ ಅದು ಯೂಟ್ಯೂಬ್‍ನ ಎ2 ಮ್ಯೂಸಿಕ್‍ ಚಾನಲ್‍ನಲ್ಲಿ ಲಭ್ಯವಿದೆ.

‘ಹಲವು ವರ್ಷಗಳ ಹಿಂದೆ ಪುರುಷರು ಗರ್ಭ ಧರಿಸಿದ ಚಿತ್ರವೊಂದು ಹಾಲಿವುಡ್‍ನಲ್ಲಿ ಬಂದಿತ್ತು. ಕೇರಳದಲ್ಲಿ ಇಂಥದ್ದೊಂದು ಘಟನೆ ಉದಾಹರಣೆಯಾಗಿದೆ. ಆದರೆ ಈ ಕಥೆ ಬೇರೆಯದೇ ಆಗಿದೆ ಎಂದರು ನಿರ್ದೇಶಕರು‌

ಒಂದು ವಿಭಿನ್ನ ಪರಿಕಲ್ಪನೆಯನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಹಾಗೆಯೇ ಉತ್ತಮ ಸಂದೇಶ ಕೂಡ ಇರುತ್ತದೆ ಎಂದರು.

ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಚಿತ್ರದಲ್ಲಿ ಹೆಚ್ಚು ಮನರಂಜನಾತ್ಮಕ ಗುಣಗಳಿರುವುದರಿಂದ ಪ್ರೇಕ್ಷಕರ ಆಶೀರ್ವಾದ ಸಿಗುವ ನಂಬಿಕೆಯೂ ಇದೆ ಎಂದರು ರಘುಭಟ್.

ಚಿತ್ರವನ್ನು ಅವ್ಯಕ್ತ ಸಿನಿಮಾಸ್ ಸಂಸ್ಥೆಯಡಿ ಹರೀಶ್ ಎನ್. ಗೌಡ ನಿರ್ಮಾಣ ಮಾಡಿದ್ದಾರೆ. ಹೊಸ ಪ್ರಯೋಗವಿರುವ ಚಿತ್ರ ಮಾಡುವ ಆಶಯವಿತ್ತು. ಅದು ಈಡೇರಿದೆ ಎಂದರು ನಿರ್ಮಾಪಕರು.

ಚಿತ್ರದಲ್ಲಿ ರಘು ಭಟ್ ಜೊತೆಗೆ ಕಾವ್ಯ ಶೆಟ್ಟಿ, ಹರಿಣಿ ಶ್ರೀಕಾಂತ್, ಪದ್ಮಿನಿ ನರಸಿಂಹನ್, ಸುಜಯ್ ಶಾಸ್ತ್ರಿ, ಶಿಲ್ಪಾ ಶೈಲೇಶ್, ಪ್ರಜ್ವಲ್ ಹಾಗೂ ಇತರರು ನಟಿಸಿದ್ದಾರೆ.

ಸಂಗೀತ ನೀಡಿರುವ ಅಶ್ವಿನ್ ಹೇಮಂತ್ ಹಾಗೂ ಸಾಹಿತ್ಯ ಬರೆದ
ಪ್ರಮೋದ್ ಮರವಂತೆ, ಸಂಕಲನಕಾರ ನವೀನ್ ತೇಜ್ ಹಾಗೂ ಛಾಯಾಗ್ರಾಹಕ
ಆನಂದ್ ಸಂದರೇಶ್ ಮಾತನಾಡಿದರು.

Social Share :

ರಾಜು ಜೇಮ್ಸ್ ಬಾಂಡ್ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5

ನಿರ್ಮಾಣ : ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್

ನಿರ್ದೇಶನ : ದೀಪಕ್ ಮಧುವನಹಳ್ಳಿ

ಹುಡುಗಾಟದ ಶೈಲಿ ಹಣದ ಥೈಲಿ..

ಇದು ಜೇಮ್ಸ್ ಬಾಂಡ್ ಚಿತ್ರಗಳ ಶೈಲಿ ಅಲ್ಲ; ಜೇಮ್ಸ್ ಬಾಂಡ್ ಮಾದರಿಯ ತಿರುವುಗಳನ್ನು ನೀಡಿ ಹುಡುಗಾಟ ಆಡುವ ಹುಡುಗನೊಬ್ಬನ ಕಥೆ.

ಬ್ಯಾಂಕುಗಳ ಸೇಫ್ಟಿ ಲಾಕರ್ ಗಳಿರುವುದು ಅದರ ಗ್ರಾಹಕರ ಹಣವನ್ನು ಸುರಕ್ಷಿತವಾಗಿಟ್ಟು ಕಾಪಾಡುವುದಕ್ಕೆ. ಆದರೆ ರಾಜಕಾರಣಿಗಳು ಅಲ್ಲಿಯೂ ತಮ್ಮ ವರಸೆ ತೋರಿ ಅನಧಿಕೃತ ಹಣ ಇಡುವ ಪ್ರಕರಣಗಳು ನಡೆದಿವೆ.

ಒಂದು ಬ್ಯಾಂಕ್ ದರೋಡೆ ಮತ್ತು ಅಲ್ಲಿನ ಹೆಚ್ಚುವರಿ ಹಣ ಮತ್ತು ಅದಕ್ಕಾಗಿ ನಡೆಯುವ ಟಿಟ್ ಫಾರ್ ಟ್ಯಾಟ್ ನಡೆಯೇ ಚಿತ್ರದ ಕಥಾವಸ್ತು..

‘ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳದಿರುವುದೇ ದೊಡ್ಡ ರಿಸ್ಕ್..’ ಈ ಪ್ರತಿಪಾದನೆ ಮಾಡುವ ಹುಡುಗ ರಾಜು ಮುಂದೆ ಕೈ ಹಾಕುವುದು ಬ್ಯಾಂಕ್ ದರೋಡೆಗೆ..

ಅದಕ್ಕೆ ಸಾಥ್ ನೀಡುವುದು ಆತನ ಮಾವ ಮತ್ತು ಟಿವಿ ಚಾನಲ್ ನ ಹುಡುಗಾಟದ ಗೆಳೆಯ. ಸುವರ್ಣಪುರ ಎಂಬ ಊರಿನ ರಾಜು ಎಂಬ ಹುಡುಗನ ದೊಡ್ಡ ಕನಸು ಎಂದರೆ ಊರಿನಲ್ಲಿರುವ ಬ್ಯಾಂಕ್ ನ ಮ್ಯಾನೇಜರ್ ಆಗುವುದು ಮತ್ತು ಅಡವಿಟ್ಟ ಅಮ್ಮ ಕಟ್ಟಿಸಿದ ಮನೆಯನ್ನು ಉಳಿಸಿಕೊಳ್ಳುವುದು.

ರಾಜುಗೆ ವಿದ್ಯಾ ಎಂಬ ಶಿಕ್ಷಕಿ ಗೆಳತಿ. ಆಕೆಯನ್ನು ಮದುವೆಯಾಗುವುದೇ ಮುಂದಿನ ಏಕೈಕ ಗುರಿ ಎಂದು ಬೀಗುವ ರಾಜು ಕಲ್ಪನೆಯ ಹಾಡುಗಳಿಗೆ (ವಿದೇಶ) ತೆರಳುವುದೇ ಅದ್ದೂರಿ.

ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅವರ ಪ್ರೀತಿಯ ಮನೆ ಉಳಿಸಿಕೊಳ್ಳಲು ಹೆಣಗುವ ರಾಜು, ಪ್ರೇಮಿಸಿದ ಹುಡುಗಿಯನ್ನೂ ಕಳೆದುಕೊಳ್ಳುವ ಭೀತಿ ಎದುರಾದಾಗ, ಬ್ಯಾಂಕ್ ದರೋಡೆಗೆ ಇಳಿಯುವುದೇ ರೋಚಕ. ಟಿಆರ್ ಪಿ ಟಿವಿ ಗೆಳೆಯ ಮತ್ತು ಮಾವನ ಜೊತೆ ಅದು ಅತಿ ಸುಲಭವಾಗಿ ನೆರವೇರುತ್ತದೆ ಎಂಬುದು ಅಚ್ಚರಿ.

ಆದರೆ ಬ್ಯಾಂಕ್ ನಲ್ಲಿ ದೊರೆಯುವುದು ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚಿನ ಹಣ. ಅದು ಹೇಗೆ ಸಂದಾಯವಾಯಿತು ಎಂಬ ಪ್ರಶ್ನೆ ಮೂಡುವುದರೊಳಗೆ ಎಂಎಲ್ ಎ ಭೂತಯ್ಯನ ಎಂಟ್ರಿ.

ಬ್ಯಾಂಕ್ ಮ್ಯಾನೇಜರ್ ಜೊತೆ ಅಜೆಸ್ಟ್ ಮೆಂಟ್ ಆಟದಲ್ಲಿ ಬ್ಯಾಂಕ್ ನಲ್ಲಿ ಅನಧಿಕೃತ ಹಣ ಇಟ್ಟಿರುವ ಭೂತಯ್ಯನಿಗೆ ಬ್ಯಾಂಕ್ ದರೋಡೆಯಿಂದ ಹಣ ಕಳೆದುಕೊಂಡು ಮುಳುಗಿ ಹೋದ ಅನುಭವವಾಗುತ್ತದೆ.

ಮುಂದೆ ನಡೆಯುವುದೇ ಬೇರೆ.. ರಾಜು ಪಾತ್ರದಲ್ಲಿ ಗುರು ನಂದನ್ ಫಸ್ಟ್ ರಾಂಕ್ ಗಿಂತ ಕೊಂಚ ಸುಧಾರಣೆ ಕಂಡಿದ್ದಾರೆ. ಟಿಆರ್ ಪಿ ಚಿಕ್ಕಣ್ಣ, ಮಾವ ಅಚ್ಯುತ್ ಕುಮಾರ್ , ಪೊಲೀಸ್ ಅಧಿಕಾರಿ ಜೈ ಜಗದೀಶ್ ಮತ್ತು ಭೂತಯ್ಯನಾಗಿ ರವಿಶಂಕರ್ ಪಾತ್ರಗಳು ಗಮನಾರ್ಹ.

ಸಾಧು ಕೋಕಿಲ, ತಬಲನಾಣಿ ಕೆಲವೆಡೆ ನಗಿಸುತ್ತಾರೆ. ಮೃದುಲಾ, ಮಂಜುನಾಥ ಹೆಗಡೆ ಪಾತ್ರಗಳೂ ಗಮನ ಸೆಳೆಯುತ್ತವೆ.

ಮನೋಹರ ಜೋಷಿ ಕ್ಯಾಮೆರಾ ಹಾಡುಗಳಲ್ಲಿ ಚೆಂದ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕೆ ಪೂರಕ.

Social Share :

ಪರಮೇಶ್ವರ್, ರಮ್ಯಾ ಬೆಂಬಲದಲ್ಲಿ ರಾಜು ಜೇಮ್ಸ್ ಬಾಂಡ್ ಮೋಹಕತೆ

Social Share :

* ಫೆಬ್ರವರಿ 14 ಬಿಡುಗಡೆ *

ಅದು ಅದ್ದೂರಿಯ ತಾಣ ಮತ್ತು‌ ಕಿಕ್ಕಿರಿದ ಜನ ಸಾಗರ. ಅದರ ನಡುವೆ ನಡೆದ ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ಗಣ್ಯರ ಮಹಾಪೂರ..

ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಮೋಹಕ ತಾರೆ ರಮ್ಯಾ ಭಾಗಿಯಾಗಿದ್ದ ಆ ಸಮಾರಂಭದಲ್ಲಿ ಚಿತ್ರತಂಡ ಸಂತಸದಲ್ಲಿ ಮಿಂದೆದ್ದಿತು.

ಅದು ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದ ಹಾಗೂ ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ರಾಜು ಜೇಮ್ಸ್ ಬಾಂಡ್’ ಚಿತ್ರದ ಪ್ರಚಾರದ ಭರಾಟೆಯಾಗಿತ್ತು.

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ, ನಟಿ ತಪಸ್ವಿನಿ ಶರ್ಮ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ‌ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

ಚಿತ್ರದ ತುಣುಕು ಹಾಗೂ ಹಾಡುಗಳನ್ನು ನೋಡಿದರೆ ಚಿತ್ರ ಯಶಸ್ವಿಯಾಗುವ ಎಲ್ಲಾ ಲಕ್ಷಣಗಳಿವೆ. ಹಾಗಾಗಿ ಚಿತ್ರ ಯಶಸ್ಸು ಕಾಣಲಿ ಎಂದು ಗೃಹ ಸಚಿವರು ಶುಭ ಕೋರಿದರು.

ಟ್ರೇಲರ್ ಹಾಗೂ ಹಾಡುಗಳು ಗಮನ ಸೆಳೆಯುವಂತಿವೆ. ಛಾಯಾಗ್ರಹಣ ಸೂಪರ್. ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿರುವ ಈ ಚಿತ್ರ ಭರ್ಜರಿ ಯಶಸ್ಸು ‌ಕಾಣಲಿ ಎಂದು ರಮ್ಯಾ ಹಾರೈಸಿದರು.

ಒಂದೊಳ್ಳೆ ಸಿನಿಮಾ ಮಾಡಿರುವ ಖುಷಿಯಿದೆ.‌ ದಯವಿಟ್ಟು ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ಕೋರಿದರು.

ಚಿತ್ರವನ್ನು ಜನರ ಮಡಿಲಿಗೆ ಹಾಕುತ್ತಿದ್ದೇವೆ. ಅವರ ಅಭಿಪ್ರಾಯಕ್ಕೆ ಕಾಯುತ್ತಿದ್ದೇವೆ ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ. ‌

ಮುಖ್ಯ ಪಾತ್ರದಲ್ಲಿ ನಟಿಸಿರುವ ಗುರುನಂದನ್ ಹಾಗೂ ಮೃದುಲ ಸಹ ಶುಕ್ರವಾರ ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಬೆಂಬಲವಿರಲಿ ಎಂಬ ಕೋರಿಕೆ ಸಲ್ಲಿಸಿದರು.

ನಾನು ಈ ಚಿತ್ರದಲ್ಲಿ ಟಿ.ಆರ್.ಪಿ ಎಂಬ ಖಾಸಗಿ ವಾಹಿನಿಯ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ನಟ ಚಿಕ್ಕಣ್ಣ ಹೇಳಿದರು‌. ನಟ ತಬಲ ನಾಣಿ, ಛಾಯಾಗ್ರಾಹಕ ಮನೋಹರ್ ಜೋಶಿ ಚಿತ್ರದ ಕುರಿತು ಮಾತನಾಡಿದರು.

ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಅವರ ಸಂಕಲನವಿರುವ ಚಿತ್ರಕ್ಕೆ ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ.

Social Share :

ಹೊಸ ತಂಡದ ಹೊಸ ಪ್ರಯತ್ನ 1990’s ಪ್ರೇಮ ಕಥೆ ಟ್ರೈಲರ್..

Social Share :

ಕನ್ನಡ ಸಿನಿಮಾ ಹೊಸಬರಿಗೆ ಯಾವೊತ್ತೂ ಪ್ರೋತ್ಸಾಹ ನೀಡುತ್ತದೆ. ಹಾಗಾಗಿ ಹೊಸಬರು ಪ್ರಯೋಗಶೀಲತೆ ಜೊತೆಗೆ ಹೊಸತನವನ್ನೂ ನೀಡುತ್ತಾ ಬಂದಿದ್ದಾರೆ..

ಈ ಚಿತ್ರತಂಡವೂ ಹೊಸಬರ ಪರಿಶ್ರಮ; ಪ್ರೋತ್ಸಾಹದ ಜೊತೆಗೆ ಹಿರಿಯರ ಆಶೀರ್ವಾದ ಪಡೆದಿದೆ. ಇದೇ 28 (ಫೆ.28)ರಂದು ತೆರೆಗೆ ಬರುತ್ತಿರುವ ಈ ಚಿತ್ರದ ಹೆಸರು 1990s..

90ರ ದಶಕದ ಪ್ರೇಮಕಥೆ ಹೇಳುವ ಲವ್ ಥ್ರಿಲ್ಲರ್ ಜಾನರ್ ನ ಈ ಚಿತ್ರದ ಟ್ರೈಲರ್ ಕಳೆದ ಸೋಮವಾರ ಬಿಡುಗಡೆಗೊಂಡಿತು. ಹಿರಿಯ ವಿದ್ವಾಂಸ ಡಾ.ನಾ.ಸೋಮಶೇಖರ್ ಹಾಗೂ ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಚಿತ್ರದ ಟ್ರೈಲರ್ ಅನಾವರಣ ಮಾಡಿದರು.

ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ಸಿ.ಎಂ.ನಂದಕುಮಾರ್ ನಿರ್ದೇಶಿಸಿರುವ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅರುಣ್ ಹಾಗೂ ರಾಣಿ ವರದ್ ನಾಯಕ ಇದ್ದಾರೆ.

‘1990s’ ಚಿತ್ರವು 90ರ ಕಾಲಘಟ್ಟದಲ್ಲಿ ನಡೆಯುವ ಪ್ರೇಮಕಥೆ. ಈಗಾಗಲೇ ಹಾಡು ಹಾಗೂ ಟೀಸರ್ ಮೂಲಕ ಗಮನ ಸೆಳೆದಿದೆ.

ಚಿತ್ರದಲ್ಲಿ ಮುದ್ದು ಮುದ್ದಾದ ದೃಶ್ಯಗಳಿವೆ. ಅದ್ಭುತ ಕ್ಯಾಮೆರಾ ಕೈ ಚಳಕ ಹಾಗೂ ಇರುವೆ ಸಾಲಿನ ದೃಶ್ಯ‌ ವೈಭವಗಳು ಪ್ರೇಕ್ಷಕನ ಮನಸ್ಸಿಗೆ ಮುದ ನೀಡಲು ಸಜ್ಜಾಗಿರುವುದು ಎದ್ದು ಕಾಣುತ್ತದೆ ಎಂದವರು ಥಟ್ ಅಂತಾ ಹೇಳಿ ಖ್ಯಾತಿಯ ವಿದ್ವಾಂಸ ಡಾ.ನಾ.ಸೋಮಶೇಖರ್.

ಚಿತ್ರಮಂದಿರಗಳ ಟೆಕೆಟ್ ತಾರತಮ್ಯದಿಂದ ಹೊಸಬರ ಚಿತ್ರಗಳು ಓಡದಂತಾಗಿದೆ ಎಂದ ಇಂದ್ರಜಿತ್ ಲಂಕೇಶ್, ವಾಣಿಜ್ಯ ಮಂಡಳಿ ಇಂತಹ ಸಮಸ್ಯೆಗಳ ಕಡೆ ಗಮನ ಕೊಡದೆ ಸುಮ್ಮನೆ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಕಥೆ 90ರ ಕಾಲಘಟ್ಟದ್ದು ಎಂಬುದು ನಿಜ. ಪ್ರೇಮ ಕಥೆಯೇ ಪ್ರಧಾನವಾದರೂ ಪ್ರೇಕ್ಷಕನಿಗೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು ನಿರ್ದೇಶಕ ಸಿ.ಎಂ.ನಂದಕುಮಾರ್.

ನಿರ್ಮಾಪಕ ಅರುಣ್ ಕುಮಾರ್, ನಟ ಅರುಣ್ ಹಾಗೂ ನಟಿ ರಾಣಿ ವರದ್ ಮಾತನಾಡಿದರು.

ನಟ ದೇವ್, ಸಂಗೀತ ನಿರ್ದೇಶಕ ಮಹಾರಾಜ, ಛಾಯಾಗ್ರಾಹಕ ಹಾಲೇಶ್, ಸಾಹಸ ನಿರ್ದೇಶಕ ಅಶೋಕ್, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್, ಸಂಕಲನಕಾರ ಕೃಷ್ಣ ಹಾಗೂ ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Social Share :

ಕೆ.ಮಂಜು ಹುಟ್ಟುಹಬ್ಬದ ಸಂಭ್ರಮ ಶ್ರೇಯಸ್ ವಿಷ್ಣು ಪ್ರಿಯಾ ಟ್ರೈಲರ್..

Social Share :

ಅಪ್ಪನ ಹುಟ್ಟುಹಬ್ಬದ ದಿನ ಮಗನ ಚಿತ್ರದ ಟ್ರೈಲರ್ ಬಿಡುಗಡೆ.. ಆ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರ ದಂಡು..

ಸೋಮವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ.ಮಾಲ್ ನ ಎಂಎಂಬಿ ಲೆಗೆಸ್ಸಿ ಸಭಾಂಗಣ ಗಣ್ಯರು ಅಭಿಮಾನಿಗಳಿಂದ ತುಂಬಿ ಹೋಗಿತ್ತು.

ಅದು ಗಂಡುಗಲಿ ನಿರ್ಮಾಪಕ ಕೆ.ಮಂಜು ಹುಟ್ಟುಹಬ್ಬದ ಸಂಭ್ರಮ ಮತ್ತು ಅವರ ಪುತ್ರ ಶ್ರೇಯಸ್ ಮಂಜು ಚಿತ್ರ ‘ವಿಷ್ಣು ಪ್ರಿಯಾ’ ಟ್ರೈಲರ್ ಬಿಡುಗಡೆ ಸಮಾರಂಭ.

ನಟ ಕಿಚ್ಚ ಸುದೀಪ್, ನಿರ್ದೇಶಕ ಎಸ್. ನಾರಾಯಣ್, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಿರ್ದೇಶಕ ಗುರು ದೇಶಪಾಂಡೆ ಹಾಗೂ ಇತರ ಗಣ್ಯರು ಹಾಜರಿದ್ದರು.

ಕೆ.ಮಂಜು ಮಾತನಾಡುವಾಗ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ನೆನೆದು ಭಾವುಕರಾದರು.. ಒರಟ, ಹುಂಬ ಎಂದು ಪ್ರೀತಿಯಿಂದಲೇ ಬೈಯುತ್ತಾ ಅವರು ಬೆಳೆಸಿದ ರೀತಿ ದೊಡ್ಡದು. ಅವರಿಂದಲೇ ನಾನು ಈ ಮಟ್ಟದಲ್ಲಿ ಬೆಳೆದಿದ್ದೇನೆ ಎನ್ನುತ್ತಾ ಅವರ ಸ್ಮರಣೆ ಮಾಡಿದರು.

ಕಿಚ್ಚ ಸುದೀಪ್ ತಡವಾಗಿ ಬಂದರೂ ಆನಂತರ ಇಡೀ ವೇದಿಕೆ ಆವರಿಸಿಕೊಂಡರು. ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು. ಎಸ್.ನಾರಾಯಣ್ ಕೆ.ಮಂಜು ಅವರ ದಿಟ್ಟತನದ ಗುಣಗಾನ ಮಾಡಿದರು. ಭಾರತಿ ವಿಷ್ಣುವರ್ಧನ್ ಹಾಗೂ ನಾಗತ್ತಿಹಳ್ಳಿ‌ ಚಂದ್ರಶೇಖರ್ ಚಿತ್ರಕ್ಕೆ ಹಾಗೂ ಕೆ.ಮಂಜು ಅವರಿಗೆ ಶುಭ ಹಾರೈಸಿದರು.

ಕೆ.ಮಂಜು ನಿರ್ಮಾಣದ, ಅವರ ಪುತ್ರ ಶ್ರೇಯಸ್ ಕೆ.ಮಂಜು, ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ನಟಿಸಿರುವ ‘ವಿಷ್ಣು ಪ್ರಿಯಾ’ ಒಂದು ಕ್ಯೂಟ್ ಲವ್ ಸ್ಟೋರಿ ಎಂಬುದು ಬಿಂಬಿತವಾಯಿತು.

ಪ್ರೀತಿ ಪ್ರೇಮದ ಕಥೆಗಳನ್ನು ಯಾರು ಮಾಡಿದರೂ ಅವರ ನಿರೂಪಣಾ ಶೈಲಿ ಚಿತ್ರದ ಗೆಲುವಿಗೆ ಕಾರಣವಾಗುತ್ತದೆ ಎಂದರು ಕಿಚ್ಚ ಸುದೀಪ್. ಒಬ್ಬ ವ್ಯಕ್ತಿ 50 ಚಿತ್ರಗಳನ್ನು ಮಾಡುವುದು ಸಾಮಾನ್ಯ ವಿಷಯವಲ್ಲ; ಕೆ.ಮಂಜು ಅವರ ಶ್ರದ್ಧೆ ಮಗನಲ್ಲೂ ಕಾಣುತ್ತಿದೆ ಎಂದರು.

ವಿಷ್ಣು ಎಂಬ ಹೆಸರಿನಲ್ಲಿಯೇ ಒಂದು ಶಕ್ತಿ ಇದೆ. ಅದು ಪ್ರೀತಿಯ ಭಾವವೂ ಹೌದು. ಸುಂದರ ಪರಿಸರ ಮತ್ತು ಪ್ರೇಮಿಗಳ ಆಹ್ಲಾದ ಪ್ರೇಮ್ ಗಳಲ್ಲಿ ಎದ್ದು ಕಾಣುತ್ತಿದೆ ಎಂದವರು ನಿರ್ದೇಶಕ ಎಸ್.ನಾರಾಯಣ್.

ಈ ಸಂದರ್ಭದಲ್ಲಿ ನಮ್ಮೆಜಮಾನ್ರು ಇದ್ದಿದ್ರೆ ಬಹಳವೇ ಖುಷಿ ಪಡುತ್ತಿದ್ದರು ಎಂದವರು ಡಾ.ಭಾರತಿ ವಿಷ್ಣುವರ್ಧನ್. ಆ ದೇವರು ಎಲ್ಲರಿಗೂ ಒಂದು ಅದೃಷ್ಟ ಅಂತಾ ಕೊಟ್ಟಿರ್ತಾನೆ. ಅದು ಶ್ರೇಯಸ್ ಗೆ ಬೇಗನೆ ಸಿಗಲಿ ಎಂದು ಹಾರೈಸಿದರು.

ನಿರ್ದೇಶಕರಾದ ಇಂದ್ರಜಿತ್ ಲಂಕೇಶ್, ಗುರು ದೇಶಪಾಂಡೆ, ನಟಿ ನಿಶ್ವಿಕಾ ನಾಯ್ಡು, ಚಿತ್ರದ ನಿರ್ದೇಶಕ ವಿ.ಕೆ. ಪ್ರಕಾಶ್ ಎಲ್ಲರೂ ತಂದೆ, ಮಗ ಇಬ್ಬರಿಗೂ ಶುಭಾಶಯ ಕೋರಿದರು.

ಫೆಬ್ರವರಿ 21ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿರುವ ‘ವಿಷ್ಣುಪ್ರಿಯಾ’ ತೊಂಭತ್ತರ ದಶಕದಲ್ಲಿ ನಡೆಯುವ ಅಪರೂಪದ ಪ್ರೇಮ ಕಥೆ. ಈಗಾಗಲೇ ‘ಸುಮ್ಮನೆ ಸುಮ್ಮನೆ’ ಸೇರಿ ಮೂರೂ ಹಾಡುಗಳು ಹಿಟ್ ಆಗಿವೆ.

ಮಲಯಾಳಂ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕ ವಿ.ಕೆ.ಪ್ರಕಾಶ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು. ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

ವಿನೋದ್ ಭಾರತಿ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ ಎಂಬ ಮಾಹಿತಿಗಳು ಬಂದವು.

Social Share :

ಮಲೆ ಮಾದೇಶ್ವರ ಕುರಿತು ಮುದ್ದುಗಾರ ಮಾದಪ್ಪ ಹಾಡು

Social Share :

ವರನಟ ಡಾ.ರಾಜ್ ಕುಮಾರ್ ಅವರು ಹಾಡಿದ್ದ ಪ್ರಸಿದ್ಧ ‘ಚೆಲ್ಲಾಟಗಾರ ಮಾದಪ್ಪ’ ಧ್ವನಿ ಸುರುಳಿಗೆ ಸಾಹಿತ್ಯ, ಸಂಗೀತ ನೀಡಿದ್ದ ಕಲಾಶ್ರೀ ಡಾ.ಜಯಶ್ರೀ ಅರವಿಂದ್ ಅವರ ಹೊಸ ದೃಶ್ಯ ಗೀತೆ ಬಿಡುಗಡೆಗೊಂಡಿದೆ.

‘ಮುದ್ದುಗಾರ ಮಾದಪ್ಪ’ ಹೆಸರಿನ ಜಾನಪದ ಶೈಲಿಯ ಸುಪ್ರಭಾತ ದೃಶ್ಯ ಗೀತೆಯನ್ನು ಶ್ರೀಮಲೆ ಆಡಿಯೋ ವಿಡಿಯೋ ಸಂಸ್ಥೆ ಹೊರತಂದಿದೆ.

ಈಚೆಗೆ ಈ ದೃಶ್ಯ ಗೀತೆಯನ್ನು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಬಿಡುಗಡೆ ಮಾಡಿದರು.

ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ನಡೆದ ಸಮಾರಂಭದ ಈ ಶುಭ ಸಂಧರ್ಭದಲ್ಲಿ ಸಂಗೀತ ನಿರ್ದೇಶಕಿ ಕಲಾಶ್ರೀ ಡಾ.ಜಯಶ್ರೀ ಅರವಿಂದ್, ಅರವಿಂದ್ ಕಿಗ್ಗಾಲ್, ಶ್ರೀ ಮಲೆ ಆಡಿಯೋ ವಿಡಿಯೋ ಸಂಸ್ಥೆಯ ಬಿ.ಅರುಣ್ ಕುಮಾರ್ ಸಿಂಗ್, ಎಂ.ಪ್ರಕಾಶ್, ಬಿ.ಹೇಮಾವತಿ ಮತ್ತು ತಲಕಾಡು ದೇವಸ್ಥಾನದ ಅಧ್ಯಕ್ಷ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಈ ಸೃಶ್ರಾವ್ಯವಾದ ಗೀತೆಯನ್ನು ಕನ್ನಡದ ಪ್ರಸಿದ್ಧ ಗಾಯಕರಾದ ಅಜಯ್ ವಾರಿಯರ್ ಮತ್ತು ಶ್ರೀರಕ್ಷಾ ಪ್ರಿಯರಂ ಅವರು ಹಾಡಿದ್ದಾರೆ, ಛಾಯಾಗ್ರಹಣ ಮತ್ತು ಸಂಕಲನ ಹೃಶಾಂಕ್ ಸಿಂಗ್ ಅವರದಾಗಿದೆ.

ಈ ಸುಮಧುರ ಗೀತೆಯನ್ನು ಕೇಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.                                                                                                                                                    https://youtu.be/cBgnb_bPxPY

Social Share :